ಸಚಿವ ಸಂಪುಟ ವಿಸ್ತರಣೆಗೆ ಎಂ.ಪಿ ರೇಣುಕಾಚಾರ್ಯ ಪಟ್ಟು; ಅಗತ್ಯ ಬಿದ್ದರೆ ದೆಹಲಿಗೂ ಹೋಗ್ತೇವೆ ಎಂದ ಶಾಸಕ
MP Renukacharya: ವಿಳಂಬ ಮಾಡಿ ನಮಗೆ ಸಚಿವ ಸ್ಥಾನ ಕೊಟ್ಟರೆ ಉಪಯೋಗವಿಲ್ಲ. ಬಿ.ವೈ. ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಲ್ಲ. ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ದಾವಣಗೆರೆ: ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ? ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗಲು ನಾನು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಷ್ಟು ಪ್ರಯತ್ನಿಸಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. ಕೆಲವು ಸಚಿವರು ಶಾಸಕರ ಫೋನ್ ಸಹ ರಿಸೀವ್ ಮಾಡಲ್ಲ. ಶಾಸಕರು ಪತ್ರವನ್ನು ಕೊಟ್ಟರೆ ಸಚಿವರು ಉತ್ತರ ಕೊಡಬೇಕು. ಆದ್ರೆ ಸಚಿವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆ. ಇಂಥ ಸಚಿವರು ಬೇಕಾ ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಟಿವಿ9ಗೆ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟದಲ್ಲಿ ಈಗ 4 ಸಚಿವ ಸ್ಥಾನಗಳು ಖಾಲಿ ಇವೆ. ಹಲವು ಬಾರಿ ಸಚಿವರಾದವರು ತಾವೇ ರಾಜೀನಾಮೆ ನೀಡಲಿ. ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮಾರ್ಚ್‌ನಲ್ಲಿ ಸಂಪುಟ ವಿಸ್ತರಣೆ ಬೇಡ, ಈಗಲೇ ಮಾಡಲಿ. ಅಗತ್ಯ ಬಿದ್ದರೆ ನಾವು ದೆಹಲಿಗೂ ಹೋಗುತ್ತೇವೆ. ಹೊಸಬರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಒಂದಾಗಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ? ನಮಗೆ ಸಚಿವ ಸ್ಥಾನ ಕೊಟ್ಟು ನೋಡಲಿ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಈ ಎಲ್ಲ ವಿಚಾರವನ್ನು ಶಾಸಕ ಯತ್ನಾಳ್ ಜತೆ ಮಾತಾಡಿದ್ದೇನೆ. ವಿಳಂಬ ಮಾಡಿ ನಮಗೆ ಸಚಿವ ಸ್ಥಾನ ಕೊಟ್ಟರೆ ಉಪಯೋಗವಿಲ್ಲ. ಬಿ.ವೈ. ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಲ್ಲ. ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಮೋದಿ, ಯೋಗಿ ಮಾದರಿಯಲ್ಲಿ ಸಚಿವ ಸಂಪುಟ ರಚಿಸಲಿ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ತಿಪ್ಪಾರೆಡ್ಡಿ
ಮೋದಿ, ಯೋಗಿ ಮಾದರಿಯಲ್ಲಿ ಸಚಿವ ಸಂಪುಟ ರಚಿಸಲಿ. ಸಾಮಾಜಿಕ ನ್ಯಾಯದಡಿಯಲ್ಲಿ ಸಂಪುಟ ರಚನೆ ಆಗಲಿ. ಕೇವಲ ಮತ ಪಡೆಯಲು ಸಮುದಾಯಗಳು ಸೀಮಿತ ಅಲ್ಲ. ಪ್ರತಿ ಸಮುದಾಯಕ್ಕೆ ಸಂಪುಟದಲ್ಲಿ ಅವಕಾಶ ಸಿಗಬೇಕು ಎಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ವಿಚಾರವಾಗಿ ಚಿತ್ರದುರ್ಗದಲ್ಲಿ ಟಿವಿ9ಗೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅನುಭವಿ ರಾಜಕಾರಣಿ. ಸಮಾಧಾನದಿಂದ ಅವರು ಶಾಸಕರ ಮಾತು ಕೇಳುತ್ತಾರೆ. ದೀರ್ಘ ಹೋರಾಟದಿಂದ ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ವಿಚಾರ ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷಕ್ಕೆ ಬಿಟ್ಟದ್ದು. ನಾನು ಹಿರಿಯ ಶಾಸಕನಾಗಿ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೇನೆ. ನನ್ನ ಹಿರಿತನಕ್ಕೆ ಪಕ್ಷ ನನಗೆ ಅವಕಾಶ ನೀಡುವ ವಿಶ್ವಾಸವಿದೆ. ಉತ್ತರ ಪ್ರದೇಶ ಮಾದರಿ ಸಂಪುಟ ರಚನೆ ಆಗಬೇಕು. 3 ತಿಂಗಳ ಬಳಿಕ ಸಚಿವ ಸಂಪುಟ ಪುನಾರಚನೆ ಸರಿಯಲ್ಲ. ಮಾಜಿ ಮಂತ್ರಿ ಅನಿಸಿಕೊಳ್ಳಲು ಮಂತ್ರಿ ಆದಂತಾಗುತ್ತದೆ ಎಂದು ತಿಪ್ಪಾರೆಡ್ಡಿ ಹೇಳಿದ್ದಾರೆ.
ಶೀಘ್ರ ಸಂಪುಟ ವಿಸ್ತರಣೆ, ಪುನಾರಚನೆ ಸಾಧ್ಯತೆ ಕಡಿಮೆ? ಶಾಸಕರಿಂದ ಹೆಚ್ಚಿದ ಒತ್ತಡ
ಒಬ್ಬೊಬ್ಬರಾಗಿ ಶಾಸಕರಿಂದ ಸಂಪುಟ ವಿಸ್ತರಣೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಕೆಲವು ಶಾಸಕರಿಂದ ಮಾತ್ರ ಬಹಿರಂಗ ಹೇಳಿಕೆ ವ್ತಕ್ತವಾಗುತ್ತಿದೆ. ಸದ್ಯಕ್ಕೆ ಐದು ರಾಜ್ಯಗಳ ಚುನಾವಣೆ ಬಳಿಕ ಸಂಪುಟ ಪುನಾರಚನೆ ಸಾಧ್ಯತೆ ಇದೆ. ಈವರೆಗೂ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಸಿಎಂಗೆ ಯಾವುದೇ ಸಂದೇಶ ಬಂದಿಲ್ಲ. ಹೈಕಮಾಂಡ್ ಸೂಚನೆ ಬಳಿಕವೇ ಪುನಾರಚನೆ ನಡೆಯಲಿದೆ ಎಂದು ಹೇಳಲಾಗಿದೆ. ಬಹುತೇಕ ಮಾರ್ಚ್ ವರೆಗೂ ಯಾವುದೇ ಬೆಳವಣಿಗೆ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.
ಹೈಕಮಾಂಡ್ ಆದೇಶ ಪಾಲನೆಯಷ್ಟೇ ಸಿಎಂ ಮಾಡಲಿದ್ದಾರೆ. ಬೇಗನೆ ಸಂಪುಟ ವಿಸ್ತರಣೆ ಮಾಡುವಂತೆ ಕೇಳುವ ಸಾಧ್ಯತೆ ಕಡಿಮೆ ಇದೆ. ಶಾಸಕರಿಂದ ಮಾತ್ರ ಆದಷ್ಟು ಬೇಗನೆ ಸಂಪುಟ ವಿಸ್ತರಣೆಗೆ ಒತ್ತಾಯ ಕೇಳಿಬರುತ್ತಿದೆ. ಮಾರ್ಚ್ ತಿಂಗಳಲ್ಲಿ ಬಜೆಟ್ ಅಧಿವೇಶನ ಬರಲಿದೆ. ಅಲ್ಲದೆ ಬಿಬಿಎಂಪಿ, ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆ ಸಾಧ್ಯತೆ ಇದೆ. ನಾನಾ ನೆಪ ಮುಂದಿಟ್ಟು ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆ ಇದೆ. ಇದಕ್ಕಾಗಿ ಮಾರ್ಚ್ ಗೂ ಮೊದಲೇ ಸಂಪುಟ ವಿಸ್ತರಣೆಗೆ ಶಾಸಕರ ಒತ್ತಡ ಕೇಳಿಬಂದಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಬದ್ಧವೈರಿಗಳಂತಾಡುತ್ತಿದ್ದ ರೇಣುಕಾಚಾರ್ಯ ಮತ್ತು ಬಸನಗೌಡ ಯತ್ನಾಳ್ ಆಪ್ತ ಸಮಾಲೋಚನೆ ನಡೆಸಿದರು!
ಇದನ್ನೂ ಓದಿ: ಆನೆ, ಹುಲಿ, ಸಿಂಹ ಪಳಗಿಸಿದರೆ ಸೌಮ್ಯ ಸ್ವಭಾವ ಧರಿಸಿಕೊಳ್ಳುತ್ತವೆ, ಹಾಗಾಗಿ ನಾನೊಬ್ಬ ಪಳಗಿದ ಹುಲಿ: ಎಮ್ ಪಿ ರೇಣುಕಾಚಾರ್ಯ
Published On - 11:16 am, Mon, 24 January 22