AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಜಿಲ್ಲಾ ಉಸ್ತುವಾರಿಗೆ ಬೇಡಿಕೆ ಇಟ್ಟಿಲ್ಲ; ಯಾರಿಗೆ ಉಸ್ತುವಾರಿ ಕೊಟ್ಟರೂ ಕೆಲಸ ಮಾಡುತ್ತೇವೆ: ಆರ್ ಅಶೋಕ್ ತಿರುಗೇಟು

R Ashok: ಸಿಎಂ ಬಸವರಾಜ ಬೊಮ್ಮಾಯಿ ಪರಮಾಧಿಕಾರಕ್ಕೆ ನಾನು ಬದ್ಧನಾಗಿರುತ್ತೇನೆ. ಇದರಲ್ಲಿ ನನಗೆ ಯಾವುದೇ ಸಂಕೋಚ, ದ್ವೇಷ ಇಲ್ಲ. ಯಾರಿಗೇ ಉಸ್ತುವಾರಿ ಕೊಟ್ಟರೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದ್ದಾರೆ.

ನಾನು ಜಿಲ್ಲಾ ಉಸ್ತುವಾರಿಗೆ ಬೇಡಿಕೆ ಇಟ್ಟಿಲ್ಲ; ಯಾರಿಗೆ ಉಸ್ತುವಾರಿ ಕೊಟ್ಟರೂ ಕೆಲಸ ಮಾಡುತ್ತೇವೆ: ಆರ್ ಅಶೋಕ್ ತಿರುಗೇಟು
ಆರ್ ಅಶೋಕ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Oct 09, 2021 | 5:05 PM

Share

ಬೆಂಗಳೂರು: ಎಲ್ಲಾ 31 ಜಿಲ್ಲೆಗಳಿಗೆ ಉಸ್ತುವಾರಿ ನೇಮಿಸುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಟ್ಟ ವಿಚಾರ. ಬೆಂಗಳೂರು ಉಸ್ತುವಾರಿಯೂ ಸಿಎಂ ವಿವೇಚನೆಗೆ ಬಿಟ್ಟ ವಿಷಯ. ನಾನು ಯಾವುದೇ ಜಿಲ್ಲಾ ಉಸ್ತುವಾರಿಗೆ ಬೇಡಿಕೆ ಇಟ್ಟಿಲ್ಲ. ನನಗೆ ಇದೇ ಜಿಲ್ಲಾ ಉಸ್ತುವಾರಿ ಬೇಕೆಂದು ಬೇಡಿಕೆ ಇಟ್ಟಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಿದ್ದರು. ಆಗ ಸಚಿವ ಎಂಟಿಬಿ ನಾಗರಾಜ್ ಕೇಳಿದ್ದಕ್ಕೆ ಬಿಟ್ಟುಕೊಟ್ಟಿದ್ದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಬಿಟ್ಟುಕೊಟ್ಟಿದ್ದೆ. ನಾನು ಉಸ್ತುವಾರಿ ಸಚಿವನಾಗದಿದ್ದರೂ ಕೆಲಸ ಮಾಡಿದ್ದೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿಕೆಗೆ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಪೂರ್ವ ನಿಗದಿತ ಕಾರ್ಯಕ್ರಮ ಇದ್ದರೆ ಸಭೆಗೆ ಹೋಗಲ್ಲ. ಯಾವುದೇ ಸಚಿವರು, ಶಾಸಕರು ಕರೆದ ಸಭೆಗೆ ಹೋಗುವುದಿಲ್ಲ. ಕಾರ್ಯಕ್ರಮ ಇಲ್ಲದಿದ್ದರೆ ಸಭೆಗೆ ಹೋಗುತ್ತೇನೆ ಎಂದು ವಿ. ಸೋಮಣ್ಣ ಹೇಳಿಕೆಗೆ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಪರಮಾಧಿಕಾರಕ್ಕೆ ನಾನು ಬದ್ಧನಾಗಿರುತ್ತೇನೆ. ಇದರಲ್ಲಿ ನನಗೆ ಯಾವುದೇ ಸಂಕೋಚ, ದ್ವೇಷ ಇಲ್ಲ. ಯಾರಿಗೇ ಉಸ್ತುವಾರಿ ಕೊಟ್ಟರೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದ್ದಾರೆ.

ಉಸ್ತುವಾರಿಯನ್ನು ಯಾರಿಗೆ ಬೇಕಾದರೂ ಕೊಡಲಿ. ಆದರೆ ಉಸ್ತುವಾರಿ ಕೊಡುವಾಗ ಜ್ಯೇಷ್ಠತೆ ಪರಿಗಣಿಸಲಿ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿದ್ದರು. ನಾನು ಬೆಂಗಳೂರಿನ ಹಿರಿಯ ಸಚಿವ. ನನ್ನನ್ನು ಪರಿಗಣಿಸಿ ಎಂದು ಸಿಎಂ ಬೊಮ್ಮಾಯಿಗೆ ಕೇಳಿದ್ದೇನೆ. ಉಸ್ತುವಾರಿ ಸಿಎಂ ಬಳಿ ಇದ್ದರೆ ನಮ್ಮ ಅಭ್ಯಂತರ ಇಲ್ಲ. ಬೇರೆಯವರಿಗೆ ಕೊಟ್ಟರೆ ನನ್ನನ್ನು ಪರಿಗಣಿಸಿ ಎಂದು ಕೇಳಿದ್ದೇನೆ ಎಂದು ಸೋಮಣ್ಣ ಹೇಳಿದ್ದರು.

ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ವಿಚಾರಕ್ಕೆ ಸಚಿವ ಆರ್. ಅಶೋಕ್ ವಿರುದ್ಧ ಸಚಿವ ವಿ. ಸೋಮಣ್ಣ ಗರಂ ಆಗಿದ್ದರು. ನಾನು ಸಚಿವ ಆಗಿದ್ದಾಗ ಆರ್.  ಅಶೋಕ್ ಇನ್ನೂ ಶಾಸಕನಾಗಿದ್ದ. ನಾನು ಕರೆದಿದ್ದ ಸಭೆಗೆ ಸಚಿವ ಆರ್. ಅಶೋಕ್ ಬಂದಿರಲಿಲ್ಲ. ಅವರು ಸಭೆ ಕರೆದರೆ ನಾನು ಹೋಗುತ್ತೇನೆ. ನಾನು ಸಭೆ ಕರೆದರೆ ಅವರು ಬರಬೇಕು. ಬಂದಿಲ್ಲ ಅಂದ್ರೆ ಅವರಿಗೇ ನಷ್ಟ. ಮನೆಗಳನ್ನು ನಮ್ಮ ಕಾರ್ಯಕರ್ತರಿಗೆ ಕೊಡುತ್ತೇನೆ ಅಷ್ಟೆ. ನಾನು ಸೀನಿಯರ್ ಇದ್ದೇನೆ. ಅಶೋಕ ಅಂತ ಅವರ ಅಪ್ಪ, ಅಮ್ಮ ಯಾಕೆ ಹೆಸರಿಟ್ರೋ. ಆರ್. ಅಶೋಕ್ ಸಾಮ್ರಾಟ್ ರೀತಿಯೇ ಆಡುತ್ತಾನೆ ಎಂದು ವಿ. ಸೋಮಣ್ಣ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇದೀಗ ವಿ. ಸೋಮಣ್ಣ ಹೇಳಿಕೆಗೆ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಮುಸುಕಿನ ಗುದ್ದಾಟ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ವಿಷಯದಲ್ಲಿ ತಲೆ ಹಾಕುವುದಿಲ್ಲ. ಯಾರಿಗೆ ಉಸ್ತುವಾರಿ ಕೊಡಬೇಕೆಂದು ಸಿಎಂ ಬೊಮ್ಮಾಯಿ ನಿರ್ಧರಿಸ್ತಾರೆ. ಆಯಾ ಜಿಲ್ಲೆಯ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸುತ್ತಾರೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ನಾನಿನ್ನೂ ಬೆಂಝ್ ಗಾಡಿಯಂತೆ ಇದ್ದೇನೆ; ಬೆಂಗಳೂರು ಉಸ್ತುವಾರಿ ಕೊಟ್ರೆ ಹೈಕ್ಲಾಸ್ ಆಗಿ ನಡೆಸ್ತೇನೆ: ಅಶೋಕ್​ ವಿರುದ್ಧ ಸೋಮಣ್ಣ ಗುಡುಗು

ಇದನ್ನೂ ಓದಿ: ವಿಧಾನ ಪರಿಷತ್: ನಾನು ಮೂರು ಸಚಿವರ ಮಧ್ಯೆ ಇಕ್ಕಳದಂತೆ ಸಿಕ್ಕಿಹಾಕಿಕೊಂಡಿದ್ದೇನೆ- ವಸತಿ ಸಚಿವ ಸೋಮಣ್ಣ ಅಳಲು

Published On - 2:38 pm, Sat, 9 October 21