ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಗೆ ಆಯ್ಕೆ: ಸಂಜೆ 4.30ಕ್ಕೆ ಯಡಿಯೂರಪ್ಪ, ಬೊಮ್ಮಾಯಿ ಸುದ್ದಿಗೋಷ್ಠಿ
ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಇಂದು (ಬುಧವಾರ) ಸಂಜೆ 4.30ಕ್ಕೆ ಬಿ.ಎಸ್. ಯಡಿಯೂರಪ್ಪ ಸುದ್ದಿ ಗೋಷ್ಠಿ ನಡೆಸಲಿದ್ದಾರೆ. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.
ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಇಂದು (ಬುಧವಾರ) ಸಂಜೆ 4.30ಕ್ಕೆ ಬಿ.ಎಸ್. ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಜಂಟಿ ಸುದ್ದಿ ಗೋಷ್ಠಿ ನಡೆಸಲಿದ್ದಾರೆ. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಯಡಿಯೂರಪ್ಪರ ಕಾವೇರಿ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ(Central Election Committee) ಪುನರ್ ರಚನೆಯಾಗಿದ್ದು ಹೊಸ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ (BS Yediyurappa) ಸ್ಥಾನ ಲಭಿಸಿದೆ. ಬಿಜೆಪಿಯಲ್ಲಿ ನೀತಿ ತೀರ್ಮಾನ ಕೈಗೊಳ್ಳುವ ಉನ್ನತ ಸಮಿತಿಯೇ ಬಿಜೆಪಿ ಸಂಸದೀಯ ಮಂಡಳಿ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯಲ್ಲೂ ಯಡಿಯೂರಪ್ಪಗೆ ಸ್ಥಾನ
ಲೋಕಸಭಾ, ವಿಧಾನಸಭಾ ಚುನಾವಣಾ ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯಲ್ಲಿಯೂ ಯಡಿಯೂರಪ್ಪಗೆ ಸ್ಥಾನ ನೀಡಲಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಬಿಜೆಪಿಗೆ ಕೈಕೊಟ್ಟರೇ ಪಕ್ಷಕ್ಕೆ ನಷ್ಟ ಎಂಬ ಲೆಕ್ಕಾಚಾರದ ಮೇಲೆ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಯಡಿಯೂರಪ್ಪಗೆ ಪ್ರಮುಖ ಸ್ಥಾನಮಾನ ನೀಡಿ ಬಿಜೆಪಿ ಹೈಕಮಾಂಡ್ ಓಲೈಸಿದೆ. ಈ ಲೆಕ್ಕಾಚಾರವೇ ಬಿಜೆಪಿಯ ಸಂಸದೀಯ ಮಂಡಳಿ, ಕೇಂದ್ರ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪಗೆ ಸ್ಥಾನ ನೀಡಲು ಕಾರಣ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ಅವರಿಗೆ ಅಭಿನಂದನೆ: ನಳೀನ್ ಕುಮಾರ್ ಕಟೀಲ್ ಹೇಳಿಕೆ
ಬಿಜೆಪಿ ಪಕ್ಷದ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಪುನರ್ ರಚನೆ ಆಗಿದೆ. ಕರ್ನಾಟಕದಿಂದ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಾರೆ. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಗತ್ ಪ್ರಕಾಶ್ ನಡ್ಡಾ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರದಲ್ಲಿ ನಮ್ಮ ಪರವಾಗಿ ಧ್ವನಿ ಎತ್ತಲು, ನಮ್ಮ ಪರ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ಹಲವು ರಂಧ್ರವಾಗಿದೆ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಗುಲಾಮ್ ನಬಿ ಆಜಾದ್ ನೋಡಿ ಹೇಳಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ನೂರಾರು ರಂಧ್ರ ಆಗಿದೆ. ಇಲ್ಲಿ ಅವರ ಕಾರ್ಯಕ್ರಮ ನೋಡಿದರೆ ಗೊತ್ತಾಗುತ್ತದೆ. ನಾ ಮುಂದು, ತಾ ಮುಂದು ಅಂತ ಸಮಾವೇಶ, ಪಾದಯಾತ್ರೆ ಅಂತ ಮಾಡ್ತಿದ್ದಾರೆ. ಈ ಮೂಲಕ ಅವರ ರಂಧ್ರಗಳನ್ನು ತೋರಿಸ್ತಿದ್ದಾರೆ ಎಂದಿದ್ದಾರೆ.
Published On - 4:02 pm, Wed, 17 August 22