ಮೈಸೂರು: ಮಾಜಿ ಎಂಎಲ್ಸಿ ಸಂದೇಶ್ ನಾಗರಾಜ್ (Sandesh Nagaraj) ಅವರು ಬಿಜೆಪಿ ತೊರೆದು ಜನವರಿಯಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ಮಾತನಾಡುತ್ತಿದ್ದರೆ, ಇತ್ತ ಸಚಿವ ಕೆ.ಸಿ ನಾರಾಯಣಗೌಡ (K.C.Narayana Gowda) ಅವರು, ಕಾಂಗ್ರೆಸ್ನಿಂದ ಬಿಜೆಪಿಗೆ ಸೇರಿದ ಯಾರೊಬ್ಬರೂ ಬಿಜೆಪಿ ತೊರೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಪಕ್ಷ ತೊರೆಯುವ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಂದೇಶ್ ನಾಗರಾಜ್, ಬಿಜೆಪಿಯಂತಹ ಮೋಸಗಾರರು ಯಾರೂ ಇಲ್ಲ. ನಾನು ಬಿಜೆಪಿ ತೊರೆದು ಜನವರಿಯಲ್ಲಿ ಕಾಂಗ್ರೆಸ್ ಸೇರುತ್ತೇನೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ.
ಬಿಜೆಪಿ ನನ್ನನ್ನು, ಎಚ್.ವಿಶ್ವನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಲಿ ಕೊಟ್ಟಿದೆ. ಇದೀಗ ಬಿ.ವೈ.ವಿಜಯೇಂದ್ರ ಅವರ ಸರದಿ. ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಿ ಬಲಿ ಕೊಡಲು ಪ್ಲ್ಯಾನ್ ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಿ ವಿಜಯೇಂದ್ರರನ್ನು ಸೋಲಿಸಲು ತಂತ್ರ ರೂಪಿಸಲಾಗುತ್ತಿದೆ. ವರುಣಾ ಬದಲು ಶಿಕಾರಿಪುರದಿಂದ ವಿಜಯೇಂದ್ರ ಅವರು ಸ್ಪರ್ಧೆ ಮಾಡಲಿ. ರಾಜಕೀಯವಾಗಿ ಅವರು ಬೆಳೆಯಬೇಕಾದರೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಬೇಡ, ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧಿಸಲಿ ಎಂದರು.
ಈ ಬಾರಿ ಬಿಜೆಪಿ ಗೆಲ್ಲುವುದಿಲ್ಲ, ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಪರಿಷತ್ ಸ್ಥಾನ ಕೊಡುತ್ತೇವೆ ಎಂದು ನನ್ನನ್ನು ಬಿಜೆಪಿಗೆ ಕರೆತಂದರು. ನನ್ನನ್ನು ಬಳಸಿಕೊಂಡು ಬಿಜೆಪಿಯವರು ಮೋಸ ಮಾಡಿದವರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಂದೇಶ್, ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ ನಾನು ಬಿಜೆಪಿ ತೊರೆಯುತ್ತೇನೆ ಎಂದರು.
ಜೆಡಿಎಸ್ನಲ್ಲಿದ್ದ ಸಂದೇಶ್ ನಾಗರಾಜ್ ಅವರು ಒಂದು ವರ್ಷದ ಹಿಂದೆ ಅಂದರೆ 2021ರಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದರು. ಅಕ್ಟೋಬರ್ ತಿಂಗಳಲ್ಲಿ ಜೆಡಿಎಸ್ ತೊರೆಯುವ ಹೇಳಿಕೆ ನೀಡಿದ್ದ ಅವರು, ಜನವರಿಯಲ್ಲಿ ಬಿಜೆಪಿ ಸೇರುತ್ತೇನೆ ಎಂದಿದ್ದರು. ಅದರಂತೆ ಬಿಜೆಪಿ ಸೇರಿದ್ದ ಅವರು ಇದೀಗ ಒಂದು ವರ್ಷದಲ್ಲಿ ಅಂದರೆ 2022ರಲ್ಲಿ ಬಿಜೆಪಿ ತೊರೆದು ಜನವರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರುವುದಾಗಿ ಹೇಳಿದ್ದಾರೆ.
ಹದಿನೇಳು ಮಂದಿ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕರು ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಯಾಗುವ ವಿಚಾರ ಸಂಬಂಧ ಮಾತನಾಡಿದ ಸಚಿವ ಕೆ.ಸಿ.ನಾರಾಯಣ ಗೌಡ, ನಾವು ಹದಿನೇಳು ಮಂದಿ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದಿದ್ದಾರೆ. ಮೈಸೂರಿನಲ್ಲಿ ಹೇಳಿಕೆ ನೀಡಿದ ಅವರು, ಬಿಜೆಪಿ ಸೇರ್ಪಡೆ ಆದ ಬಳಿಕ ನಮ್ಮನ್ನು ಪಕ್ಷ ಚೆನ್ನಾಗಿ ನಡೆಸಿಕೊಂಡಿದೆ. ಸಚಿವ ಸ್ಥಾನ ಕೊಟ್ಟು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ನಾವು ಬಿಜೆಪಿ ತೊರೆಯುವುದಿಲ್ಲ, ಬಿಜೆಪಿಯಲ್ಲೇ ಮುಂದುವರೆಯುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಎಂದರು.
ರಾಜ್ಯದಲ್ಲಿ ಗೂಂಡಾಗಳನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷ
ರೌಡಿಶೀಟರ್ಗಳನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಿರುವ ಆರೋಪ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಾರಾಯಣಗೌಡ, ರಾಜ್ಯದಲ್ಲಿ ಗೂಂಡಾಗಳನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ನಲ್ಲಿ ಎಷ್ಟು ಗೂಂಡಾಗಳಿಲ್ಲ? ಅವರನ್ನು ಏಕೆ ಓಡಿಸಿಲ್ಲ? ರೌಡಿಶೀಟರ್ಗಳಿಗೆ ಫಂಡಿಂಗ್ ಮಾಡುತ್ತಿದ್ದವರು ಯಾರು ಎಂದು ಪ್ರಶ್ನಿಸಿ ಬಿಜೆಪಿ ಸೇರುವವರನ್ನು ರೌಡಿಶೀಟರ್ ಎಂದು ಹೇಳುತ್ತಿದ್ದಾರೆ, ಕಾಂಗ್ರೆಸ್ನವರಿಗೆ ಹೊಟ್ಟೆ ಉರಿ ಶುರುವಾಗಿದೆ ಎಂದಿದ್ದಾರೆ.
ಅಲ್ಲಿದ್ದವರು ಬಿಜೆಪಿ ಸೇರುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಬಿಜೆಪಿ ಸೇರುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಕಾಂಗ್ರೆಸ್ನವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಸೇರ್ಪಡೆಗೆ ಮುಂದಾಗಿರುವವರು ಅವರ ಪಕ್ಷದಲ್ಲಿ ಇರುವವರೆಗೂ ರೌಡಿಶೀಟರ್‌ಗಳಾಗಿರಲಿಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಬಿಜೆಪಿಯಲ್ಲಿ ಇರುವವರು ಪುಣ್ಯಾತ್ಮರು, ವಿದ್ಯಾವಂತರು, ತ್ಯಾಗಿಗಳು, ಆರ್ಎಸ್ಎಸ್ ಹಿನ್ನೆಲೆಯುಳ್ಳವರು. ಮಚ್ಚು ಹಿಡಿಯುವವರು ಯಾವ ಪಕ್ಷದಲ್ಲಿದ್ದಾರೆಂದು ಗೊತ್ತಿದೆ, ಅವರು ಎಲ್ಲಿದ್ದಾರೆಂಬುದು ಎಲ್ಲರಿಗೂ ಗೊತ್ತು ಎಂದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:08 pm, Mon, 12 December 22