Gender Sensitivity: ಬೇಕಾಬಿಟ್ಟಿಯಾಗಿ ರೇಪ್ ಪದ ಬಳಕೆಗೆ ವಿಧಾನಸಭಾ ಸದಸ್ಯೆಯರ ಆಕ್ಷೇಪ, ಪಕ್ಷಭೇದ ಮೀರಿದ ಮಾದರಿ ಚರ್ಚೆ

Gender Sensitivity: ಬೇಕಾಬಿಟ್ಟಿಯಾಗಿ ರೇಪ್ ಪದ ಬಳಕೆಗೆ ವಿಧಾನಸಭಾ ಸದಸ್ಯೆಯರ ಆಕ್ಷೇಪ, ಪಕ್ಷಭೇದ ಮೀರಿದ ಮಾದರಿ ಚರ್ಚೆ
ಶಾಸಕಿಯರಾದ ಅಂಜಲಿ ನಿಂಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸೌಮ್ಯಾ ರೆಡ್ಡಿ

‘ಮಹಿಳೆಯರು ಏನೂ ತಪ್ಪೂ ಮಾಡಿಲ್ಲ, ನಿರ್ಬಂಧಗಳ ಬೇಲಿಯಲ್ಲಿ ಅವರನ್ನೇಕೆ ಬಂಧಿಸುತ್ತೀರಿ. ಬದಲಾಗಬೇಕಿರುವುದು ಪುರುಷರು, ನಿರ್ಬಂಧಗಳು ಬೇಕಿರುವುದು ಪುರುಷರಿಗೆ’ ಎಂದು ಶಾಸಕಿಯರು ದೃಢವಾಗಿ ಪ್ರತಿಪಾದಿಸಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 22, 2021 | 9:01 PM


ಬೆಂಗಳೂರು: ಮೈಸೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ವರದಿಯಾಗಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಅರ್ಥಪೂರ್ಣ ಚರ್ಚೆ ನಡೆಯಿತು. ಚರ್ಚೆಯಲ್ಲಿ ಪಾಲ್ಗೊಂಡ ಮಹಿಳಾ ಸದಸ್ಯರು ಪಕ್ಷಭೇದ ಮರೆತು ಒಕ್ಕೊರಲಿನಿಂದ ಘಟನೆಯನ್ನು ಖಂಡಿಸಿದ್ದು ಮಾತ್ರವಲ್ಲ, ‘ರೇಪ್ ಪದವನ್ನು ಬೇಕಾಬಿಟ್ಟಿಯಾಗಿ ಬಳಸಬೇಡಿ. ಈ ಪದ ಕೇಳಿದರೇ ನಮ್ಮ ಮನಸ್ಸಿಗೆ ನೋವಾಗುತ್ತದೆ’ ಎಂದು ಸರ್ಕಾರ ಮತ್ತು ಇತರ ಸದಸ್ಯರನ್ನು ಒತ್ತಾಯಿಸಿದರು. ‘ಬದಲಾಗಬೇಕಿರುವುದು ಹೆಣ್ಣುಮಕ್ಕಳಲ್ಲ. ಅವರನ್ನು ನೋಡುವ ಪುರುಷರ ಕಣ್ಣುಗಳು. ಮಹಿಳೆಯರು ಏನೂ ತಪ್ಪೂ ಮಾಡಿಲ್ಲ, ನಿರ್ಬಂಧಗಳ ಬೇಲಿಯಲ್ಲಿ ಅವರನ್ನೇಕೆ ಬಂಧಿಸುತ್ತೀರಿ. ಬದಲಾಗಬೇಕಿರುವುದು ಪುರುಷರು, ನಿರ್ಬಂಧಗಳು ಬೇಕಿರುವುದು ಪುರುಷರಿಗೆ’ ಎಂದು ದೃಢವಾಗಿ ಪ್ರತಿಪಾದಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯೂರು ಶಾಸಕಿ ಪೂರ್ಣಿಮಾ, ಸುಮಾರು ಎರಡು ತಿಂಗಳ ಹಿಂದೆ ಹೊಳಲ್ಕೆರೆಯಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ನಾವು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇವೆ. ಆದರೆ ಆ ತಾಯಿಗೆ ಮಗು ಕೊಡಿಸುವುದಕ್ಕೆ ಆಗಿಲ್ಲ. ಆ ಘಟನೆಯ ಬಳಿಕ 1 ವಾರ ನನ್ನ ಮನಸ್ಸಿಗೆ ನೋವಾಗಿತ್ತು. ಹೆಣ್ಣನ್ನು ಗೌರವಿಸುವ ದೇಶದಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಹೀಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹೆಣ್ಣನ್ನು ನೋಡುವ ಪುರುಷರ ದೃಷ್ಟಿ ಬದಲಾಗಬೇಕು. ಇಲ್ಲದಿದ್ದರೆ ಇಂತಹ ದೌರ್ಜನ್ಯ ತಡೆಯಲು ಆಗುವುದಿಲ್ಲ. ಆರೋಪಿಗಳಿಗೆ 1-2 ವರ್ಷದಲ್ಲೇ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗದ ಪ್ರಕರಣ ಎಂಥವರೂ ತಲೆತಗ್ಗಿಸುವಂಥದ್ದರು. ಬಾಲಕಿಯನ್ನು ಮನೆಯಲ್ಲಿ ಬಿಟ್ಟು ಹೋಗಿದ್ದ ತಾಯಿಗೆ ಮರಳಿ ಬಂದಾಗ ಮಗಳು ಕಾಣಿಸಲಿಲ್ಲ. ಆ ಬಾಲಕಿ ಮೇಲೆ ಅತ್ಯಾಚಾರವೂ ಆಗಿತ್ತು, ಅವಳ ಜೀವವೂ ಉಳಿಯಲಿಲ್ಲ. ಯಾವ ಸರ್ಕಾರ ಇದೆ ಎಂದು ಈಗ ನಾವು ಮಾತಾಡೋದು ಬೇಡ. ಒಂದು ಮಗುವಿಗೆ ರಕ್ಷಣೆ ಕೊಡಲು ಆಗಿಲ್ಲ ಎಂಬುದೇ ನನ್ನನ್ನು ಕಾಡುತ್ತಿರುವ ಪ್ರಶ್ನೆ. ಯಾದಗಿರಿ ವಿಚಾರ ಪ್ರಸ್ತಾಪಿಸುವಾಗ ರೂಪಾ ಗದ್ಗದಿತರಾದರು. ಆ ಮಹಿಳೆ ಅದೆಷ್ಟು ಹಿಂಸೆ ಅನುಭವಿಸಿರಬೇಡ. ಆ ವಿಡಿಯೋ ನೋಡಿ ನನ್ನ ರಕ್ತ ಕುದಿಯಿತು ಎಂದರು.

ಬೇರೆ ದೇಶಗಳಲ್ಲಿ ಅತ್ಯಾಚಾರಿಗಳಿಗೆ ಕಲ್ಲು ಹೊಡೆದು ಸಾಯಿಸುತ್ತಾರೆ. ನಮ್ಮಲ್ಲಿ ಅಂಥದ್ದು ಆಗುವುದು ಬೇಡ. ಆದರೆ ಕಠಿಣ ಶಿಕ್ಷೆ ಆಗಲೇಬೇಕು. ಲೈಂಗಿಕ ದೌರ್ಜನ್ಯದಂಥ ಘಟನೆಗಳು ವರದಿಯಾದಾಗ ಹೆಣ್ಣನ್ನು ದೂಷಿಸಬಾರದು. ಅತ್ಯಾಚಾರಂಥ ಸಂದರ್ಭದಲ್ಲಿ ಹೆಣ್ಣುಮಕ್ಕಳ ಬಟ್ಟೆಯ ಬಗ್ಗೆಯೇ ದೂಷಣೆ ಮಾಡುತ್ತಾರೆ. ಪುಸ್ತಕದಲ್ಲಿ ಮಾತ್ರ ಹೆಣ್ಣನ್ನು ಗೌರವಿಸುತ್ತಾರೆ. ನಿಜ ಜೀವನದಲ್ಲಿ ಹೆಣ್ಣನ್ನು ಗೌರವಿಸಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಇಲಾಖೆಯು ಹೆಣ್ಣು ಮಕ್ಕಳ ರಕ್ಷಣೆಗಾಗಿ ಅರಿವು ಮೂಡಿಸುವ ಶಿಬಿರಗಳನ್ನು ನಡೆಸಬೇಕು. ಅತ್ಯಾಚಾರದ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕು. ಹೆಣ್ಣಿನ ವಸ್ತ್ರದ ಬಗ್ಗೆ ಮಾತನಾಡುವ ಸಮಾಜ ಗಂಡಿನ ವಸ್ತ್ರದ ಬಗ್ಗೆ ಮಾತ್ರ ಎಂದಿಗೂ ಮಾತನಾಡುವುದಿಲ್ಲ. ಮಾಲ್​ಗಳಿಗೆ ಕೆಲ ಪುರುಷರು ಶಾರ್ಟ್ಸ್ ಹಾಕಿಕೊಂಡು ಬರುತ್ತಾರೆ. ಕುಳಿತುಕೊಳ್ಳುವಾಗ ಶರ್ಟ್ ಮೇಲಿನ ಗುಂಡಿ ಬಿಚ್ಚಿ ಕೂರುತ್ತಾರೆ. ಇಂಥ ವರ್ತನೆಗಳನ್ನು ಏಕೆ ಪ್ರಶ್ನಿಸುವುದಿಲ್ಲ ಎಂದು ಕೇಳಿದರು.

2018-21ರ ಅವಧಿಯಲ್ಲಿ 1,300 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು. ಅದರಲ್ಲಿ ಕೇವಲ 6 ಜನರಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಪ್ರತಿ ತಾಲ್ಲೂಕಿನಲ್ಲಿ ಮಹಿಳಾ ಪೊಲೀಸ್ ಠಾಣೆ ಆರಂಭಿಸಬೇಕು. ಮಹಿಳಾ ಸಹಾಯವಾಣಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಗಂಡುಮಕ್ಕಳ ಮನಃಸ್ಥಿತಿ ಬದಲಿಸಿ: ಅಂಜಲಿ ನಿಂಬಾಳ್ಕರ್
‘ರೇಪ್’ ಪದವನ್ನು ತೀರಾ ಸಹಜ ಎನ್ನುವಂತೆ, ಯಾವುದೇ ಸೂಕ್ಷ್ಮತೆ ಇಲ್ಲದೆ ಬಳಸಬಾರದು. ಈ ಪದ ಕೇಳಿದಾಕ್ಷಣ ಹೆಣ್ಣುಮಕ್ಕಳ ಭಾವನೆಗಳು ಎಷ್ಟು ಕಂಪಿಸುತ್ತವೆ ಎಂಬುದು ನಮಗೆ ಗೊತ್ತು ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಒತ್ತಾಯಿಸಿದರು. ರೇಪ್ ಎನ್ನುವುದು ಶಿಕ್ಷಾರ್ಹ ಅಪರಾಧ ಎಂಬ ಶಿಕ್ಷಣವನ್ನು ಗಂಡು ಮಕ್ಕಳಿಗೆ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮೈಸೂರು ಪ್ರಕರಣದಲ್ಲಿಯೂ ಪೊಲೀಸರು ಏಕೆ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಲಿಲ್ಲ. ಹೆಣ್ಣು ಮಗಳ ಮೇಲೆ ದೋಷ ಹೊರಿಸುವುದು ಸರಿಯಲ್ಲ. ನಾನು ಯಾವುದೇ ಪಕ್ಷದ ಪರವಾಗಿ ನಿಂತು ಮಾತನಾಡುತ್ತಿಲ್ಲ. ಒಬ್ಬ ಮಹಿಳೆಯಾಗಿ ಈ ವಿಚಾರ ಪ್ರಸ್ತಾಪಿಸುತ್ತಿದ್ದೇನೆ. ಪೊಲೀಸ್ ಅಧಿಕಾರಿಗಳನ್ನು ಪದೇಪದೆ ವರ್ಗಾವಣೆ ಮಾಡುವುದು ನಿಲ್ಲಿಸಿ. ಹೀಗೆ ಮಾಡಿದರೆ ಆ ಊರಿನ ಬಗ್ಗೆ ಪೊಲೀಸರಿಗೆ ಕಾಳಜಿ ‌ಇರಲ್ಲ. ನನ್ನ ಪತಿ ಕೂಡ ಐಪಿಎಸ್ ಅಧಿಕಾರಿ. ಅವರ ಕಷ್ಟವನ್ನು ನಾನು ನೋಡಿದ್ದೇನೆ ಎಂದು ನುಡಿದರು.

ಅತ್ಯಾಚಾರದಂಥ ಗಂಭೀರ ವಿಚಾರದಲ್ಲಿ ಆಡಳಿತ ಪಕ್ಷದ ಸದಸ್ಯರು ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ. ನನಗೆ ಇದರಿಂದ ನೋವಾಗಿದೆ ಎಂದು ಗದ್ಗದಿತರಾದರು. ಅವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು. ಕಾಂಗ್ರೆಸ್ ರೇಪ್ ಮಾಡುತ್ತಿದೆ ಎಂದು ಗೃಹ ಸಚಿವರು ಹೇಳುತ್ತಾರೆ. ಈ ಹೇಳಿಕೆ ನೀಡುವುದು ಬಹಳ ಸುಲಭ. ಅದನ್ನು ಕೇಳಿಸಿಕೊಂಡವರಿಗೆ ಆಗುವ ನೋವು ಅವರಿಗೇನು ಗೊತ್ತು ಎಂದು ಪ್ರಶ್ನಿಸಿದರು.

ಸಂತ್ರಸ್ತರ ಪೋಷಕರಿಗೆ ಆ ನೋವಿನ ಬಗ್ಗೆ ಗೊತ್ತಿರುತ್ತದೆ. ನಮ್ಮ ಕಾಲದಲ್ಲಿ ಅತ್ಯಾಚಾರ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಇದರಲ್ಲಿ ಹೆಚ್ಚು ಅಥವಾ ಕಡಿಮೆ ಏನು ಬಂತು. ಅಲ್ಲಿ ಆಗಿರೋಧು ಅತ್ಯಾಚಾರ. ಈ ವಿಚಾರಕ್ಕೆ ಬೆಟ್ಟು ಮಾಡೋದು ನೋಡಿದರೆ ನಾಚಿಕೆಯಾಗುತ್ತೆ. 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏನಾಗಿದೆ? ಪೊಲೀಸರು ಏನು ಮಾಡುತ್ತಿದ್ದಾರೆ? ನಿರ್ಭಯಾ ಫಂಡ್ ಬಳಕೆಯಾಗುತ್ತಿಲ್ಲ ಏಕೆ ಎಂದು ಕಠಿಣವಾಗಿ ಪ್ರಶ್ನಿಸಿದರು.

ಮೈಸೂರು ರೇಪ್​​ ಪ್ರಕರಣದ ಬಗ್ಗೆ ಮಾತನಾಡುವಾಗ ಒಂದು ಹಂತದಲ್ಲಿ ಶಾಸಕಿ ಅಂಜಲಿ ಕಣ್ಣೀರು ಹಾಕಿದರು. ಅಂಜಲಿ ಅವರನ್ನು ಸಮಾಧಾನ ಪಡಿಸಲು ಶಾಸಕ ರಾಜುಗೌಡ ಯತ್ನಿಸಿದರು. ಬಳಿಕ ಸದನದಿಂದ ಹೊರಬಂದು ವಿಪಕ್ಷದ ಮೊಗಸಾಲೆಯಲ್ಲಿ‌ ಅಂಜಲಿ ಕುಳಿತರು.

ಮಹಿಳೆಯರ ವಿಚಾರದಲ್ಲಿ ರಾಜಕೀಯ ಸಲ್ಲದು: ಸೌಮ್ಯಾ ರೆಡ್ಡಿ
ಅತ್ಯಾಚಾರದ ವಿಚಾರದಲ್ಲಿ ನನಗೆ ರಾಜಕೀಯ ಬೇಕಿಲ್ಲ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಹೇಳಲು ಹೋಗುವುದಿಲ್ಲ. ಆ ಸರ್ಕಾರ, ಈ ಸರ್ಕಾರ ಎಂದು ನಾನು ಪ್ರಸ್ತಾಪ ಮಾಡುವುದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯವಾದಾಗ ರಾಜಕೀಯ ಮಾಡುವುದು ಬೇಡ ಎಂದು ಶಾಸಕಿ ಸೌಮ್ಯಾ ರೆಡ್ಡಿ ವಿನಂತಿಸಿದರು. ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಗಂಭೀರವಾಗಿ ಪರಿಗಣಿಸಿ, ಪರಿಹಾರಕ್ಕಾಗಿ ಯೋಚಿಸಿ. ಅದು ಬಿಟ್ಟು ಮಹಿಳೆಯ ಮೇಲೆಯೇ ದೂರುವುದು ಸರಿಯಲ್ಲ. ಆ ಮಹಿಳೆ ಏಕೆ ಅಲ್ಲಿಗೆ ಹೋದರು, ಏಕೆ ಆ ಬಟ್ಟೆ ಹಾಕಿಕೊಂಡರು ಎಂದೆಲ್ಲಾ ಪ್ರಶ್ನಿಸಿದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪರಾಧ ಪ್ರಕರಣಗಳ ಸರಾಸರಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಮಹಿಳಾ ಸಾಂತ್ವನ ಕೇಂದ್ರಗಳನ್ನು ಮುಚ್ಚುತ್ತಿದ್ದಾರೆ. ನಗರ ಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಮಹಿಳೆಯನ್ನು ದೇವಿ ಎಂದು ಪೂಜೆ ಮಾಡುತ್ತಾರೆ. ನಮಗೆ ಪೂಜೆ ಬೇಕಿಲ್ಲ, ಗೌರವ ಕೊಟ್ಟರೆ ಸಾಕು. ದೇಶದಲ್ಲಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರು ಇದ್ದೇವೆ ಎಂದರು.

ಹುಡುಗರನ್ನು ಕೂಡಿ ಹಾಕಿ: ವಿನೀಶಾ ನೀರೋ
ಇಂಗ್ಲಿಷ್​ನಲ್ಲಿ ಮಾತನಾಡುವ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡ ನಾಮನಿರ್ದೇಶಿತ ಶಾಸಕಿ ವಿನೀಶಾ ನೀರೋ, ಸಂಜೆ 6 ಗಂಟೆಯ ನಂತರ ಹುಡುಗಿಯರು ಹೊರಗೆ ಓಡಾಡಬಾರದು ಎಂಬ ಮೈಸೂರು ವಿವಿ ಕುಲಪತಿ ಹೇಳಿಕೆಯ ಬಗ್ಗೆ ಆಕ್ಷೇಪಿಸಿದರು. ತಪ್ಪು ಮಾಡುತ್ತಿರುವುದು ಹುಡುಗರು, ಅವರನ್ನು ಒಳಗೆ ಕೂಡಿಹಾಕಿ. ಹುಡುಗಿಯರು ಹೊರಗೆ ಓಡಾಡಿಕೊಂಡರಲಿ. ಹುಡುಗಿಯರ ಸ್ವಾತಂತ್ರ್ಯ ನಿರ್ಬಂಧಿಸುವ ಮೈಸೂರು ವಿವಿ ಕುಲಪತಿಯನ್ನು ಇನ್ನೂ ಏಕೆ ಅಮಾನತು ಮಾಡಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೈಸೂರು ಅತ್ಯಾಚಾರ ಪ್ರಕರಣ: ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್

ಇದನ್ನೂ ಓದಿ: ಮೈಸೂರು ಅತ್ಯಾಚಾರದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಗೆ ಕ್ರಮ; ಮೈಸೂರು ಪೊಲೀಸರ ಕುರಿತು ಕಲಾಪದಲ್ಲಿ ಶ್ಲಾಘನೆ

(Women Legislatures Condemns Mysore Rape demand govt to work hard to punish culprits)


Follow us on

Most Read Stories

Click on your DTH Provider to Add TV9 Kannada