ಬೆಂಗಳೂರು: ಮನಗೂಳಿ ಅವರು ನಮ್ಮನ್ನು ಬಂದು ಭೇಟಿ ಮಾಡಿದ್ದು ನಿಜ. ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯ ನನಗಿಲ್ಲ. ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಹೈಜಾಕ್ ಮಾಡುವ ಸ್ಥಿತಿ ಕಾಂಗ್ರೆಸ್ಗೆ ಬಂದಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಬೇಡ ಎನ್ನುವುದಿಲ್ಲ. ಕುಮಾರಸ್ವಾಮಿ ಅವರು ನೋವಿನಿಂದ ಮಾತನಾಡಿದ್ದು, ಅವರ ಮಾತಿಗೆ ನಾನು ಬೇಸರಿಸುವುದಿಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಸಿಂದಗಿ ಉಪಚುನಾವಣೆಯಲ್ಲಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಚಾರವಾಗಿ ಕುಮಾರಸ್ವಾಮಿ ಮಾಡಿರುವ ಟ್ವೀಟ್ಗೆ ಡಿ ಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದರು.
ಅಶೋಕ್ ಅವರು ನಮ್ಮ ಅಭ್ಯರ್ಥಿ. ಮನಗೂಳಿ ಅವರು ಬಂದು ನನ್ನನ್ನು ಭೇಟಿ ಮಾಡಿ ಮಾತನಾಡಿದ ವಿಚಾರ ನನಗೆ ಮನಗೂಳಿ ಹಾಗೂ ಅವರ ಪುತ್ರ ಅಶೋಕ್ಗೆ ಗೊತ್ತಿದೆ. ನಾನು ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದು, ಗೌಪ್ಯವಾಗಿ ಹೇಳಿಲ್ಲ. ನಾನು ಮಾತ್ರವಲ್ಲ ಸಿದ್ದರಾಮಯ್ಯನವರು ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾವು ಈ ವಿಚಾರದಲ್ಲಿ ಯಾಕೆ ಸುಳ್ಳು ಹೇಳಬೇಕು? ಅದರ ಅಗತ್ಯ ನಮಗೇನಿದೆ? ಬೇಕಿದ್ದರೆ ಅಶೋಕ್ ಮನಗೂಳಿ ಅವರನ್ನೇ ಕೇಳಿ ಅಂತ ಡಿಕೆಶಿ ಹೇಳಿದ್ದಾರೆ.
15 ದಿನಗಳ ಹಿಂದೆ ಭೇಟಿ ಮಾಡಿದ್ದರು ಅಂದರೆ ಕ್ಯಾಲೆಂಡರ್ ತೆಗೆದುಕೊಂಡು ಲೆಕ್ಕಹಾಕಿ ಹೇಳಿಲ್ಲ. ಅವರು ಸಾಯುವ ಸ್ವಲ್ಪ ದಿನಗಳ ಮೊದಲು ಭೇಟಿ ಮಾಡಿದ್ದರು. ತಮ್ಮ ಪಕ್ಷದಲ್ಲಿದ್ದವರು ಕಾಂಗ್ರೆಸ್ಗೆ ಹೋಗಿದ್ದಾರಲ್ಲ ಎಂಬ ನೋವು ಕುಮಾರಣ್ಣ ಅವರಿಗಿದೆ. ಆ ನೋವಿನಿಂದ ಮಾತನಾಡಿದ್ದಾರೆ. ಅದಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ನಾವು ಯಾರನ್ನೂ ಹೈಜಾಕ್ ಮಾಡುವುದಿಲ್ಲ. ನಮ್ಮಲ್ಲಿ ಸಾಕಷ್ಟು ಸಂಖ್ಯಾ ಬಲ ಇದೆ. ನಮ್ಮ ಪಕ್ಷಕ್ಕೆ ಸ್ವ ಇಚ್ಛೆಯಿಂದ ಬರುವವರನ್ನು ನಾವು ಬೇಡ ಎನ್ನುವುದಿಲ್ಲ ಎಂದರು.
ರಾಜಕಾರಣ ನಿಂತ ನೀರಲ್ಲ ಎಂದು ಕುಮಾರಣ್ಣ ಅವರೇ ಹೇಳಿದ್ದಾರೆ. ಕೆಲವರು ಬಿಜೆಪಿಗೆ ಹೋಗಲು ಸಿದ್ಧರಿರುತ್ತಾರೆ. 17 ಜನ ಸಂಸದರು ಗೆದ್ದು, ದೇವೇಗೌಡರು ದೇಶದ ಪ್ರಧಾನಿ ಆದಾಗ ನಾವು ಅವರನ್ನು ಹೈಜಾಕ್ ಮಾಡಿ ಕರೆದುಕೊಂಡು ಬಂದಿದ್ದೆವಾ? ಒಂದಲ್ಲಾ ಒಂದು ಕಾರಣದಿಂದ ಬರುವವರು ಬರುತ್ತಾರೆ. ಈ ಹಿಂದೆ ಅನೇಕ ನಾಯಕರು ಕೂಡ ಅವರ ಜತೆ ರಾಜಕೀಯ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ಗೆ ಬಂದಿದ್ದರು. ಅದೇ ರೀತಿ ಮನಗೂಳಿ ಅವರು ಸಾಯುವ ಮುನ್ನ ನನ್ನನ್ನು ಭೇಟಿ ಮಾಡಿದ್ದು ನಿಜ. ಆಗ ಅವರ ಪುತ್ರ ಅಶೋಕ್ ಅವರು ಇದ್ದದ್ದೂ ನಿಜ. ನಾವು ಯಾರ ಮತವನ್ನೂ ಗುತ್ತಿಗೆಗೆ ತೆಗೆದುಕೊಂಡಿಲ್ಲ. ನನ್ನ ಮತವನ್ನೇ ನಾನು ಗುತ್ತಿಗೆ ತೆಗದುಕೊಳ್ಳಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಗೌಪ್ಯವಾಗಿ ಮತ ಹಾಕುತ್ತಾರೆ ಅಂತ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ಐಟಿ ಇಲಾಖೆ ಮಾಹಿತಿ ಬರುವವರೆಗೂ ಪ್ರತಿಕ್ರಿಯೆ ನೀಡಲು ಆಗಲ್ಲ
ನೀರಾವರಿ ಇಲಾಖೆ ವಿಚಾರವಾಗಿ ಗುತ್ತಿಗೆದಾರರು ಹಾಗೂ ಯಡಿಯೂರಪ್ಪ ಅವರ ಆಪ್ತ ಸಹಾಯಕರ ಮನೆ ಮೇಲೆ ತೆರಿಗೆ ಇಲಾಖೆ ದಾಳಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ನೋಡಿದೆ. ಇದರ ಹಿಂದೆ ಅನೇಕ ಲೆಕ್ಕಾಚಾರಗಳಿವೆ. ತೆರಿಗೆ ಇಲಾಖೆ ಕಡೆಯಿಂದ ಅಧಿಕೃತ ಹೇಳಿಕೆ ಬರುವವರೆಗೂ ನಾವು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಏಕಾಏಕಿಯಾಗಿ ಇದು ರಾಜಕೀಯ ಪ್ರೇರಿತ ಎಂದು ಹೇಳಲು ನನ್ನ ಬಳಿ ಖಚಿತ ಮಾಹಿತಿ ಇಲ್ಲ. ಯಾರ ಮನೆಯಲ್ಲಿ ಎಷ್ಟು ಹಣ ಸಿಕ್ಕಿದೆ, ಏನು ದಾಖಲೆ ಸಿಕ್ಕಿದೆ ಎಂದು ಮಾಹಿತಿ ಬರುವವರೆಗೂ ಮಾತನಾಡಲು ಸಾಧ್ಯವಿಲ್ಲ. ಆಂತರಿಕ ರಾಜಕೀಯ ಇದ್ದೇ ಇರುತ್ತದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಅವರು ಯಾರನ್ನಾದರೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದರೆ ಅದನ್ನು ಮಾಡುತ್ತಾರೆ. ಆತ ಯಡಿಯೂರಪ್ಪ ಅವರ ಆಪ್ತ ಸಹಾಯಕ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ ಅಲ್ಲವೇ? ಕೇವಲ ಅವರು ಮಾತ್ರವಲ್ಲ. ಈ ಹಿಂದೆ ಇದ್ದ ಮಾಜಿ ನೀರಾವರಿ ಮಂತ್ರಿಗಳ ಮೇಲೆ ವಿಚಾರಣೆ ನಡೆಯಲಿದೆ ಎಂಬ ಮಾಹಿತಿ ಬಂದಿದೆ. ಕೆಲವು ಮಂತ್ರಿಗಳು ಕೂಡ ನಮ್ಮ ಮನೆ ಮೇಲೆ ದಾಳಿ ಮಾಡಬೇಡಿ ಎಂದು ದೆಹಲಿಯಲ್ಲಿ ಹೋಗಿ ಮನವಿ ಮಾಡಿದ್ದರು ಎಂಬ ಮಾಹಿತಿ ಇದೆ ಎಂದು ಡಿಕೆಶಿ ಹೇಳಿದ್ದಾರೆ.
ಕೇಸರಿಕರಣಕ್ಕಾಗಿ ಎನ್ಇಪಿ
ಬೇರೆ ರಾಜ್ಯಗಳಲ್ಲಿ ಜಾರಿಯಾಗದ ಶಿಕ್ಷಣ ನೀತಿ ನಮ್ಮ ರಾಜ್ಯದಲ್ಲಿ ಮಾತ್ರ ತರಾತುರಿಯಲ್ಲಿ ಜಾರಿ ಮಾಡುತ್ತಿರುವುದೇಕೆ? ಎಂದು ಪ್ರಶ್ನಸಿದ ಅವರು, ಈ ವಿಚಾರವಾಗಿ ಪೋಷಕರು, ಮಕ್ಕಳು, ಶಿಕ್ಷಣ ತಜ್ಞರ ಜತೆ ಚರ್ಚೆ ಮಾಡಬೇಕು. ಇಷ್ಟು ದಿನ ನಮ್ಮಲ್ಲಿದ್ದ ಶಿಕ್ಷಣ ವ್ಯವಸ್ಥೆ ಏನಾಗಿದೆ? ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಇಡೀ ವಿಶ್ವದ ಆರ್ಥಿಕತೆ ಕುಸಿದು ಬಿದ್ದರೂ ಭಾರತದ ಆರ್ಥಿಕತೆ ಬಿದ್ದಿರಲಿಲ್ಲ. ಅಂತಹ ಶಿಕ್ಷಣ ಬೇಡವೇ? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಓದಿದ ಡಾಕ್ಟರ್, ಇಂಜಿನಿಯರ್ ಗಳು ವಿಶ್ವದೆಲ್ಲೆಡೆ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಶಿಕ್ಷಣ ನೀತಿ ಜಾರಿಗೆ ತರುವುದೇ ಆದರೆ, ಸಂಸತ್ತಿನಲ್ಲಿ ಯಾಕೆ ಚರ್ಚೆಯಾಗಿಲ್ಲ? ವಿಧಾನಮಂಡಲ ಅಧಿವೇಶನದಲ್ಲಿ ಯಾಕೆ ಚರ್ಚೆಯಾಗಿಲ್ಲ? ಈ ವಿಚಾರವಾಗಿ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಪೋಷಕರಲ್ಲಿ ಅರಿವು ಮೂಡಿಸುತ್ತೇವೆ. ನಾನು ರಾಜಕಾರಣಿಯಷ್ಟೇ ಅಲ್ಲ. ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದು, ನಾನು ಇದನ್ನು ಆಳವಾಗಿ ಅಧ್ಯಯನ ಮಾಡಿದ್ದೇನೆ. ಇದರಲ್ಲಿ ಒಂದೆರಡು ಒಳ್ಳೆಯ ಅಂಶಗಳಿರಬಹುದು, ಆದರೆ ಇದು ಸ್ಪಷ್ಟವಾಗಿ ಕೇಸರಿಕರಣದ ಪ್ರಯತ್ನ.
ಇದು ಒಳ್ಳೆಯ ನೀತಿಯಾಗಿದ್ದರೆ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತಿನಲ್ಲಿ ಜಾರಿಗೊಳಿಸಲು ಹೇಳಿ. ಬೇರೆ ರಾಜ್ಯಗಳಲ್ಲಿ ಮಾಡಲಾಗದ್ದನ್ನು ನಮ್ಮಲ್ಲಿ ಮಾಡಿದ್ದೇನೆ ಎಂದು ಹೈಕಮಾಂಡ್ ಓಲೈಸಲು ಹೊರಟಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಬಿಡುವುದಿಲ್ಲ. ಇದರ ವಿರುದ್ಧ ಚಳವಳಿ, ಆಂದೋಲನ ಮಾಡುತ್ತೇವೆ.
ಎರಡೂ ಕ್ಷೇತ್ರಗಳಲ್ಲಿ ನಮಗೆ ಉತ್ತಮ ಬೆಂಬಲ
ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಪರವಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಕ್ಕಿದ್ದು, ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ನಮ್ಮದೇ ಆದ ತಂತ್ರಗಾರಿಕೆ ಮೂಲಕ ಪ್ರಚಾರ ಮಾಡುತ್ತೇವೆ. ನಾವು ನಿತ್ಯ ಆಂತರಿಕ ವರದಿ ಪಡೆಯುತ್ತಿರುತ್ತೇವೆ. ಮುಖ್ಯಮಂತ್ರಿಗಳಿಗೂ ನಿತ್ಯ ವರದಿ ಹೋಗುತ್ತಿರುತ್ತದೆ. ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂಬ ಮಾಹಿತಿಯೇ ಮುಖ್ಯಮಂತ್ರಿಗಳಿಗೆ ರವಾನೆಯಾದ ವರದಿಯಲ್ಲೂ ಇದೆ ಅಂತ ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ.
ರಮೇಶ್ ಆಪ್ತರು ನನ್ನ ಭೇಟಿ ಮಾಡಿದ್ದು ನಿಜ
ರಮೇಶ್ ಜಾರಕಿಹೊಳಿ ಅವರ ಆಪ್ತರು ನನ್ನ ಭೇಟಿ ಮಾಡಿದ್ದರು. ಅನೇಕ ವಿಚಾರ ಚರ್ಚೆ ಮಾಡಿದ್ದಾರೆ. ಅವರ ಸಂದೇಶಗಳನ್ನು ತಿಳಿಸಿದ್ದಾರೆ. ಈ ವಿಚಾರಗಳನ್ನು ನಾನು ಈಗ ಗೌಪ್ಯವಾಗಿ ಇಡಬೇಕಿದೆ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಅಂತ ಡಿ ಕೆ ಶಿವಕುಮಾರ್ ಹೇಳಿದರು.
ಇದನ್ನೂ ಓದಿ