ಮಂಡ್ಯ, (ನವೆಂಬರ್ 03): ಮುಂದಿನ ಲೋಕಸಭೆ ಚುನಾವಣೆಗೆ (Loksabha Elections 2024) ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಕರ್ನಾಟಕದಲ್ಲಿ ಜಂಟಿಯಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಈಗಾಗಲೇ ಜೆಡಿಎಸ್ ನಾಯಕರು, ಬಿಜೆಪಿ ಹೈಕಮಾಂಡ್ ಮಾತುಕತೆ ನಡೆಸಿ ಮೈತ್ರಿ ಫೈನಲ್(BJP And JDS Alliance) ಮಾಡಿಕೊಂಡಿದ್ದಾರೆ. ಆದ್ರೆ, ಕ್ಷೇತ್ರ ಹಂಚಿಕೆಯಲ್ಲಿ ಎರಡೂ ಪಕ್ಷಗಳ ನಡುವೆ ಕಗ್ಗಂಟಾಗಿದೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರ (Mandya Loksabha constituency) ಭಾರೀ ಸದ್ದು ಮಾಡುತ್ತಿದೆ. ಒಂದು ಕಡೆ ಜೆಡಿಎಸ್ (JDS) ಮಂಡ್ಯವನ್ನು ತಮಗೆ ಬಿಟ್ಟು ಕೊಡುವಂತೆ ಬೇಡಿಕೆ ಇಟ್ಟಿದ್ದರೆ, ಇತ್ತ ಬಿಜೆಪಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ಚಿಂತನೆ ನಡೆಸಿದೆ. ಇದರಿಂದ ಉಭಯ ಪಕ್ಷಗಳ ನಡುವೆ ಮಂಡ್ಯ ಕ್ಷೇತ್ರಕ್ಕಾಗಿ ಪೈಪೋಟಿ ನಡೆದಿದೆ. ಇದರ ಮಧ್ಯೆ ಸುಮಲತಾ ಅಂಬರೀಶ್ (Sumalatha Ambareesh) ಮಾತ್ರ ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮುಂಬರು ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಸೇರಿದಂತೆ ನಾಲ್ಕೈದು ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಜೆಡೆಎಸ್, ಬಿಜೆಪಿ ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದೆ. ಆದ್ರೆ, ಇತ್ತ ಸಂಸದೆ ಸುಮಲತಾ ಅಂಬರೀಶ್, ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ. ರಾಜಕಾರಣ ಬಿಟ್ಟರೂ ಸ್ವಾಭಿಮಾನ, ಸಿದ್ದಾಂತ ಬಿಡಲ್ಲ ಎಂದಿದ್ದಾರೆ. ಈ ಹೇಳಿಕೆಯೊಂದಿಗೆ ಸುಮಲತಾ ಪರೋಕ್ಷವಾಗಿ ಮೈತ್ರಿ ಖಡಕ್ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ಬೆನ್ನಲ್ಲೇ ಮೋದಿ ಭೇಟಿಯಾದ ಸುಮಲತಾ, ಮಂಡ್ಯದ ಬಗ್ಗೆ ಮಹತ್ವದ ಚರ್ಚೆ
ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ ರಾಜಕಾರಣ ಬಿಟ್ಟರೂ ಸ್ವಾಭಿಮಾನ, ಸಿದ್ದಾಂತ ಬಿಡಲ್ಲ. ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟು ಹರಸಿದ್ದಾರೆ. ಮಂಡ್ಯ ಬಿಟ್ಟು ನಾನು ಬೇರೆ ಕಡೆ ಹೋಗಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಜೆಡಿಎಸ್ ಬಿಜೆಪಿ ಮೈತ್ರಿ ಆಗಿದೆ. ಆದರೆ ಕ್ಷೇತ್ರ ಹಂಚಿಕೆ ಇನ್ನು ಆಗಿಲ್ಲ. ಈಗ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡಲ್ಲ. ನಾನು ದುಡುಕಿನ ನಿರ್ಧಾರ ಮಾಡಲ್ಲ. ಕ್ಷೇತ್ರ ಹಂಚಿಕೆ ಬಗ್ಗೆ ಮಾತುಕತೆ ನೂರಾರು ನಡೆದಿರಬಹುದು. ಆದರೆ ಇನ್ನು ಯಾವುದೇ ಕ್ಷೇತ್ರ ಹಂಚಿಕೆ ಕನ್ಫರ್ನ್ ಆಗಿಲ್ಲ. ಮಂಡ್ಯ ಜನ ನನ್ನ ಜೊತೆ ಇದ್ದಾರೆ. ನನಗೆ ಆ ಕಾನ್ಫಿಡೆನ್ಸ್ ಇದೆ. ಈ ಕ್ಷೇತ್ರ ಬೇಕು, ಆ ಕ್ಷೇತ್ರ ಬೇಕು ಎಂದು ಯಾವ ಪಕ್ಷವನ್ನು ಕೇಳಿಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ನನಗೆ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ದೋಸ್ತಿ: ಸುಮಲತಾ ಅಂಬರೀಶ್ ಅತಂತ್ರದ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು
ಬೆಂಗಳೂರು ಉತ್ತರ ಕ್ಷೇತ್ರದ ಆಫರ್ ಕಳೆದ ಚುನಾವಣೆಯಲ್ಲೇ ನಿರಾಕರಿಸಿದ್ದೆ. ನನಗೆ ಈ ಸ್ಥಾನಮಾನ ಕೊಟ್ಟಿದ್ದು ಮಂಡ್ಯ ಜನರು. ಬೇರೆ ಕ್ಷೇತ್ರದ ಆಫರ್ ಎಂದಿಗೂ ಒಪ್ಪಲ್ಲ. ಇದನ್ನ ನೂರಾರು ಬಾರಿ ಹೇಳಿದ್ದೇನೆ. ಇನ್ನು ರಕ್ತದಲ್ಲಿ ಬರೆದು ಕೊಡಬೇಕಾ? ಮಂಡ್ಯ ಜಿಲ್ಲೆ ರಾಜಕಾರಣ ಯಾವಾಗಲೂ ಚಾಲೆಂಜಿಂಗ್. ಚಾಲೆಂಜ್‌ಗೆ ಹೆದರುವ ಸ್ವಭಾವ ನನ್ನದ್ದಲ್ಲ ಎಂದು ಖಡಕ್ ಆಗಿ ಹೇಳಿದರು. ಸುಮಲತಾ ಅವರ ಈ ಹೇಳಿಕೆ ಗಮನಿಸಿದರೆ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ಗೆ ಖಡಕ್ ಸಂದೇಶ ನೀಡಿದಂತಿದೆ.
ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸುವ ಬಿಜೆಪಿ ಪ್ಲಾನ್ ಮಾಡಿದೆ. ಆದ್ರೆ, ಜೆಡಿಎಸ್ ಮಾತ್ರ ಮಂಡ್ಯ ಕ್ಷೇತ್ರವನ್ನು ಪಡೆಯಲೇಬೇಕೆಂದು ಪಟ್ಟು ಹಿಡಿದಿದೆ. ಈಗಾಗಲೇ ಜೆಡಿಎಸ್ ಕಣ್ಣಿಟ್ಟಿರುವ ಕ್ಷೇತ್ರಗಳ ಪಟ್ಟಿಯೊಂದನ್ನು ಬಿಜೆಪಿ ಹೈಕಮಾಂಡ್ ಗೆ ಕೊಟ್ಟಿದ್ದು, ಆ ಪಟ್ಟಿಯಲ್ಲಿ ಮಂಡ್ಯ ಕೂಡ ಇದೆ. ಹೀಗಾಗಿ ಲೋಕಸಭಾ ಚುನಾವಣೆಗೂ ಮುನ್ನವೇ ಮಂಡ್ಯ ಕ್ಷೇತ್ರ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಂತಿಮವಾಗಿ ಸಕ್ಕರೆ ನಾಡು ಯಾರ ಪಾಲಾಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಹಾಗೊಂದು ವೇಳೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಅಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ಗೆದ್ದು ಬಂದಿದ್ದ ಸುಮಲತಾ ಅವರಿಗೆ ತೊಂದರೆಯಾಗಲಿದೆ. ಹಾಗಾದಲ್ಲಿ ಸುಮಲತಾ ಅವರ ಮುಂದಿನ ನಡೆಯೇನು ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಅವರ ಈ ಹೇಳಿಕೆಯನ್ನು ಸೂಕ್ಷ್ಮವಾಗಿ ನೋಡಿದರೆ ಯಾವುದೇ ಕಾರಣಕ್ಕೂ ಮಂಡ್ಯವನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಬಿಜೆಪಿ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟರೆ ಸುಮಲತಾ ಅವರು ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಕಾಂಗ್ರೆಸ್ನಿಂದ ಸ್ಪರ್ಧಿಸಿದರೂ ಅಚ್ಚರಿ ಪಡಬೇಕಿಲ್ಲ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Fri, 3 November 23