Village Sampark Yatra: ಬಿಜೆಪಿ ಯುವ ಘಟಕದಿಂದ ಗಡಿ ಗ್ರಾಮ ಸಂಪರ್ಕ ಯಾತ್ರೆ: ನಾಳೆಯಿಂದಲೇ ಆರಂಭ ಎಂದ ತೇಜಸ್ವಿ ಸೂರ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 19, 2023 | 7:51 AM

Grama Samparka Abhiyan: ಮುಂದಿನ ಶುಕ್ರವಾರದಿಂದ ಹಲವು ರಾಜ್ಯಗಳಲ್ಲಿ ‘ಗ್ರಾಮ ಸಂಪರ್ಕ ಯಾತ್ರೆ’ ಆರಂಭಿಸಲು ಬಿಜೆಪಿ ಯುವ ಮೋರ್ಚಾ ನಿರ್ಧರಿಸಿದೆ.

Village Sampark Yatra: ಬಿಜೆಪಿ ಯುವ ಘಟಕದಿಂದ ಗಡಿ ಗ್ರಾಮ ಸಂಪರ್ಕ ಯಾತ್ರೆ: ನಾಳೆಯಿಂದಲೇ ಆರಂಭ ಎಂದ ತೇಜಸ್ವಿ ಸೂರ್ಯ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ
Follow us on

ದೆಹಲಿ: ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಗೆ ಬಿಜೆಪಿ (BJP) ಈಗಾಗಲೇ ಸಿದ್ಧತೆ ಆರಂಭಿಸಿದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿಗೆ ಸಿಗುತ್ತಿದ್ದ ಮತಗಳ ಪ್ರಮಾಣ ಕಡಿಮೆ ಇರುತ್ತಿತ್ತು. ಇದೀಗ ಈ ವರ್ಗವನ್ನು ತನ್ನತ್ತ ಸೆಳೆಯಲು ಬಿಜೆಪಿ ಹಲವು ಕಾರ್ಯತಂತ್ರಗಳನ್ನು ರೂಪಿಸಿದೆ. ಮುಂದಿನ ಶುಕ್ರವಾರದಿಂದ ಹಲವು ರಾಜ್ಯಗಳಲ್ಲಿ ‘ಗ್ರಾಮ ಸಂಪರ್ಕ ಯಾತ್ರಾ’  (Grama Samparka Abhiyan) ಆರಂಭಿಸಲು ಬಿಜೆಪಿ ಯುವ ಮೋರ್ಚಾ (BJP Yuva Morcha) ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸೂಚನೆ ಮೇರೆಗೆ ಈ ನಿರ್ಧಾರ ಹೊರಬಿದ್ದಿದೆ.

ಕಳೆದ ವರ್ಷಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುವಮೋರ್ಚಾ ಪದಾಧಿಕಾರಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಮೋದಿ ಅವರು ನೀಡಿದ ಸಲಹೆಯ ಅನ್ವಯ ಈ ಸಂಪರ್ಕ ಕಾರ್ಯಕ್ರಮ ಆರಂಭವಾಗುತ್ತಿದೆ. ಜನವರಿ 20ರಿಂದಲೇ ಯುವ ಮೋರ್ಚಾ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲಿದ್ದಾರೆ. ಆರಂಭದಲ್ಲಿ ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳಿಗೆ ಭೇಟಿ ನೀಡಲಿರುವ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಜಾರಿಗೆ ಬಂದಿರುವ ಹಲವು ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ.

‘ಗ್ರಾಮಗಳಲ್ಲಿ ಯುವಜನರ ಸಣ್ಣಸಣ್ಣ ಸಭೆಗಳನ್ನು ನಡೆಸಲಿರುವ ಮೋರ್ಚಾ ಕಾರ್ಯಕರ್ತರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. ಅವರ ಸಲಹೆಗಳನ್ನೂ ಪಡೆಯಲಿದ್ದಾರೆ. ಅವರನ್ನು ಜಿ20 ಸಮಾವೇಶದ ಭಾಗವಾಗಿಸಲು ಯತ್ನಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ವಿವಿಧ ರಾಜ್ಯಗಳ ಗಡಿಯಲ್ಲಿರುವ ಗ್ರಾಮಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಇಂಥ ಗ್ರಾಮಗಳಿಗೆ ಭೇಟಿ ನೀಡಿ ಸಂಪರ್ಕ ಹೆಚ್ಚಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದರು. ಜನರ ಕಷ್ಟಗಳನ್ನು ಆಲಿಸಿ, ಅವರೊಂದಿಗೆ ನಿಯಮಿತ ಸಂಪರ್ಕದಲ್ಲಿರಿ, ಅವರ ಸಂಸ್ಕೃತಿ ಹಾಗೂ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಸೂಚಿಸಿದ್ದರು.

ಈ ಕುರಿತು ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ‘ಗಡಿ ಗ್ರಾಮಗಳ ಸಂಪರ್ಕ ಯಾತ್ರೆಯು ಜನವರಿ 20ರಿಂದ ಆರಂಭವಾಗಲಿದೆ. ನಮ್ಮ ಯುವ ಕಾರ್ಯಕರ್ತರು ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ ರಾಜ್ಯಗಳ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮೋದಿ ಆಡಳಿತದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಅಧ್ಯಯನ ಮಾಡಲಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸ್ಥಳೀಯರೊಂದಿಗೆ ಚರ್ಚೆ ನಡೆಸಲಿದ್ದಾರೆ’.

ಇದನ್ನೂ ಓದಿ: Tejasvi surya: ವಿಮಾನದ ಎಮೆರ್ಜೆನ್ಸಿ ಎಕ್ಸಿಟ್​ ಓಪನ್ ಮಾಡಿದ ಸಂಸದ ತೇಜಸ್ವಿ ಸೂರ್ಯ, ಇಂಡಿಗೋ ವಿಮಾನ 2 ತಾಸು ತಡ