ಕರ್ನಾಟಕದಲ್ಲಿ ಸದ್ಯಕ್ಕೆ ಸಿಎಂ, ರಾಜ್ಯಾಧ್ಯಕ್ಷರ ಬದಲಾವಣೆಯಿಲ್ಲ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್
ನಾಯಕತ್ವ ಬದಲಾವಣೆಯ ಬಗ್ಗೆ ಕಾಂಗ್ರೆಸ್ ಕೇವಲ ಗಾಳಿ ಸುದ್ದಿ ಹಬ್ಬಿಸುತ್ತಿದೆ ಎಂದು ಅರುಣ್ ಸಿಂಗ್ ಹೇಳಿದರು
ಬೆಂಗಳೂರು: ಕರ್ನಾಟಕದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಅಥವಾ ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಿಸುವ ಆಲೋಚನೆಯಿಲ್ಲ ಎಂದು ಬಿಜೆಪಿ (BJP) ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಹೇಳಿದರು. ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಅರುಣ್ ಸಿಂಗ್ ರಾಜ್ಯದಲ್ಲಿ ಮುಖ್ಯಮಂತ್ರಿ ನಾಯಕತ್ವ ಬದಲಾವಣೆಯ ಬಗ್ಗೆ ಕಾಂಗ್ರೆಸ್ ಕೇವಲ ಗಾಳಿ ಸುದ್ದಿ ಹಬ್ಬಿಸುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಾಡಲು ಬೇರೆ ಕೆಲಸವಿಲ್ಲದೆ, ವಿನಾ ಕಾರಣ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಪಕ್ಷದ ಸಂಘಟನೆಗಾಗಿ ನಾನು ಬೆಂಗಳೂರಿಗೆ ಬಂದಿದ್ದೇನೆ. ನಾಳೆ ಇಡೀ ದಿನ ಸಭೆ, ಮುಂದಿನ ಚುನಾವಣೆಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ನುಡಿದರು.
ಸಿಂಧಗಿಯಲ್ಲಿ ದೊಡ್ಡ ಮಟ್ಟದ ಅಂತರದಿಂದ ಗೆದ್ದಿದ್ದೇವೆ, ಹಾನಗಲ್ನಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೇವೆ. ಆದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ. ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ಎಂದರು. ಬಿಟ್ಕಾಯಿಲ್ ಹಗರಣದಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ. ಕಾಂಗ್ರೆಸ್ನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರು ಆಧಾರರಹಿತವಾಗಿ ಆರೋಪ ಮಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ಗೆ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ. ಅವರ ನಡುವೆಯೇ ಸಾಕಷ್ಟು ಗೊಂದಲಗಳಿವೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಯೇ ದೊಡ್ಡ ಸಮಸ್ಯೆ ಇದೆ. ಯಾವುದೇ ಹೋರಾಟಕ್ಕೆ ಅವರಿಗೆ ವಿಷಯಗಳು ಸಿಗುತ್ತಿಲ್ಲ ಎಂದರು.
2023ರ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಾವು ಕಡಿಮೆ ಮಾಡಿದ್ದೇವೆ. ಸಿದ್ದರಾಮಯ್ಯ ಸಿಂಧಗಿಯಲ್ಲಿ ದಲಿತ ವಿರೋಧಿ ಪ್ರಚಾರ ಮಾಡಿದರು. ಅಷ್ಟಾದರೂ ಕೂಡ ನಾವು ಬಹುದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ. ಉಪ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಬಗ್ಗೆ ಸಮಾಧಾನವಿದೆ. 2023ರ ಎಲೆಕ್ಷನ್‌ನಲ್ಲೂ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಮತಗಳಿಂದ ಜಯ ಗಳಿಸ್ತಾರೆ -ಕರ್ನಾಟಕ ಉಸ್ತುವಾರಿ ನಾಯಕ ಅರುಣ್ ಸಿಂಗ್ ಇದನ್ನೂ ಓದಿ: ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್