ಕಲ್ಲಿದ್ದಲು ಕಡಿಮೆಯಾಗಬಾರದು ಎಂಬ ದೃಷ್ಟಿಯಿಂದ ಕೇಂದ್ರ ಗಣಿ ಸಚಿವರನ್ನು ಭೇಟಿ ಮಾಡಿದ್ದೇನೆ. ನಮ್ಮ ಬೇಡಿಕೆ ಏನಿದೆ ಎಂದು ಅವರ ಬಳಿ ಹೇಳಿದ್ದೇವೆ. ಒಟ್ಟು ನಮಗೆ 10 ರೇಕ್ ಕಲ್ಲಿದ್ದಲು ಬರುತ್ತಿದೆ. ಅದನ್ನು 14 ರೇಕ್ಗೆ ಏರಿಕೆ ಮಾಡಿದರೆ ನಮಗೆ ಸರಿ ಹೋಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಮೂರು ಗಣಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕೊರೊನಾ ಲಸಿಕೆ ಮೊದಲನೇ ಡೋಸ್ ಈಗಾಗಲೇ 81 ಶೇಕಡಾವರೆಗೆ ನೀಡಲಾಗಿದೆ. ಡಿಸೆಂಬರ್ ಒಳಗೆ 90 ಶೇಕಡಾದಷ್ಟು ಲಸಿಕೆ ನೀಡಿಕೆ ಪೂರ್ಣ ಮಾಡಬೇಕು ಎಂಬುದು ಗುರಿ. ಅದಕ್ಕೆ ಕೇಂದ್ರ ಆರೋಗ್ಯ ಸಚಿವರು ಸಹಕಾರ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದೇ ರೀತಿ ಎರಡನೇ ಡೋಸ್ ಲಸಿಕೆ ಕೂಡ ಶೇಕಡಾ 38 ರಷ್ಟು ನೀಡಲಾಗಿದೆ. ಅದನ್ನು ಶೇಕಡಾ 70ಕ್ಕೆ ಹೆಚ್ಚು ಮಾಡಬೇಕು ಎಂದು ಇದ್ದೇವೆ. ಒಟ್ಟಾರೆಯಾಗಿ ಇಡೀ ಕರ್ನಾಟಕದ ಜನಸಂಖ್ಯೆಯನ್ನು ವ್ಯಾಕ್ಸಿನೇಷನ್ ಅಡಿಯಲ್ಲಿ ತರಬೇಕು. ಅದು ಕೂಡ ಈ ವರ್ಷದ ಅಂತ್ಯದ ಒಳಗಾಗಿ ಆಗಬೇಕೆಂಬ ಯೋಜನೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಗೊಬ್ಬರ ಕೊರತೆ ವಿಚಾರವಾಗಿ ಕೇಂದ್ರ ರಸಗೊಬ್ಬರ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. 32 ಸಾವಿರ ಮೆಟ್ರಿಕ್ ಟನ್ ಡಿಎಪಿ, 10 ಸಾವಿರ ಮೆಟ್ರಿಕ್ ಟನ್ ಎಂಒಪಿ ಪೂರೈಕೆಗೆ ಮನವಿ ಮಾಡಿದ್ದೇವೆ. ಇದಕ್ಕೆ ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದಾರೆ. ಒಂದು ವಾರದೊಳಗೆ ಅದನ್ನು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಮುಸುಕಿನ ಗುದ್ದಾಟ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವನ್ನು ಎಲ್ಲರ ಜತೆ ಚರ್ಚಿಸಿ ಸೌಹಾರ್ದಯುತವಾಗಿ ಬಗೆಹರಿಸ್ತೇವೆ. ಯಾರಿಗೆ ಯಾವ ಜಿಲ್ಲೆ ನೀಡಬೇಕೆಂಬ ಬಗ್ಗೆ ತೀರ್ಮಾನಿಸ್ತೇನೆ. ಸಚಿವರ ಜೊತೆ ಸೌಹಾರ್ದಯುತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಯಾವುದೇ ರೀತಿ ತೊಂದರೆ ಆಗದಂತೆ ನಿರ್ಧಾರ ಮಾಡ್ತೇವೆ. ಬೆಂಗಳೂರು ಬಹಳ ಮಹತ್ವದ್ದು, ಈ ಬಗ್ಗೆ ಎಲ್ಲರ ಜತೆ ಚರ್ಚೆ ನಡೆಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ವರಿಷ್ಠರ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿಲ್ಲ. ಪಕ್ಷದ ಅಧ್ಯಕ್ಷ ನಡ್ಡಾರನ್ನು ಭೇಟಿಯಾಗಲು ಪ್ರಯತ್ನಿಸಿದೆ. ಆದರೆ ಅವರು ಬೇರೆ ಕಾರ್ಯಕ್ರಮದಲ್ಲಿದ್ದ ಕಾರಣ ಭೇಟಿಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ನಮ್ಮ ಮನೆಯಲ್ಲೂ ಹೆಂಡತಿ ಗದರುತ್ತಾರೆ’; ‘ಅನುಬಂಧ’ ಕಾರ್ಯಕ್ರಮದಲ್ಲಿ ಅಚ್ಚರಿ ವಿಚಾರ ಬಿಚ್ಚಿಟ್ಟ ಸಿಎಂ ಬಸವರಾಜ ಬೊಮ್ಮಾಯಿ