ಬೆಂಗಳೂರು: ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈಎಸ್‍ವಿ ದತ್ತಾ(YSV Datta)) ಅವರು ಟಿಕೆಟ್ ಕೈತಪ್ಪಿದಕ್ಕೆ ವಾಪಸ್ ಮತ್ತೆ ಜೆಡಿಎಸ್ ಸೇರ್ಪಡೆಯಾಗಿದ್ದು, ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದರ ಮಧ್ಯೆ ದತ್ತಾ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಹೌದು.. ಚೆಕ್ ಬೌನ್ಸ್ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್, ದತ್ತಾ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಸಿಎಸ್ ಸೋಮೇಗೌಡ ಅವರು ಸಲ್ಲಿಸಿದ್ದ ಚೆಕ್ ಬೌನ್ಸ್ ದೂರು ಅರ್ಜಿ ವಿಚಾರಣೆ ನಡೆಸಿದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (42ನೇ ಎಸಿಎಂಎಂ) ನ್ಯಾಯಾಧೀಶ ಜೆ ಪ್ರೀತ್ ಅವರು ದತ್ತಾ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಕಡೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ವೈಎಸ್ವಿ ದತ್ತಾಗೆ ಫೈನಲ್, ಹಾಲಿ ಅಭ್ಯರ್ಥಿ ಧನಂಜಯ್ಗೆ ನಿರಾಸೆ
ಕಳೆದ ವಿಚಾರಣೆಯಲ್ಲಿ ದತ್ತಾ ಅವರು ದೂರುದಾರರಿಂದ ಪಡೆದುಕೊಂಡಿದ್ದ ಹಣವನ್ನು ಇಂದು (ಏಪ್ರಿಲ್ 15) ಹಿಂದಿರುಗಿವುದಾಗಿ ಭರವಸೆ ನೀಡಿದ್ದರು. ಆದ್ರೆ, ಇಂದು ವಿಚಾರಣೆ ವೇಳೆ ದತ್ತಾ ಅವರ ಪರ ವಕೀಲರು ನಮ್ಮ ಕಕ್ಷಿದಾರರಿಗೆ ಖುದ್ದು ಹಾಜರಾತಿಗೆ ವಿನಾಯಿತಿ ನೀಡುವಂತೆ ಕೋರಿದರು. ಆದ್ರೆ, ಕೋರ್ಟ್ ಮನವಿಯನ್ನು ತಿರಸ್ಕರಿಸಿದ್ದು, ಖುದ್ದು ಹಾಜರಾಗುವಂತೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು, ಏಪ್ರಿಲ್ 26ರಂದು ವೈಎಸ್ ವಿ ದತ್ತಾ ಹಾಜರುಪಡಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ.
2022ರಲ್ಲಿ ದೂರುದಾರ ಸೋಮಶೇಖರ್ ಸೇರಿದಂತೆ ಇತರರು ದತ್ತಾ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು, ಮೂರು ಪ್ರತ್ಯೇಕ ಪ್ರಕರಣಗಳು ಇದ್ದು ಇದೇ ನ್ಯಾಯಾಲದಲ್ಲಿ ವಿಚಾರಣಾ ಹಂತದಲ್ಲಿವೆ.
ಕಾಂಗ್ರೆಸ್‌ನಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೇಸರಗೊಂಡಿದ್ದ ವೈ.ಎಸ್.ವಿ ದತ್ತ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದರು. ಟವೆಲ್ ಗುರುತಿನಿಂದ ಸ್ಪರ್ಧೆಗಿಳಿಯುವುದಾಗಿ ಘೋಷಣೆ ಮಾಡಿದ್ದರು. ಬಳಿಕ ಹೆಚ್ಡಿ ರೇವಣ್ಣ ಅವರು ದತ್ತಾ ಅವರನ್ನು ಮರಳಿ ಜೆಡಿಎಸ್ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ದೇವೇಗೌಡರ ಹತ್ತಿರ ಮಾತುಕತೆ ನಡೆಸಿ, ಅಂತಿಮವಾಗಿ ಅವರನ್ನು ವಾಪಸ್ ಜೆಡಿಎಸ್ ಕರೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇಂದು ಬಿಡುಗಡೆಯಾದ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ದತ್ತಾ ಹೆಸರು ಸಹ ಇದೆ. ಈ ಚುನಾವಣೆ ಭರಾಟೆ ಮಧ್ಯೆ ಇದೀಗ ಕೋರ್ಟ್ ಖುದ್ದು ಹಾಜರಾಗುವಂತೆ ಸಮನ್ಸ್ ನೀಡಿದೆ.