ವಿಪಕ್ಷಗಳು ದೇಶಕ್ಕಿಂತ ಮೇಲೆ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಇರಿಸಿವೆ: ನರೇಂದ್ರ ಮೋದಿ

ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಅವರು  ತೆಗೆದುಕೊಂಡ ನಿರ್ಧಾರಗಳನ್ನು ಜಾರಿಗೆ ತರಲು ಸಾಧ್ಯವಾಗದೇ ಇದ್ದಾಗ ಆಡಳಿತಾರೂಢ  ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸುತ್ತಲೇ ಇರುತ್ತವೆ...

ವಿಪಕ್ಷಗಳು ದೇಶಕ್ಕಿಂತ ಮೇಲೆ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಇರಿಸಿವೆ: ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
TV9kannada Web Team

| Edited By: Rashmi Kallakatta

Jul 25, 2022 | 8:45 PM

ದೆಹಲಿ:  ಪ್ರತಿಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಯನ್ನು ದೇಶದ ಹಿತಾಸಕ್ತಿಗಿಂತ ಮೇಲೆ ಇರಿಸಿಕೊಂಡಿವೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ (Narendra Modi),  ವಿಪಕ್ಷಗಳು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದ್ದಾರೆ. ಬೆಲೆ ಏರಿಕೆ ಕುರಿತು ಚರ್ಚೆಗೆ ಆಗ್ರಹಿಸಿ ವಿಪಕ್ಷಗಳ ಪ್ರತಿಭಟನೆಯಿಂದಾಗಿ ಕಳೆದ ವಾರ ಮುಂಗಾರು ಅಧಿವೇಶನ (Monsoon Session) ಆರಂಭವಾದಾಗಿನಿಂದ ಸಂಸತ್ತಿನ ಉಭಯ ಸದನಗಳ ಕಲಾಪಗಳು ಸ್ಥಗಿತಗೊಂಡಿವೆ. ಸೋಮವಾರ ಸಮಾಜವಾದಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹರ್ಮೋಹನ್ ಸಿಂಗ್ ಯಾದವ್ ಅವರ 10 ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ” ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಅವರು  ತೆಗೆದುಕೊಂಡ ನಿರ್ಧಾರಗಳನ್ನು ಜಾರಿಗೆ ತರಲು ಸಾಧ್ಯವಾಗದೇ ಇದ್ದಾಗ ಆಡಳಿತಾರೂಢ  ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸುತ್ತಲೇ ಇರುತ್ತವೆ.  ಆಡಳಿತಾರೂಢ ಪಕ್ಷ ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ಹೊತ್ತಿಗೆ  ವಿಪಕ್ಷಗಳು ಅದನ್ನು ಪ್ರಶ್ನಿಸುತ್ತವೆ. ಒಂದು ವೇಳೆ ನಿರ್ಧಾರ ಜಾರಿಯಾದರೆ ಅದನ್ನು ಅವರು ವಿರೋಧಿಸುತ್ತಾರೆ. ದೇಶದ ಜನರು ಇದನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ ಮೋದಿ.

ಇತ್ತೀಚಿನ ದಿನಗಳಲ್ಲಿ ಸಮಾಜ ಮತ್ತು ದೇಶದ ಹಿತಾಸಕ್ತಿಗಳಿಗಿಂತ ಸಿದ್ಧಾಂತ ಅಥವಾ ರಾಜಕೀಯ ಹಿತಾಸಕ್ತಿಗಳನ್ನು ಮೇಲಕ್ಕೆ ಇಡುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ಪ್ರಧಾನಿ ಹೇಳಿದರು.

ಇಂದು ಬೆಳಗ್ಗೆ ಬೆಲೆ ಏರಿಕೆ ವಿರುದ್ದ ಸದನದೊಳಗೆ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಮುಂಗಾರು ಅಧಿವೇಶನದಿಂದಲೇ ಅಮಾನತು ಮಾಡಲಾಗಿದೆ. ಆಗಸ್ಟ್ 12 ಮುಂಗಾರು ಅಧಿವೇಶನ ಮುಕ್ತಾಯವಾಗಲಿದ್ದು ಅಲ್ಲಿಯವರೆಗೆ ಈ ಸಂಸದರು ಅಧಿವೇಶನದಲ್ಲಿ ಭಾಗವಹಿಸುವಂತಿಲ್ಲ. ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸಲು ಬಯಸಿದರೆ ಸದನದ ಹೊರಗೆ ನಡೆಸಿ ಎಂದು ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದ ನಂತರ ಸಂಸದರನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಸಂಸದರು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.  ಅಮಾನತುಗೊಂಡ ನಾಲ್ವರು ಸಂಸದರ ಜತೆ  ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್, ಸರ್ಕಾರವು ನಮ್ಮ ಸಂಸದರನ್ನು ಅಮಾನತುಗೊಳಿಸುವ ಮೂಲಕ ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದೆ, ಅವರ ತಪ್ಪೇನು? ಅವರು ಜನರಿಗೆ ಮುಖ್ಯವಾದ ಸಮಸ್ಯೆಗಳನ್ನು ಎತ್ತಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈ ರೀತಿ ಹತಾಶರಾಗುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada