ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಪುನರ್ ರಚನೆ: ಯಡಿಯೂರಪ್ಪಗೆ ಸ್ಥಾನ; ಗಡ್ಕರಿ, ಶಿವರಾಜ್ ಚೌಹಾಣ್ ಔಟ್
ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೂ ಸ್ಥಾನ ಲಭಿಸಿದೆ
ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ(Central Election Committee) ಪುನರ್ ರಚನೆಯಾಗಿದ್ದು ಹೊಸ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ (BS Yediyurappa) ಸ್ಥಾನ ಲಭಿಸಿದೆ. ಬಿಜೆಪಿಯಲ್ಲಿ ನೀತಿ ತೀರ್ಮಾನ ಕೈಗೊಳ್ಳುವ ಉನ್ನತ ಸಮಿತಿಯೇ ಬಿಜೆಪಿ ಸಂಸದೀಯ ಮಂಡಳಿ. ಈ ಸಮಿತಿಯಿಂದ ನಿತಿನ್ ಗಡ್ಕರಿ (Nitin Gadkari )ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಡಲಾಗಿದ್ದು, ಯಡಿಯೂರಪ್ಪ ಮತ್ತು ಸರ್ಬಾನಂದ ಸೋನೋವಾಲ್ ಅವರಿಗೆ ಸ್ಥಾನ ನೀಡಲಾಗಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಪಟ್ಟಿ ಬಿಡುಗಡೆಯಾಗಿದ್ದುಇದರಲ್ಲಿಯೂ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಲಾಗಿದೆ. ಕೇಂದ್ರೀಯ ಚುನಾವಣಾ ಸಮಿತಿಯ ಇತರ ಸದಸ್ಯರೆಂದರೆ ಜೆಪಿ ನಡ್ಡಾ, ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಕೆ.ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ಪುರ, ಸುಧಾ ಯಾದವ್, ಸತ್ಯ ನಾರಾಯಣ್ ಜಟಿಯಾ, ಓಂ ಮಾಥುರ್, ಭುಪೇಂದ್ರ ಯಾದವ್, ದೇವೇಂದ್ರ ಫಡ್ನವಿಸ್, ಸರ್ಬಾನಂದ ಸೋನೋವಾಲ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್. ಈ ಹಿಂದೆ ಕರ್ನಾಟಕದ ಅನಂತ ಕುಮಾರ್ ಸಂಸದೀಯ ಮಂಡಳಿಯ ಸದಸ್ಯರಾಗಿದ್ದರು.
BJP releases a list of members of the party's Central Election Committee (CEC).
Maharashtra Deputy CM Devendra Fadnavis included in the Committee. pic.twitter.com/wvUJAvoNzA
— ANI (@ANI) August 17, 2022
ಪ್ರಧಾನಿ ನರೇಂದ್ರ ಮೋದಿ ಅವರು ಸದಸ್ಯರಾಗಿರುವ ಸಂಸದೀಯ ಮಂಡಳಿ, ಮಾಜಿ ಬಿಜೆಪಿ ಅಧ್ಯಕ್ಷ, ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಡಲಾಗಿದೆ. ಗಡ್ಕರಿ ಅವರು ಪಕ್ಷದ ಮಾಜಿ ಅಧ್ಯಕ್ಷರು ಆಗಿದ್ದು ಇಬ್ಬರು ಮಾಜಿ ಅಧ್ಯಕ್ಷರುಗಳಾದ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಉಳಿಸಿಕೊಳ್ಳಲಾಗಿದೆ. ಈ ಹಿಂದೆ ಮಾಜಿ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಅವರನ್ನು ಮಂಡಳಿಯಿಂದ ಕೈಬಿಡಲಾಗಿತ್ತು.
ಹಿರಿಯ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಅನಂತ್ ಕುಮಾರ್ ಅವರ ನಿಧನ ಮತ್ತು ಭಾರತದ ಉಪಾಧ್ಯಕ್ಷರಾಗಿ ವೆಂಕಯ್ಯ ನಾಯ್ಡು ಆಯ್ಕೆಯಾದ ಕಾರಣ ಮತ್ತು ಕರ್ನಾಟಕ ರಾಜ್ಯಪಾಲರಾಗಿ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಆ ಸ್ಥಾನಕ್ಕೆ ನೇಮಿಸಿದ ಕಾರಣ ಮಂಡಳಿಯಲ್ಲಿ ಐದು ಸ್ಥಾನ ಖಾಲಿ ಇತ್ತು. ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ 2014 ರಿಂದ ರಚನೆಯಾಗದ 11 ಸದಸ್ಯರ ಮಂಡಳಿಯಲ್ಲಿ, ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಬಿ.ಎಲ್. ಸಂತೋಷ್ ಮೊದಲಿನಂತೆಯೇ ಮುಂದುವರೆದಿದ್ದಾರೆ.
ಹೀಗೆ ಭರ್ತಿ ಮಾಡಿದ ಸ್ಥಾನಗಳಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಸ್ಥಾನ ನೀಡಿದ್ದು, ಸಿಇಸಿ ಸದಸ್ಯರನ್ನಾಗಿಯೂ ಮಾಡಲಾಗಿದೆ.
ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಅಸ್ಸಾಂನ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಸದಸ್ಯತ್ವವನ್ನು ವೈವಿಧ್ಯಗೊಳಿಸುವ ಪ್ರಯತ್ನದಲ್ಲಿ ಸಂಸದೀಯ ಮಂಡಳಿಗೆ ನೇಮಕಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ತೆಲಂಗಾಣಕ್ಕೆ ಸೇರಿದ ಪಕ್ಷದ ಒಬಿಸಿ ಮೋರ್ಚಾದ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಕೆ.ಲಕ್ಷ್ಮಣ್ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. ಪಕ್ಷದ ಇತ್ತೀಚಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ, ಸಿಖ್ ಸದಸ್ಯ, ಇಕ್ಬಾಲ್ ಸಿಂಗ್ ಲಾಲ್ ಪುರ ಅವರನ್ನು ಮಂಡಳಿಗೆ ನೇಮಿಸಲಾಗಿದೆ. ಅದೇ ವೇಳೆ ಹರ್ಯಾಣದ ಮಹೇಂದ್ರಗಢದ ಮಾಜಿ ಸಂಸದ ಸುಧಾ ಯಾದವ್. ಆಕೆಯ ಪತಿ, ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನ (ಬಿಎಸ್‌ಎಫ್) ಡೆಪ್ಯುಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್, ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಹೋರಾಡಿ ಸಾವನ್ನಪ್ಪಿದ್ದರು. ಸತ್ಯನಾರಾಯಣ ಜಟಿಯಾ, ಮಾಜಿ ಸಂಸದ ಮತ್ತು ವಾಜಪೇಯಿ ಸರ್ಕಾರದಲ್ಲಿ ಮಾಜಿ ಕೇಂದ್ರ ಸಚಿವರಾಗಿದ್ದರು.
15 ಸದಸ್ಯರ ಸಿಇಸಿಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸ್ಥಾನ ನೀಡಲಾಗಿದೆ. ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆ, ತಮಿಳುನಾಡು ಶಾಸಕಿ ವಾನತಿ ಶ್ರೀನಿವಾಸನ್ ಅವರನ್ನೂ ಸಿಇಸಿ ಸದಸ್ಯರನ್ನಾಗಿ ಮಾಡಲಾಗಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮತ್ತು ಪಕ್ಷದ ಹಿರಿಯ ನಾಯಕ ಓಂ ಮಾಥೂರ್ ಅವರಿಗೆ ಸ್ಥಾನ ನೀಡಲಾಗಿದ್ದು ಕೇಂದ್ರದ ಮಾಜಿ ಸಚಿವರಾದ ಜುಯಲ್ ಓರಾಮ್ ಮತ್ತು ಶಾನವಾಜ್ ಹುಸೇನ್ ಅವರನ್ನು ಕೈಬಿಡಲಾಗಿದೆ.
ಸಂಸದೀಯ ಮಂಡಳಿಯು ಬಿಜೆಪಿಯ ಆಡಳಿತ ಮಂಡಳಿಯಾಗಿದ್ದು ಅದು ರಾಷ್ಟ್ರೀಯ ಕಾರ್ಯಕಾರಿಣಿಯ ಪರವಾಗಿ ದಿನನಿತ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷದ ಅಧ್ಯಕ್ಷರು ಮತ್ತು ಇತರ ಹತ್ತು ಸದಸ್ಯರನ್ನು ಒಳಗೊಂಡ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯನ್ನು ಸ್ಥಾಪಿಸುತ್ತದೆ. ಪಕ್ಷದ ಸಂಸದೀಯ ಮತ್ತು ಶಾಸಕಾಂಗ ಗುಂಪುಗಳ ಚಟುವಟಿಕೆಗಳನ್ನು ಮಂಡಳಿಯು ಮೇಲ್ವಿಚಾರಣೆ ಮಾಡುತ್ತದೆ. ಇದು ರಾಷ್ಟ್ರೀಯ ಕಾರ್ಯಕಾರಿಣಿಯ ಕೆಳಗಿರುವ ಎಲ್ಲಾ ಸಾಂಸ್ಥಿಕ ಘಟಕಗಳಿಗೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲದೆ ಅವುಗಳನ್ನು ನಿಯಂತ್ರಿಸುತ್ತದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯಲ್ಲೂ ಯಡಿಯೂರಪ್ಪಗೆ ಸ್ಥಾನ
ಲೋಕಸಭಾ, ವಿಧಾನಸಭಾ ಚುನಾವಣಾ ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯಲ್ಲಿಯೂ ಯಡಿಯೂರಪ್ಪಗೆ ಸ್ಥಾನ ನೀಡಲಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಬಿಜೆಪಿಗೆ ಕೈಕೊಟ್ಟರೇ ಪಕ್ಷಕ್ಕೆ ನಷ್ಟ ಎಂಬ ಲೆಕ್ಕಾಚಾರದ ಮೇಲೆ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಯಡಿಯೂರಪ್ಪಗೆ ಪ್ರಮುಖ ಸ್ಥಾನಮಾನ ನೀಡಿ ಬಿಜೆಪಿ ಹೈಕಮಾಂಡ್ ಓಲೈಸಿದೆ. ಈ ಲೆಕ್ಕಾಚಾರವೇ ಬಿಜೆಪಿಯ ಸಂಸದೀಯ ಮಂಡಳಿ, ಕೇಂದ್ರ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪಗೆ ಸ್ಥಾನ ನೀಡಲು ಕಾರಣ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ಅವರಿಗೆ ಅಭಿನಂದನೆ: ನಳೀನ್ ಕುಮಾರ್ ಕಟೀಲ್ ಹೇಳಿಕೆ
ಬಿಜೆಪಿ ಪಕ್ಷದ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಪುನರ್ ರಚನೆ ಆಗಿದೆ. ಕರ್ನಾಟಕದಿಂದ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಾರೆ. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಗತ್ ಪ್ರಕಾಶ್ ನಡ್ಡಾ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರದಲ್ಲಿ ನಮ್ಮ ಪರವಾಗಿ ಧ್ವನಿ ಎತ್ತಲು, ನಮ್ಮ ಪರ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ಹಲವು ರಂಧ್ರವಾಗಿದೆ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಗುಲಾಮ್ ನಬಿ ಆಜಾದ್ ನೋಡಿ ಹೇಳಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ನೂರಾರು ರಂಧ್ರ ಆಗಿದೆ. ಇಲ್ಲಿ ಅವರ ಕಾರ್ಯಕ್ರಮ ನೋಡಿದರೆ ಗೊತ್ತಾಗುತ್ತದೆ. ನಾ ಮುಂದು, ತಾ ಮುಂದು ಅಂತ ಸಮಾವೇಶ, ಪಾದಯಾತ್ರೆ ಅಂತ ಮಾಡ್ತಿದ್ದಾರೆ. ಈ ಮೂಲಕ ಅವರ ರಂಧ್ರಗಳನ್ನು ತೋರಿಸ್ತಿದ್ದಾರೆ ಎಂದಿದ್ದಾರೆ.
ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ
ಸಾವರ್ಕರ್ ಇತಿಹಾಸ, ಸ್ವಾತಂತ್ರ್ಯ ಇತಿಹಾಸ ಸಿದ್ದರಾಮಯ್ಯಗೆ ಗೊತ್ತಿಲ್ಲ. ಜಾತಿ ಬಣ್ಣ, ಕೋಮು ಭಾವನೆ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ. ಸಾವರ್ಕರ್ ತಮ್ಮ ಮನೆತನವನ್ನೇ ಹೋರಾಟಕ್ಕೆ ಮೀಸಲಿಟ್ಟಿದ್ದರು,. ಅವರ ಬಗ್ಗೆ ಈ ರೀತಿಯ ಹೇಳಿಕೆ ಸರಿಯಲ್ಲ. ಅವರ ಫೋಟೋ ಇಡೀ ರಸ್ತೆಯಲ್ಲಿ ಎಲ್ಲಿ ಬೇಕಾದ್ರೂ ಹಾಕಬಹುದು ಕೂಡಲೇ ಸಿದ್ಧರಾಮಯ್ಯ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದಿದ್ದಾರೆ ಕಟೀಲ್.
Published On - 2:20 pm, Wed, 17 August 22