Karnataka Politics: ಮುಸ್ಲಿಂ ಏರಿಯಾ ವಿವಾದ; ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ, ರೇಣುಕಾಚಾರ್ಯ, ಅಶೋಕ್ ವಾಗ್ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 17, 2022 | 2:56 PM

ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ಬಳಕೆಯಾಗಿದ್ದ ‘ಮುಸ್ಲಿಂ ಏರಿಯಾ’ (Muslim Area) ಪದದ ಬಗ್ಗೆ ಬಿಜೆಪಿ ನಾಯಕರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Karnataka Politics: ಮುಸ್ಲಿಂ ಏರಿಯಾ ವಿವಾದ; ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ, ರೇಣುಕಾಚಾರ್ಯ, ಅಶೋಕ್ ವಾಗ್ದಾಳಿ
ಸಚಿವ ಆರ್.ಅಶೋಕ್, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಎಂ.ಪಿ.ರೇಣುಕಾಚಾರ್ಯ
Follow us on

ಬೆಂಗಳೂರು: ಶಿವಮೊಗ್ಗದಲ್ಲಿ ಕೋಮು ಸಂಘರ್ಷಕ್ಕೆ (Karnataka Communal Violence) ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನೀಡಿದ್ದ ಹೇಳಿಕೆಯೊಂದು ಇದೀಗ ವಿವಾದಕ್ಕೀಡಾಗಿದೆ. ‘ಶಿವಮೊಗ್ಗದ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫ್ಲೆಕ್ಸ್ ಏಕೆ ಹಾಕಬೇಕಿತ್ತು? ಸಾವರ್ಕರ್ (Savarkar) ಫೋಟೊ ಹಾಕಿದ ಮೇಲೆ ಟಿಪ್ಪು ಫ್ಲೆಕ್ಸ್ ತೆಗೆಸಿದ್ದು ಏಕೆ? ಮೊದಲು ಕಿತಾಪತಿ ಮಾಡೋರು ಇವರು. ಇವರಿಗೆ ರಾಷ್ಟ್ರಧ್ವಜದ ಮೇಲೆ ಗೌರವವಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದರು. ‘ಬಿಜೆಪಿಯವರಿಗೆ ಕಾಮಾಲೆ ರೋಗ ಬಂದಿದೆ. ಮೊದಲು ಸುಳ್ಳು ಹೇಳಿ ನಂತರ ಸಮರ್ಥನೆ ಮಾಡ್ತಾರೆ. ಎಲ್ಲದಕ್ಕೂ ಕಾಂಗ್ರೆಸ್ ಪಕ್ಷವನ್ನು ಹೊಣೆಯಾಗಿಸಲು ಪ್ರಯತ್ನಿಸುತ್ತಾರೆ. ಶಿವಮೊಗ್ಗ ಗಲಭೆಗೂ ಕಾಂಗ್ರೆಸ್​ಗೂ ಏನೇನೂ ಸಂಬಂಧವಿಲ್ಲ. ಈಶ್ವಪ್ಪನಿಗೆ ಬುದ್ಧಿ ಸರಿಯಿಲ್ಲ. ಎಂದಾದರೂ ಒಂದು ದಿನ ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂದಿದ್ದವರು ಅವರು. ಅವರಿಗೆ ರಾಷ್ಟ್ರಧ್ವಜದ ಮೇಲೆ ಪ್ರೀತಿ ಹೇಗೆ ಬರಬೇಕು’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಈ ಹೇಳಿಕೆಯಲ್ಲಿ ಬಳಕೆಯಾಗಿರುವ ‘ಮುಸ್ಲಿಂ ಏರಿಯಾ’ (Muslim Area) ಪದದ ಬಗ್ಗೆ ಬಿಜೆಪಿ ನಾಯಕರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ್ದ ಸಚಿವ ಕೆ.ಎಸ್.ಈಶ್ವರಪ್ಪ, ‘ಸಿದ್ದರಾಮಯ್ಯ ಸದಾ ರಾಷ್ಟ್ರದ್ರೋಹಿಗಳ ಪರವಾಗಿಯೇ ಇರುವವರು. ಸಾವರ್ಕರ್ ಬಗ್ಗೆ ಇವರು ಕೊಟ್ಟಿರುವ ಹೇಳಿಕೆ ವಿರುದ್ಧ ಸೋನಿಯಾ ಗಾಂಧಿಗೆ ದೂರು ಕೊಡ್ತೀನಿ. ದೇಶದಲ್ಲಿ ಮುಸ್ಲಿಮರ ಭೂಮಿ ಅಂತ ಎಲ್ಲೂ ಇಲ್ಲವೇ ಇಲ್ಲ. ಇಡೀ ದೇಶದ ಯಾವುದೇ ಭಾಗದಲ್ಲಿ ಸಾವರ್ಕರ್ ಸೇರಿದಂತೆ ಯಾವುದೇ ದೇಶಭಕ್ತರ ಫೋಟೊ ಹಾಕಲು ಅವಕಾಶವಿದೆ. ಸಿದ್ದರಾಮಯ್ಯ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ವಿರುದ್ಧ ಸೋನಿಯಾಗೆ ದೂರು: ಈಶ್ವರಪ್ಪ

‘ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಯಶಸ್ವಿಯಾಗಿ ನಡೆಯಿತು. ಇಲ್ಲಿ ನಡೆದ ಸಂಘರ್ಷಕ್ಕೆ ನಮ್ಮನ್ನು ಯಾರೂ ಹೊಣೆಯಾಗಿಸುತ್ತಿಲ್ಲ. ಆದರೆ ಕಾಂಗ್ರೆಸ್ ಮತ್ತು ಎಸ್​ಡಿಪಿಐಗೆ ಛೀಮಾರಿ ಹಾಕುತ್ತಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಊರಿಗೆ ಊರೇ ಹಬ್ಬದ ರೂಪದಲ್ಲಿ ಯಶಸ್ವಿಯಾಗಿ ಆಚರಿಸಿದೆ. ಇಲ್ಲಿ ಮನೆಮನೆಗೂ ಧ್ವಜ ಹಾಕಿದ್ದರು. ಎಲ್ಲರೂ ಕಾರ್ಯಕ್ರಮ ಮುಗಿಸಿ ಮನೆಗೆ ಹೋದ ನಂತರ ಸಾವರ್ಕರ್ ಫ್ಲೆಕ್ಸ್​ನಲ್ಲಿದ್ದ ಸಾವರ್ಕರ್ ಫೋಟೊವನ್ನು ಎಸ್​ಡಿಪಿಐ ಕಾರ್ಯಕರ್ತ, ಕಾಂಗ್ರೆಸ್ ಕಾರ್ಪೊರೇಟರ್ ಒಬ್ಬರ ಗಂಡ ಹರಿದು ಹಾಕಿದ. ದೇಶದ್ರೋಹದ ಕೆಲಸ ಮಾಡಿದವನನ್ನು ಈಗ ಜೈಲಿಗೆ ಹಾಕಿದ್ದೇವೆ. ಇದರಲ್ಲಿ ಪರ ವಿರೋಧದ ಪ್ರಶ್ನೆ ಇಲ್ಲ’ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

‘ಶಿವಮೊಗ್ಗದಲ್ಲಿ ಮುಸ್ಲಿಮರ ಆಟಾಟೋಪ ನಡೆಯುವುದಿಲ್ಲ. ಕೆಲ ಗೂಂಡಾಗಳು ಟಿಪ್ಪು ಫೋಟೊ ಹಿಡಿದುಕೊಂಡ ಬಂದಾಗ ಪೊಲೀಸರು ಲಾಠಿಯಿಂದ ಹೊಡೆದು ಓಡಿಸಿದರು. ಚಾಕು ಹಾಕಿದವನು ತಪ್ಪಿಸಿಕೊಳ್ಳಲೆಂದು ಓಡುತ್ತಿದ್ದಾಗ ಪೊಲೀಸರು ಗುಂಡು ಹಾರಿಸಿದರು. ಇದೊಂದು ಸ್ಯಾಂಪಲ್ ಅಷ್ಟೇ. ಅವರು ಇದೇ ಪ್ರವೃತ್ತಿ ಮುಂದುವರಿಸಿದರೆ’ ಗುಂಡಿನ ಮೂಲಕವೇ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಿಣಿ: ರೇಣುಕಾಚಾರ್ಯ

ಭಾರತದಲ್ಲಿ ಎಲ್ಲಿ ಬೇಕಾದರೂ ಸಾವರ್ಕರ್ ಫೋಟೊ ಹಾಕಬಹುದು. ಇಂತಲ್ಲಿ ಹಾಕಬೇಡಿ ಎಂದು ಹೇಳಲು ಇವರು ಯಾರು’ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದರು. ‘ಇವರು ಯಾರನ್ನು ಕೇಳಿ ಟಿಪ್ಪು ಜಯಂತಿ ಘೋಷಣೆ ಮಾಡಿದ್ದರು? ಇವರಿಗೆ ತಾಕತ್ತು ಇದ್ದರೆ ನಾನೊಬ್ಬ ಹಿಂದೂ ಎಂದು ಘೋಷಿಸಲಿ. ಮೊದಲು ವೋಟ್ ಬ್ಯಾಂಕ್ ರಾಜಕಾರಣ ಬಿಡಲಿ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಾಧನೆ ಜನರಿಗೆ ತಲುಪಬಾರದು ಎನ್ನುವ ಕಾರಣಕ್ಕೆ ಇವರು ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ ನೀವು ರಾಮನ ಜಪ ಮಾಡಿ. ಪ್ರವೀಣ್, ಹರ್ಷ ಸೇರಿ ಹಲವರ ಹತ್ಯೆಗೆ ನೀವೇ ಕಾರಣ. ರಾಜ್ಯದ ಜನರ ಕ್ಷಮೆ ಕೇಳಿ’ ಎಂದು ಒತ್ತಾಯಿಸಿದರು.

‘ಸಿದ್ದರಾಮಯ್ಯ ಎಂದು ನಿಮ್ಮ ತಂದೆ ತಾಯಿ ದೇವರ ಹೆಸರು ಇಟ್ಟಿದ್ದಾರೆ. ಆದರೆ ನಿಮಗೆ ಅಧಿಕಾರದ ಹುಚ್ಚು, ಮುಂದೆ ಮುಖ್ಯಮಂತ್ರಿ ಆಗುತ್ತೇನೆಂಬ ಭ್ರಮೆ ಆವರಿಸಿದೆ. ಈ ದೇಶದ ಒಂದೊಂದು ಇಂಚು ಭೂಮಿಯೂ ನಮಗೆ ಸೇರಿದ್ದು. ವಕ್ಫ್ ಮಂಡಿಯೇ ಸರ್ವಸ್ವವೂ ಅಲ್ಲ. ಹಿಂದೂಗಳು ಮುಸ್ಲಿಮರು ಭಾರತ ಮಾತೆಯ ಮಕ್ಕಳೇ ಆಗಿದ್ದಾರೆ. ಟಿಪ್ಪು ಒಬ್ಬ ಮತಾಂಧ, ಅಂಥವನ ಹೆಸರಿನಲ್ಲಿ ಜಯಂತಿ ಘೋಷಿಸಿ ಮುಸ್ಲಿಮರ ಓಲೈಕೆ ಮಾಡುತ್ತಿದ್ದೀರಿ. ಮುಸ್ಲಿಮರು ಯಾವುದೇ ಪ್ರಚೋದನೆಗೆ ಒಳಗಾಗಬಾರದು’ ಎಂದು ಅವರು ಸಲಹೆ ಮಾಡಿದರು.

ಮುಸ್ಲಿಂ ಏರಿಯಾ ಅನ್ನೋಕೆ ಅದೇನು ಪಾಕಿಸ್ತಾನವೇ: ಆರ್.ಅಶೋಕ್ ಆಕ್ರೋಶ

‘ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್​ ಫೋಟೊ ಹಾಕಬಾರದಿತ್ತು’ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಸಚಿವ ಆರ್.ಅಶೋಕ್ ಕಿಡಿಕಾರಿದರು. ‘ಮುಸ್ಲಿಮ್ ಏರಿಯಾ ಎಂದರೆ ಅದೇನು ಪಾಕಿಸ್ತಾನಕ್ಕೆ ಸೇರಿದ್ದೇ? ಮುಸ್ಲಿಮರು ಇದ್ದ ಮಾತ್ರಕ್ಕೆ ಅದನ್ನು ಪಾಕಿಸ್ತಾನ ಎನ್ನಲು ಆದೀತೆ? ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ​ ಬ್ರಿಟಿಷರ ಜತೆ ಹೋರಾಡಿದವರು. ಅಂಥವರ ಫೋಟೊ ಹಾಕಲು ಇವರನ್ಯಾಕೆ ಕೇಳಬೇಕು? ವೀರ ಸಾವರ್ಕರ್ ಅವರನ್ನು ಅವರು ಒಪ್ಪದೇ ಇರಬಹುದು. ಆದರೆ ಸಾವರ್ಕರ್ ಒಬ್ಬ ದೇಶಭಕ್ತ’ ಎಂದು ಪ್ರತಿಪಾದಿಸಿದರು.

‘ಮುಸ್ಲಿಮರು ಇರುವ ಮಾತ್ರಕ್ಕೆ ಅದನ್ನು ಪಾಕಿಸ್ತಾನ ಅಂದುಕೊಂಡಿದ್ದಾರಾ ಸಿದ್ದರಾಮಯ್ಯ? ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದವರು. ಅಂಡಮಾನ್ ಜೈಲಿನಲ್ಲಿದ್ದವರು ಯಾರೂ ಬದುಕಿ ಬರಲಿಲ್ಲ. ಒಂದೋ ಕಾಯಿಲೆಯಿಂದ ಸಾಯುತ್ತಿದ್ದರು ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅಂಥ ಶಿಕ್ಷೆಯನ್ನು ಸಾವರ್ಕರ್ ಅನುಭವಿಸಿದ್ದಾರೆ. ಇವರ ಲೀಡರ್‌ಗಳಿಗೆ ಅಂತಹ ಶಿಕ್ಷೆ ಯಾಕೆ ಕೊಟ್ಟಿಲ್ಲ? ಟಿಪ್ಪು, ಹೈದರಾಲಿ ಅಂತ ಮೆರೆಯುತ್ತಾರಲ್ಲಾ ಅವರಿಗೆ ಯಾಕೆ ಕರಿನೀರಿನ‌ ಶಿಕ್ಷೆ ನೀಡಿಲ್ಲ? ಬ್ರಿಟಿಷರ ಜೊತೆ ಹೋರಾಡಿದ ಸಾವರ್ಕರ್ ಫೋಟೊ ಹಾಕಲು ಇವರನ್ನ ಯಾಕೆ ಕೇಳಬೇಕು? ಯಾವ ಯಾವ ಧರ್ಮದವರು ಇದ್ದಾರೆ ಅಂತ ಇವರನ್ನು ಕೇಳಿ ಹಾಕಬೇಕಾ? ಯಾವ ಧರ್ಮ, ಜಾತಿ ಇದ್ದಾರೆ ಅಂತ ನೋಡಿ ಫೋಟೋ ಹಾಕಲು ಸಂವಿಧಾನದ ಅಡಿ ನಿಯಮ ಇದೆಯೇ ಎಂದು ಪ್ರಶ್ನಿಸಿದರು.

Published On - 2:55 pm, Wed, 17 August 22