ಸರ್ಕಾರಕ್ಕೆ ಮೀಸಲಾತಿ ತಲೆಬಿಸಿ: ಹೋರಾಟಕ್ಕೆ ಮುಂದಾದ ಪಂಚಮಸಾಲಿ, ಒಕ್ಕಲಿಗ, ಕುರುಬ, ಬಿಲ್ಲವ, ಮುಸ್ಲಿಂ ಸಮುದಾಯಗಳು
ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ, ರಾಜಕೀಯವಾಗಿ ನಿರ್ಣಾಯಕ ಪಾತ್ರ ನಿರ್ವಹಿಸುವ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳು ಇದೀಗ ಹೋರಾಟ ಆರಂಭಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ಬೆನ್ನಲ್ಲೇ ಹೊಸ ಬೇಡಿಕೆಗಳು ಕೇಳಿಬರುತ್ತಿವೆ. ಹಲವು ಸಮುದಾಯಗಳು ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸುತ್ತಿವೆ. ಶೀಘ್ರದಲ್ಲಿಯೇ ವಿಧಾನಮಂಡಲ ಅಧಿವೇಶನವೂ ನಡೆಯಲಿದ್ದು ಈ ಸಂದರ್ಭದಲ್ಲಿ ಹೋರಾಟಗಳು ಇನ್ನಷ್ಟು ಗರಿಗೆದರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ, ರಾಜಕೀಯವಾಗಿ ನಿರ್ಣಾಯಕ ಪಾತ್ರ ನಿರ್ವಹಿಸುವ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳು ಇದೀಗ ಹೋರಾಟ ಆರಂಭಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಒಕ್ಕಲಿಗ ಸಮುದಾಯದ ಎಚ್ಚರಿಕೆ
ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಜ 23ರ ಒಳಗೆ ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ 4ರಿಂದ ಶೇ 12ಕ್ಕೆ ಹೆಚ್ಚಿಸುವ ಘೋಷಣೆ ಹೊರಬೀಳಬೇಕು ಎಂದು ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ನಿನ್ನೆ (ನ 27) ನಡೆದಿದ್ದ ಒಕ್ಕಲಿಗರ ಸಂಘದ ಸಭೆಯಲ್ಲಿ ಎಚ್ಚರಿಸಿದ್ದರು. ‘ಎಸ್ಸಿ-ಎಸ್‍ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದ್ದೀರಿ. ನಮಗೂ ನಮ್ಮ ಹಕ್ಕು ಕೊಡಿ. ರಾಜ್ಯದ ಜನಸಂಖ್ಯೆಯಲ್ಲಿ ಶೇ 16ರಷ್ಟು ಇರುವ ನಮಗೆ ಶೇ 15 ರಷ್ಟು ಮೀಸಲಾತಿ ಬೇಕು. ನಗರ ಪ್ರದೇಶ, ಆರ್ಥಿಕ ಹಿಂದುಳಿದ ವರ್ಗ ಮೀಸಲಾತಿಯಡಿ ನಮಗೂ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಇಲ್ಲಿಯವರೆಗೂ ಸಹಿಸಿಕೊಂಡು ಬಂದಿದ್ದು ಸಾಕು. ಸಹನೆಯೇ ದೌರ್ಬಲ್ಯ ಎಂದು ತಿಳಿದುಕೊಂಡರೆ ಅದನ್ನು ಸಹಿಸಲು ಆಗುವುದಿಲ್ಲ. ಆದಷ್ಟು ಬೇಗ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಕು’ ಎಂದು ಸ್ವಾಮೀಜಿ ಹೇಳಿದ್ದರು.
‘ನಮ್ಮ ಸಮಾಜಕ್ಕೆ ದೇವೇಗೌಡರ ಹಾಗೂ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರ. ಹೀಗಾಗಿ ಇವರಿಬ್ಬರನ್ನು ಗೌರವಿಸುವ ಯೋಚನೆ ಮಾಡಿದ್ದೇವೆ. ಸಮುದಾಯದ ಪರವಾಗಿ ಜನವರಿ 23 ರಂದು ಅವರಿಬ್ಬರನ್ನೂ ಗೌರವಿಸಲಾಗುವುದು. ಅಷ್ಟರೊಳಗೆ ನಮಗೆ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟದ ಕಿಚ್ಚು ಹೊತ್ತಿಸಬೇಕಾಗುತ್ತದೆ. ಈಗಂತೂ ಡಬಲ್ ಸರ್ಕಾರ ಇದೆ. ಮೊನ್ನೆ ಮೋದಿಯವರು ಬಂದು ಹೋಗಿದ್ದಾರೆ. ನಮ್ಮ ಎರಡು ಬೇಡಿಕೆಯಲ್ಲಿ ಒಂದು ಕೇಂದ್ರ ಸರ್ಕಾರ ಈಡೇರಿಸಬೇಕು, ಒಂದನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಅವರು ಮಂಡಿಸಿದ ನಿರ್ಣಯವನ್ನು ಸಮುದಾಯ ಸ್ವಾಗತಿಸಿತ್ತು. ಇದೀಗ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗುವ ಬಗ್ಗೆಯೂ ಒಕ್ಕಲಿಗರ ಸಂಘ ಮತ್ತು ಮೀಸಲಾತಿ ಹೋರಾಟ ಸಮಿತಿ ಸಿದ್ಧತೆಗೆ ಮುಂದಾಗಿವೆ.
ಪಂಚಮಸಾಲಿ ಸಮುದಾಯದ ಆಗ್ರಹ
ಕಳೆದ ಕೆಲ ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯವೂ ಇದೀಗ ಪಟ್ಟು ಬಿಗಿ ಮಾಡುತ್ತಿದೆ. ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಡಿ 19ರ ಗಡುವು ವಿಧಿಸಲಾಗಿದೆ. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಡಿ 12 ವಿಧಾನಸೌಧ ಮುತ್ತಿಗೆ ನಿರ್ಧಾರ ಕೈಬಿಟ್ಟಿದ್ದೇವೆ. ಆದರೆ ವಿಧಾನಮಂಡಲ ಅಧಿವೇಶನ ಆರಂಭವಾಗುವುದರ ಒಳಗೆ, ಅಂದರೆ ಡಿ 19ರ ಒಳಗೆ ಶಾಶ್ವತ ಹಿಂದುಳಿದ ವರ್ಗದ ಆಯೋಗದ ವರದಿಯನ್ನಾದರೂ ರಾಜ್ಯ ಸರ್ಕಾರ ಪಡೆದುಕೊಳ್ಳಬೇಕು. ನಿರ್ಲಕ್ಷಿಸಿದರೆ ಹೋರಾಟ ಮುಂದುವರಿಸುತ್ತೇವೆ’ ಎಮದು ಎಚ್ಚರಿಸಿದರು. ‘ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ ಸುವರ್ಣ ವಿಧಾನಸೌಧದ ಎದುರು ಪಂಚಮಸಾಲಿ ಸಮುದಾಯದ 25 ಲಕ್ಷ ಮಂದಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ’ ಎಂದು ಎಚ್ಚರಿಸಿದರು.
ಮೀಸಲಾತಿಯಲ್ಲಿ ಅನ್ಯಾಯ: ಕುರುಬ ಸಮುದಾಯದ ಆಕ್ರೋಶ
ಪರಿಶಿಷ್ಟ ಪಂಗಡ ಮೀಸಲಾತಿಯ ಹೊಸ ನಿಯಮಗಳಿಂದ ತಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಕುರುಬ ಸಮುದಾಯದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಯಲ್ಲಿ ಕುರುಬರಿಗೆ ಸಂಬಂಧಪಟ್ಟ ರಾಜಗೊಂಡ, ಜೇನುಕುರುಬ, ಕಾಡು ಕುರುಬ, ಕಟ್ಟುನಾಯಕನ್, ಕುರುಮನ್ಸ್ ಮತ್ತು ಕ್ರಮ ಸಂಖ್ಯೆ 28 ರಲ್ಲಿ ಕುರುಬ ಎಂಬ ಜಾತಿಗಳು ಇದ್ದರೂ ಸಹ ರಾಜ್ಯವ್ಯಾಪಿ ಮೀಸಲಾತಿ ವಿಸ್ತರಿಸಿಲ್ಲ’ ಎಂಬ ಆಕ್ರೋಶ ಕುರುಬ ಸಮುದಾಯದಲ್ಲಿ ವ್ಯಕ್ತವಾಗಿದೆ.
‘2018ರಲ್ಲಿ ಎಸ್‍ಟಿ ಮೀಸಲಾತಿಗಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದಿಂದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶಿಸಲಾಗಿತ್ತು. ಈ ಅಧ್ಯಯನ ಸಂಪೂರ್ಣವಾಗಿದೆ. ಸರ್ಕಾರವು ಇದನ್ನು ಮಂಡಿಸಿ, ಪರಿಶೀಲಿಸಿ, ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು’ ಎನ್ನುವುದು ಆ ಸಮುದಾಯದ ಮುಖಂಡರ ಬೇಡಿಕೆಯಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ತವರಲ್ಲೇ ಬಿಲ್ಲವ ಸಮಾಜದ ಆಕ್ರೋಶ ಸ್ಫೋಟ
ರಾಜ್ಯದಲ್ಲಿ ಸುಮಾರು 75 ಲಕ್ಷದಷ್ಟಿರೋ ಈಡಿಗ-ಬಿಲ್ಲವ ಸಮುದಾಯ ಸುಮಾರು 26 ಪಂಗಡಗಳನ್ನು ಹೊಂದಿದೆ. ಸದ್ಯ ಪ್ರವರ್ಗ 2ಎ ಅಡಿಯಲ್ಲಿರುವ ಬಿಲ್ಲವ-ಈಡಿಗ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರ್ಪಡೆ ಮಾಡಬೇಕು. ಇದರ ಜೊತೆಗೆ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಬೇಕು, ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯವನ್ನು ಸಮುದಾಯದ ಮುಖಂಡರು ಮಂಡಿಸುತ್ತಿದ್ದಾರೆ. ಈ ಸಂಬಂಧ ಜನವರಿ 6ರಿಂದ ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಸುಮಾರು 658 ಕಿಮೀ ದೂರದ ಪಾದಯಾತ್ರೆ ನಡೆಸಲು ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.
ಮುಸ್ಲಿಂ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ
ವಿವಿಧ ಜಾತಿಗಳು ಮೀಸಲಾತಿಗೆ ಆಗ್ರಹಿಸುತ್ತಿರುವ ಬೆನ್ನಿಗೇ ಮುಸ್ಲಿಂ ಸಮುದಾಯವೂ ಬೇಡಿಕೆ ಮುಂದಿಟ್ಟಿದೆ. ಮೀಸಲಾತಿ ಪ್ರಮಾಣವನ್ನು ಶೇ 4ರಿಂದ 7ಕ್ಕೆ ಹೆಚ್ಚಿಸಬೇಕು ಎಂದು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ‘ಪ್ರವರ್ಗ 2ಎ’ನಲ್ಲಿ ಈಗಾಗಲೇ 102 ಜಾತಿಗಳಿವೆ. ಅದರಲ್ಲಿ ಮುಸ್ಲಿಮರನ್ನು ಸೇರಿಸಿದರೆ ಹೆಚ್ಚು ಪ್ರಯೋಜನವಾಗುವುದಿಲ್ಲ. ಸಿದ್ದರಾಮಯ್ಯ ಸರ್ಕಾರವಿದ್ದಾಗ ನಡೆಸಿದ ಜಾತಿ ಗಣತಿಯ ವರದಿ ಸೋರಿಕೆಯಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ 16ರಷ್ಟು ಇದೆ. ಇದಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಾ ಅದಿ ಹೇಳಿದ್ದಾರೆ.