ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಬುಧವಾರ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು. ಪ್ರಕರಣದ ಬಗ್ಗೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರತಿಯನ್ನೂ ಸದನಕ್ಕೆ ತಂದಿದ್ದ ಸಿದ್ದರಾಮಯ್ಯ ಪೊಲೀಸರ ಲೋಪಗಳನ್ನು ವಿವರಿಸಿದರು. ಸಂಜೆ 7.30ಕ್ಕೆ ಗ್ಯಾಂಗ್‌ರೇಪ್ ಪ್ರಕರಣ ಆಗಿದೆ. ಆದರೆ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿಲ್ಲ. ಯುವಕ 24ರಂದೇ ಹೇಳಿಕೆ ನೀಡಿದರೂ ಮರುದಿನ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಅತ್ಯಾಚಾರ ನಡೆದ 60 ದಿನದೊಳಗೆ ಚಾರ್ಜ್‌ಶೀಟ್ ಹಾಕಬೇಕು. ಆರೋಪಿಗಳಿಗೆ ಶಿಕ್ಷೆಯಾಗಬೇಕು. ಮೈಸೂರಿನಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸಬಾರದು. ಈ ಜವಾಬ್ದಾರಿಯನ್ನು ಗೃಹ ಸಚಿವರು ಹೊತ್ತುಕೊಳ್ಳಬೇಕು. ಈ ಪ್ರಕರಣದ ಹಿನ್ನೆಲೆಯಲ್ಲಿ ನಾನು ಗೃಹ ಸಚಿವರು ಅಥವಾ ಮುಖ್ಯಮಂತ್ರಿಯ ರಾಜೀನಾಮೆ ಕೇಳುವುದಿಲ್ಲ. ಆದರೆ ಪೊಲೀಸರು ಸಂತ್ರಸ್ತೆಯನ್ನು ನಡೆಸಿಕೊಂಡ ರೀತಿ ಮಾತ್ರ ಅಕ್ಷಮ್ಯ ಎಂದು ಹೇಳಿದರು.
ಈ ಹಿಂದೆ ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಮರಾಯರು ಗೃಹ ಸಚಿವರಾಗಿದ್ದರು. ಆಗಲೂ ಅತ್ಯಾಚಾರ ಪ್ರಕರಣವೊಂದು ವರದಿಯಾಗಿತ್ತು. ಆಗ ಗೋಪಾಲಗೌಡರು ‘ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಇಂಥ ಪರಿಸ್ಥಿತಿ ಬಂದಿದ್ರೆ ಏನು ಮಾಡ್ತಿದ್ದೀರಿ’ ಎಂದು ಪ್ರಶ್ನಿಸಿದ್ದರು. ಈ ಮಾತಿನ ನಂತರ ಗೃಹ ಸಚಿವ ರಾಮರಾಯರು ಸ್ಥಳದಲ್ಲಿಯೇ ರಾಜೀನಾಮೆ ನೀಡಿದರು. ಆಗ ಜನಪ್ರತಿನಿಧಿಗಳು ಅಷ್ಟು ಸೂಕ್ಷ್ಮವಾಗಿ ವರ್ತಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ಗೃಹ ಇಲಾಖೆ ಸಿಕ್ಕಾಗ ಆರಗ ಜ್ಞಾನೇಂದ್ರ ದೊಡ್ಡ ಜವಾಬ್ದಾರಿ ತೆಗೆದುಕೊಂಡ ಖುಷಿಯಲ್ಲಿದ್ದರು. ಆದರೆ ನಂತರದ ದಿನಗಳಲ್ಲಿ ಯಾಕಾದ್ರೂ ಗೃಹ ಇಲಾಖೆ ಜವಾಬ್ದಾರಿ ತಗೊಂಡ್ನೋ ಎಂದು ಬೇಸರ ವ್ಯಕ್ತಪಡಿಸಿದ್ದರು. ಗೃಹ ಸಚಿವರೇ ನೀವು ಒಂದೇ ತಿಂಗಳಿಗೆ ನೀವು ಭ್ರಮನಿರಸನವಾದರೆ ಹೇಗೆ? ಪೊಲೀಸರಿಗೆ ನೀವು ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಬಲಪಡಿಸಲು ಏನು ಮಾಡಿದ್ದೀರಿ? ಹಿಂದೆಲ್ಲಾ ಸ್ಥಳೀಯ ಜನರೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿರುತ್ತಿದ್ದರು. ಸಲಹೆಗಳನ್ನು ಸ್ವೀಕರಿಸುತ್ತಿದ್ದರು, ಆದರೆ ಈಗ ಪರಿಸ್ಥಿತಿ ಏನಾಗಿದೆ? ಪೊಲೀಸರು ಅಪರಾಧಿಗಳ ಜೊತೆಯೇ ಶಾಮೀಲಾಗುತ್ತಿದ್ದಾರೆ. ಪೊಲೀಸರಿಗೆ ಗೊತ್ತಿಲ್ಲದೆ ಯಾರೂ ಗೂಂಡಾಗಿರಿ, ಕಳ್ಳತನ ಅಥವಾ ದರೋಡೆ ಮಾಡುವುದಕ್ಕೆ ಆಗುವುದಿಲ್ಲ. ಈ ಮಾತನ್ನು ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ ಎಂದು ನುಡಿದರು.
ರಾಜ್ಯದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಮೈಸೂರು ಜಿಲ್ಲೆಗೆ ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಅಂಥ ಸ್ಥಳದಲ್ಲಿಯೇ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ನಡೆದಿದೆ. ಗ್ಯಾಂಗ್‌ರೇಪ್ ಬಗ್ಗೆ ಬಹಳ ಕೇವಲವಾಗಿ ಕೆಲವರು ಹೇಳಿಕೆ ಕೊಡುತ್ತಿದ್ದಾರೆ. ಈ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಘಟನೆ ನಡೆದು ವಾರದ ಬಳಿಕ ನಾನು ಆ ಸ್ಥಳಕ್ಕೆ ಹೋಗಿದ್ದೆ. ಆ ಸ್ಥಳ ಯಾರಿಗೆ ಸೇರಿದ್ದು ಎಂಬ ವಿಚಾರವನ್ನೇ ಪೊಲೀಸರು ಪತ್ತೆ ಮಾಡಿರಲಿಲ್ಲ. ಇವರ ಉದಾಸೀನತೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದರು.
ಘಟನಾ ಸ್ಥಳಕ್ಕೆ ಹೋಗದೆ ಪೊಲೀಸರು ಮಹಜರು ಮಾಡಿದ್ದಾರೆ. ನ್ಯಾಯಾಲಯದಲ್ಲಿ ಆರೋಪಿಗಳ ವಕೀಲರು ನಡೆಸುವ ಪಾಟಿಸವಾಲಿನಲ್ಲಿ ಪೊಲೀಸರು ಸಿಕ್ಕಿಹಾಕಿಕೊಳ್ತಾರೆ. ಬಹಳಷ್ಟು ಪೊಲೀಸ್ ಅಧಿಕಾರಿಗಳಿಗೆ ದಫೇದಾರ್ ಬರೆದಿದ್ದೇ ತನಿಖೆಯಾಗಿರುತ್ತೆ. ಮೈಸೂರು ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಆರಂಭದಲ್ಲಿ ಪೊಲೀಸರು ಸರಿಯಾಗಿ ಎಫ್‌ಐಆರ್ ದಾಖಲಿಸಿರಲಿಲ್ಲ. ಈ ಪ್ರಕರಣದ ನಂತರವೂ ನಾಯ್ಡು ನಗರ, ತುಮಕೂರು, ಯಾದಗಿರಿ ಸೇರಿದಂತೆ ಹಲವೆಡೆ ಅತ್ಯಾಚಾರ ನಡೆದಿವೆ. ಸರ್ಕಾರ ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.
ರಮೇಶ್‌ಕುಮಾರ್-ಸ್ಪೀಕರ್ ವಾಗ್ವಾದ
ಚರ್ಚೆಯಲ್ಲಿ ಮಧ್ಯಪ್ರವೇಶ ಮಾಡಿದ ಶಾಸಕ ರಮೇಶ್‌ಕುಮಾರ್, ಸ್ಥಳೀಯ ಪೊಲೀಸ್ ಅಧಿಕಾರಿಗಳ ತಪ್ಪನ್ನು ಪ್ರಸ್ತಾಪಿಸಿದರು. ಈ ವೇಳೆ ಕೆ.ಆರ್.ರಮೇಶ್‌ಕುಮಾರ್‌ಗೆ ಟಾಂಗ್ ಕೊಟ್ಟ ಮುಖ್ಯಮಂತ್ರಿ, ನೀವು ಬೇಕೆಂದೇ ಹೈ ಪಿಚ್‌ನಲ್ಲಿ ಮಾತಾಡ್ತೀರಿ. ನೀವು ಮಾತಾಡುವುದು ನಮಗೆ ಗೊತ್ತಿದೆ ಎಂದರು. ಸಿಎಂ ಮಾತಿಗೆ ಸಿಟ್ಟಾದ ರಮೇಶ್‌ಕುಮಾರ್, ಆಯ್ತು ನಾನು ಕ್ಷಮೆ ಕೇಳಿ ನನ್ನ ಸೀಟ್‌ನಲ್ಲಿ ಕುಳಿತುಕೊಳ್ತೇನೆ. ಸಿಎಂ ಆದವರೇ ನನ್ನ ಬಾಯಿ ಮುಚ್ಚಿಸುವುದಕ್ಕೆ ಯತ್ನಿಸ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
‘ನೀವು ಪ್ರತಿ ಬಾರಿ ಈ ರೀತಿ ಗದ್ದಲ ಮಾಡ್ಕೊಂಡೇ ಇರಿ, ಬೇರೆಯವರಿಗೆ ಅವಕಾಶ ಕೊಡಬಾರದಾ? ಈ ಸದನವನ್ನು ನಾನು ಬಹಳ ವರ್ಷಗಳಿಂದ ನೋಡಿದ್ದೇನೆ, ಎಲ್ಲವೂ ಗೊತ್ತಿದೆ ಎಂದು ನೀವು ಪದೇಪದೆ ಎದ್ದು ಮಾತಾಡೋದು ಸರಿಯಲ್ಲ. ನಿಮಗೆ ಗೊತ್ತಿರೋದು ಪ್ರಕಟ ಆಗಿದೆ. ಉದ್ವೇಗಕ್ಕೆ ಒಳಗಾಗಿ ಮಾತಾಡಬೇಡಿ’ ಎಂದು ರಮೇಶ್ ಕುಮಾರ್ ಮೇಲೆ ಹರಿಹಾಯ್ದರು. ಸ್ಪೀಕರ್ ಮಾತಿನಿಂದ ಸಿಟ್ಟಾದ ರಮೇಶ್‌ಕುಮಾರ್, ಇದೇನು ಚರ್ಚಾಸ್ಪರ್ಧೆಯೇ ಎಂದು ಪ್ರಶ್ನಿಸಿದರು. ನೀವೊಬ್ಬರೆ ಮಾತಾಡಿದ್ರೆ ಬೇರೆಯವರಿಗೆ ಮಾತಾಡೋಕೆ ಅವಕಾಶ ನೀಡೋದು ಬೇಡ್ವಾ ಎಂದು ಸ್ಪೀಕರ್ ಮರುಪ್ರಶ್ನೆ ಹಾಕಿದರು.
ಮಹಿಳಾ ಸದಸ್ಯರ ಧರಣಿ
ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ವಿಧಾನಸಭೆಯ ಮಹಿಳಾ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಅಂಜಲಿ ನಿಂಬಾಳ್ಕರ್ ಮತ್ತು ಸೌಮ್ಯಾ ರೆಡ್ಡಿ ಪ್ರತಿಭಟನೆ ನಡೆಸಿದರು. ಮಾತನಾಡಲು ಅವಕಾಶ ನೀಡಲು ಸ್ಪೀಕರ್ ಭರವಸೆ ನೀಡಿದ ನಂತರ ಧರಣಿ ಹಿಂಪಡೆದರು.
ಅನ್ಯಾಯ ಮಾಡಿಲ್ಲ: ಮುಖ್ಯಮಂತ್ರಿ ಪ್ರತಿಕ್ರಿಯೆ
ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಪೊಲೀಸರು ನ್ಯಾಯೋಚಿತ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಸ್ವತಃ ಸಂತ್ರಸ್ತೆಯೇ ಬಂದು ಹೇಳಿಕೆ ನೀಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಪೊಲೀಸರು ಎಷ್ಟು ಗಂಭೀರವಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನುವುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.
ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ತಡವಾಗಿದೆ ಎಂಬ ಆಕ್ಷೇಪಗಳನ್ನು ಮುಖ್ಯಮಂತ್ರಿ ತಳ್ಳಿಹಾಕಿದರು. ಹುಡುಗ 11 ಗಂಟೆಗೆ ಹೇಳಿಕೆ ನೀಡಿದ್ದಾನೆ. ಮಧ್ಯಾಹ್ನ 12 ಗಂಟೆಗೆ ಪ್ರಕರಣ ದಾಖಲಿಸಲಾಗಿದೆ. ಮೊದಲ ಎಫ್ಐಆರ್ನಲ್ಲೇ 376D ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕಾನೂನು ರೀತಿ ಕ್ರಮ ತೆಗೆದುಕೊಂಡಿದ್ದಾರೆ. ಸಂತ್ರಸ್ತೆ ತಾನಾಗಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೇ ಆಸ್ಪತ್ರೆಯಲ್ಲೇ ಸಂತ್ರಸ್ತೆಗೆ ರಕ್ಷಣೆ ನೀಡಿದ್ದೇವೆ ಎಂದು ಹೇಳಿದ ನಂತರ 2013ರ ಮಣಿಪಾಲ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದರು.
ಕರ್ನಾಟಕದಲ್ಲಿ 2013-16ರಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಎನ್‌ಸಿಆರ್ ರಿಪೋರ್ಟ್ ಓದಿದರು. ಇದರಿಂದ ಸಿಟ್ಟಾದ ವಿರೋಧ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದರು.
ಇದನ್ನೂ ಓದಿ: ಮೈಸೂರು ಅತ್ಯಾಚಾರ ಪ್ರಕರಣ: ಆರೋಪಿಗಳಿಂದ ತಪ್ಪೊಪ್ಪಿಗೆ
ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
(Mysore Rape Case Echoed in Karnataka Assembly Session Siddaramaiah Basavaraj Bommai Debate)