ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಡುಗಡೆಯಾದ ಹಣ ಫಲಾನುಭವಿಗೆ ತಲುಪುತ್ತಿರಲಿಲ್ಲ; ಮೋದಿ ವಾಗ್ದಾಳಿ

ನಮ್ಮ ‘ಸಬ್​ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರದ ಸ್ಫೂರ್ತಿಯಾದ ಭಗವಾನ್ ಬಸವೇಶ್ವರ ಅವರಿಗೆ ನಮಸ್ಕಾರಗಳು. ಬೆಳಗಾವಿಯ ಜನರ ಪ್ರೀತಿ ಮರೆಯಲಾರದು. ಬೆಳಗಾವಿಯ ನನ್ನ ಬಂಧು ಭಗಿನಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಬೆಳಗಾವಿಗೆ ಭೇಟಿ ನೀಡುವುದೆಂದರೆ ಯಾವ ತೀರ್ಥಯಾತ್ರೆಗೂ ಕಡಿಮೆಯಲ್ಲ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಡುಗಡೆಯಾದ ಹಣ ಫಲಾನುಭವಿಗೆ ತಲುಪುತ್ತಿರಲಿಲ್ಲ; ಮೋದಿ ವಾಗ್ದಾಳಿ
ಪ್ರಧಾನಿ ಮೋದಿ
Image Credit source: ANI

Updated on: Feb 27, 2023 | 5:50 PM

ಬೆಳಗಾವಿ: ‘ಕಾಂಗ್ರೆಸ್ ಸರ್ಕಾರ ಇದ್ದಾಗ ಬಿಡುಗಡೆ ಮಾಡುತ್ತಿದ್ದ ಹಣ ಪೂರ್ತಿಯಾಗಿ ಫಲಾನುಭವಿಗಳನ್ನು ತಲುಪುತ್ತಿರಲಿಲ್ಲ. ಕಾಂಗ್ರೆಸ್​​ನವರು ದಶಕಗಳ ಕಾಳ ರೈತರನ್ನು ಕಡೆಗಣಿಸಿದ್ದರು. ಆದರೆ, ನಮ್ಮ ಸರ್ಕಾರದ ಪಿಎಂ ಕಿಸಾನ್ (PM Kisan) ಯೋಜನೆಯಲ್ಲಿ ಹಾಗಲ್ಲ. ಬಿಡುಗಡೆಯಾಗುವ ಪೂರ್ತಿ ಹಣ ರೈತರ ಖಾತೆಗಳಿಗೆ ನೇರವಾಗಿ ಜಮಾವಣೆಯಾಗಿದೆ, ಆಗುತ್ತಿದೆ. ಆಧಾರ್, ಜನ್​ಧನ್ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿತ್ತಾ’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ನಗರದ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಹಲವು ರಾಜ್ಯಗಳಲ್ಲಿ ಪರಿವಾರ ವಾದ (ವಂಶಾಡಳಿತ) ಇದೆ. ಕರ್ನಾಟಕದಲ್ಲಿಯೂ ಇದೆ. ಅದನ್ನು ನಿರ್ಮೂಲನೆ ಮಾಡಬೇಕಿದೆ ಎಂದು ಅವರು ಕರೆ ನೀಡಿದರು. ಕಾಂಗ್ರೆಸ್​​ನ ವಂಶಾಡಳಿತದ ಬಗ್ಗೆ ವಾಗ್ದಾಳಿ ನಡೆಸಿದರು.

ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ

ನಮ್ಮ ‘ಸಬ್​ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರದ ಸ್ಫೂರ್ತಿಯಾದ ಭಗವಾನ್ ಬಸವೇಶ್ವರ ಅವರಿಗೆ ನಮಸ್ಕಾರಗಳು. ಬೆಳಗಾವಿಯ ಜನರ ಪ್ರೀತಿ ಮರೆಯಲಾರದು. ಬೆಳಗಾವಿಯ ನನ್ನ ಬಂಧು ಭಗಿನಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಬೆಳಗಾವಿಗೆ ಭೇಟಿ ನೀಡುವುದೆಂದರೆ ಯಾವ ತೀರ್ಥಯಾತ್ರೆಗೂ ಕಡಿಮೆಯಲ್ಲ. ಇದು ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ನಾಡು ಎಂದು ಹೇಳಿದರು.

ಬೆಳಗಾವಿಯ ಈ ಭೂಮಿಯಲ್ಲಿ ಡಬಲ್ ಎಂಜಿನ್ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಕಗಳನ್ನು ಕೈಗೊಂಡಿದೆ. ಇಂದು ಚಾಲನೆ ನೀಡಿದ ಯೋಜನೆಗಳು ಬೆಳಗಾವಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಲಿವೆ. ಹಿಂದೂಸ್ತಾನದ ಎಲ್ಲ ರೈತರನ್ನು ಇಂದು ಬೆಳಗಾವಿ ಜತೆ ಬೆಸೆಯಲಾಗಿದೆ. ದೇಶದ ಎಲ್ಲ ರೈತರ ಖಾತೆಗಳಿಗೆ ಒಂದು ಕ್ಲಿಕ್ ಮೂಲಕ ಹಣ ವರ್ಗಾವಣೆ ಆಗಿದೆ. ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಇಂದು ಬದಲಾಗುತ್ತಿರುವ ಭಾರತದಲ್ಲಿ ಒಂದಾದ ಮೇಲೊಂದರಂತೆ ಅಭಿವೃದ್ಧಿಯಾಗುತ್ತಿದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಪ್ರಧಾನಿಗೆ ಅದ್ದೂರಿ ಸ್ವಾಗತ; ರೋಡ್​ ಶೋ ವೇಳೆ ಹೂಮಳೆಯಲ್ಲಿ ಮಿಂದೆದ್ದ ಮೋದಿ

ಭಾರತದ ನವ ನಿರ್ಮಾಣದಲ್ಲಿ ಬೆಳಗಾವಿಯ ಪಾತ್ರ ಸಾಕಷ್ಟಿದೆ. 100 ವರ್ಷಗಳಿಗೂ ಮೊದಲೇ ಇಲ್ಲಿ ಸ್ಟಾರ್ಟಪ್ ಆರಂಭಗೊಂಡಿತ್ತು. ಬಾಬುರಾವ್ ಅವರು ಇಲ್ಲಿ ಸಣ್ಣದಾದ ಘಟಕವೊಂದನ್ನು ಸ್ಥಾಪಿಸಿದ್ದರು. ಈಗ ಬೆಳಗಾವಿಯ ಅಭಿವೃದ್ಧಿಗೆ ಹೊಸ ಗತಿ ಸಿಗಲಿದೆ ಎಂದು ಮೋದಿ ಹೇಳಿದರು.

ಭಾರತದ ಭವಿಷ್ಯದ ದೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ. ರೈತರಿಗಾಗಿ ಪಿಎಂ ಪ್ರಮಾಣ್ ಸೇರಿದಂತೆ ಅನೇಕ ಯೋಜನೆಗಳನ್ನು ಪ್ರಕಟಿಸಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ರೈತ ಬಂಧು ಯಡಿಯೂರಪ್ಪ

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ವಿಚಾರ ಪ್ರಸ್ತಾಪಿಸಿದ ಮೋದಿ, ಶ್ರೀ ಅನ್ನ ಯೋಜನೆಯ ಬಗ್ಗೆ ಉಲ್ಲೇಖಿಸಿದರು. ಶ್ರೀ ಅನ್ನ ಯೋಜನೆಗಾಗಿ ಯಡಿಯೂರಪ್ಪ ಅಭಿಯಾನ ಮಾಡಿದ್ದರು. ಸಿರಿಧಾನ್ಯ ಯೋಜನೆಯಲ್ಲಿ ಬಿಎಸ್​ವೈ ಅವರ ಸಹಕಾರ ಬಹಳಷ್ಟಿದೆ ಎಂದ ಮೋದಿ, ಯಡಿಯೂರಪ್ಪ ಅವರನ್ನು ರೈತ ಬಂಧು ಎಂದು ಬಣ್ಣಿಸಿದರು. ಈ ವೇಳೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿತು.

ಇದನ್ನೂ ಓದಿ: PM KISAN 13th Installment: ಬೆಳಗಾವಿಯಲ್ಲಿ ಪಿಎಂ ಕಿಸಾನ್ 13ನೇ ಕಂತು ಬಿಡುಗಡೆ ಮಾಡಿದ ನರೇಂದ್ರ ಮೋದಿ

ಕರ್ನಾಟಕದ ಸಂಪರ್ಕ ವ್ಯವಸ್ಥೆಗೆ ಹೆಚ್ಚಿನ ಪಾಮುಖ್ಯತೆಯನ್ನು ನೀಡಿದ್ದೇವೆ. ಇಂದು ದೇಶದಲ್ಲಿ 45 ಸಾವಿರ ಕೋಟಿ ರೂ. ಮೌಲ್ಯದ ರೈಲ್ವೆ ಕಾಮಾಗಿರಿ ಪ್ರಗತಿಯಲ್ಲಿದೆ. ಬಜೆಟ್​​ನಲ್ಲಿ ಕಬ್ಬು ಬೆಳೆಗಾರರಿಗೆ ವಿಶೇಷ ಯೋಜನೆ ಘೋಷಿಸಿದ್ದೇವೆ. ಕಬ್ಬು ಬೆಳೆಗಾರರಿಗೆ ಅನುಕೂಲವಾಗುವಂಥ ಯೋಜನೆ ಜಾರಿಗೊಳಿಸಿದ್ದೇವೆ. ಕಬ್ಬು ಬೆಳೆಯಿಂದ ಎಥೆನಾಲ್ ಉತ್ಪಾದನೆಗೂ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದು ಮೋದಿ ಹೇಳಿದರು.

ಡಬಲ್ ಎಂಜಿನ್ ಸರ್ಕಾರದಿಂದ ಕ್ಷಿಪ್ರ ಅಭಿವೃದ್ಧಿ

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ಕ್ಷಿಪ್ರ ಅಭಿವೃದ್ಧಿ ಸಾಧ್ಯವಾಗಿದೆ. ಇದಕ್ಕೆ ಸಾಕ್ಷಿ ಜಲ್ ಜೀವನ್ ಮಿಷನ್. ಇದರಿಂದ ಮನೆ ಮನೆಯ ನಲ್ಲಿ ನಲ್ಲಿಯಲ್ಲಿ ನೀರು ಬರುತ್ತಿದೆ. ರಾಜ್ಯದಲ್ಲಿ ಶೇ 60ರಷ್ಟು ಕೆಲಸ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ‌ ಅವರ ಆಸಕ್ತಿಯಿಂದ ಅದು ಸಾಧ್ಯವಾಗಿದೆ ಎಂದು ಮೋದಿ ಶ್ಲಾಘಿಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ