ಟ್ರೆಕಿಂಗ್ಗೆ ಬಂದು ದುರ್ಗಮ ಕಮರಿಗೆ ಜಾರಿಬಿದ್ದ ಯುವಕ: ರಕ್ಷಣೆಗೆ ಬಂತು ವಾಯುಪಡೆ ಹೆಲಿಕಾಪ್ಟರ್
ಟ್ರಕ್ಕಿಂಗ್ಗೆ ಎಂದು ಬಂದಿದ್ದ ಯುವಕ ದುರ್ಗಮ ಪ್ರದೇಶಕ್ಕೆ ಜಾರಿ ಬಿದ್ದ ಘಟನೆ ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ: ಟ್ರಕ್ಕಿಂಗ್ಗೆ ಎಂದು ಬಂದಿದ್ದ ಯುವಕ ದುರ್ಗಮ ಪ್ರದೇಶಕ್ಕೆ ಜಾರಿ ಬಿದ್ದ ಘಟನೆ ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆದಿದೆ. ಯುವಕನನ್ನು ನಿಶಾಂತ್ ಗುಲ್ಲಾ ಎಂದು ಗುರುತಿಸಲಾಗಿದೆ. ಪ್ರಾಣರಕ್ಷಣೆಗೆ ಮೊರೆ ಇಡುತ್ತಿದ್ದ ನಿಶಾಂತ್ ಅವರನ್ನು ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಯಿತು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಹೆಲಿಕಾಪ್ಟರ್ನಿಂದ ಹಗ್ಗ ಬಿಟ್ಟು ಯುವಕನನ್ನು ಮೇಲೆತ್ತಲು ಪ್ರಯತ್ನಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಉಸ್ತುವಾರಿ ವಹಿಸಿದ್ದರು. ನಂದಿಗಿರಿಧಾಮದ ಬಳಿ ಟ್ರಕ್ಕಿಂಗ್ ವೇಳೆ ಯುವಕ ಕಾಲುಜಾರಿ ಕಮರಿಗೆ ಬಿದ್ದಿದ್ದ. ಯುವಕನ ರಕ್ಷಣೆಗೆ ಹೆಲಿಕಾಪ್ಟರ್ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಒಂದೆಡೆ ಕಲ್ಲುಬಂಡೆಗಳು ಮತ್ತೊಂದೆಡೆ ಗಿಡಮರಗಳು ಇರುವುದರಿಂದ ಹೆಲಿಕಾಪ್ಟರ್ ಯುವಕನ ಸಮೀಪ ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ಯುವಕ ಎಲ್ಲಿದ್ದಾನೆ ಎನ್ನುವುದನ್ನು ನಿರ್ದಿಷ್ಟವಾಗಿ ಪತ್ತೆಹಚ್ಚಲಾಗಿದ್ದು ಹೆಲಿಕಾಪ್ಟರ್ನಿಂದ ಹಗ್ಗ ಬಿಟ್ಟು ಮೇಲೆ ಎತ್ತಲು ಅಧಿಕಾರಿಗಳು ಚಿಂತನೆ ನಡೆಸಿದರು.
ಕೊನಗೆ ಹಗ್ಗದ ಸಹಾಯದಿಂದ ನಿಶಾಂತ್ ಗುಲ್ಲಾ ಸಿಬ್ಬಂದಿ ಮೇಲಕ್ಕೆ ಎತ್ತಿದರು. ರಕ್ಷಣಾ ಕಾರ್ಯಾಚರಣೆಗಾಗಿ ಬೆಂಗಳೂರಿನ ಯಲಹಂಕದಿಂದ ವಾಯುಪಡೆಯ ಹೆಲಿಕಾಪ್ಟರ್ ಬಂದಿತ್ತು. ನಿಶಾಂತ್ನನ್ನು ನೇರವಾಗಿ ಯಲಹಂಕ ವಾಯುನೆಲೆಗೆ ಸ್ಥಳಾಂತರಿಸಿ, ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲು ಌಂಬುಲೆನ್ಸ್ ಸಿದ್ಧವಾಗಿದೆ.
ಟ್ರಕಿಂಗ್ಗೆ ಕಡಿವಾಣ: ಎಸ್ಪಿ
ಟ್ರಕಿಂಗ್ ಮಾಡಲೆಂದು ನಂದಿಬೆಟ್ಟಕ್ಕೆ ಜನರು ಬರುತ್ತಿರುತ್ತಾರೆ. ಅಂಥವರಿಗೆ ಮುಂದಿನ ದಿನಗಳಲ್ಲಿ ಕಡಿವಾಣ ಹಾಕುತ್ತೇವೆ. ದುರ್ಗಮ ಪ್ರದೇಶಕ್ಕೆ ಬಿದ್ದಿದ್ದ ನಿಶಾಂತ್ನನ್ನು ರಕ್ಷಣೆ ಮಾಡಿದ್ದೇವೆ. ದೆಹಲಿ ಮೂಲದ ನಿಶಾಂತ್ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ನಾನು ಒಬ್ಬನೇ ಟ್ರಕ್ಕಿಂಗ್ಗೆ ಬಂದಿದ್ದೆ ಎಂದು ಮಾಹಿತಿ ನೀಡಿದ್ದಾನೆ. ಸುಮಾರು 200 ಅಡಿ ಕೆಳಗೆ ಬಿದ್ದಿದ್ದ ನಿಶಾಂತ್ನನ್ನು ರಕ್ಷಿಸಿದ್ದೇವೆ ಎಂದು ಚಿಕ್ಕಬಳ್ಳಾಪುರದ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.
ಇದನ್ನೂ ಓದಿ: ನಂದಿಬೆಟ್ಟದ ಮೇಲಿನ ವಾತಾವರಣ, ಮಂಜು ಮತ್ತು ಕುಳಿರ್ಗಾಳಿ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವುದು ನಿಸ್ಸಂಶಯ!
ಇದನ್ನೂ ಓದಿ: ಪ್ರೇಮಿಗಳ ದಿನದಂದು ನಂದಿಗಿರಿಧಾಮದ ಕುಳಿರ್ಗಾಳಿಯಲ್ಲಿ ಪ್ರೇಮಿಗಳ ಪ್ರೇಮ ನಿವೇದನೆ, ಪಿಸುಮಾತು ಮತ್ತು ಬಿಸಿಯಪ್ಪುಗೆ!