ಬೆಂಗಳೂರು/ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ (siddaramaiah) ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಬಿಟ್ಟು ಕೋಲಾರ (Kolar) ಕ್ಷೇತ್ರದಿಂದ ಅಖಾಡಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕೋಲಾರ ಅಖಾಡವನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಿದ್ದರಾಮಯ್ಯನವರು ನಾಳೆ(ನ.13) ಕೋಲಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ರಮೇಶ್ ಕುಮಾರ್ ಜಿಲ್ಲಾ ಮುಖಂಡರ ಜೊತೆ ಸಭೆ ಮಾಡಿದ್ದು, ಸಿದ್ದು ಬರಮಾಡಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧೆಗೆ ಕೋಲಾರದಲ್ಲಿ ಎರಡು ಏಜೆನ್ಸಿಗಳಿಂದ ಸರ್ವೆ: ವರದಿ ಮಾಹಿತಿ ಬಿಚ್ಚಿಟ್ಟ MLC
ಕೋಲಾರವೇ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಸೇಫ್ ಕ್ಷೇತ್ರ ಎನ್ನುವ ಮಾತುಗಳು ಸಹ ಪಕ್ಷದಲ್ಲಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಿದ್ದು, ಕೋಲಾರದಿಂದ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಇನ್ನು ಅಧಿಕೃತವಾಗಿ ಅಖಾಡಕ್ಕಿಳಿಯುವ ಮುನ್ನ ಸಿದ್ದರಾಮಯ್ಯ ನವೆಂಬರ್ 13 ರಂದು ಕೋಲಾರಕ್ಕೆ ಭೇಟಿ ನೀಡಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರು ಹಲವು ಸಮುದಾಯಗಳ ಓಲೈಕೆಗೆ ಮುಂದಾಗಿದ್ದಾರೆ.
ಏಳು ಸಮುದಾಯಗಳ ಓಲೈಕೆಗೆ ಪ್ಲಾನ್
ಯೆಸ್…ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಾಳೆ(ಭಾನುವಾರ) ಕೋಲಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಚರ್ಚ್, ಮಸೀದಿ, ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ಒಂದೇ ದಿನ ಸುಮಾರು ಏಳು ಸಮುದಾಯಗಳ ಜನರ ಓಲೈಕೆಗೆ ಪ್ಲಾನ್ ಮಾಡಿದ್ದಾರೆ.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ: ಪೂರ್ವಭಾವಿ ಸಭೆಯಲ್ಲಿ ಸಹಮತ ವ್ಯಕ್ತಪಡಿಸಿದ ಮುಖಂಡರು
ಮೊದಲು ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಲಿರುವ ಸಿದ್ದರಾಮಯ್ಯ, ನಂತರ ಮೆಥೋಡಿಸ್ಟ್ ಚರ್ಚ್ಗೆ ತೆರಳಿ ಪ್ರಾರ್ಥನೆ ಮಾಡಲಿದ್ದಾರೆ. ಇನ್ನು ವಾಲ್ಮೀಕಿ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ, ಕೈವಾರ ತಾತಯ್ಯ ಮತ್ತು ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಕ್ಲಾಕ್ ಟವರ್ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.
ಸೀತಿ ಬೈರವೇಶ್ವರ ದೇವಾಲಯಕ್ಕೆ ತೆರಳಲಿದ್ದು, ನಂತರ ಮಾಜಿ ಸಚಿವ ಸಿ.ಬೈರೇಗೌಡರ ಸಮಾಧಿಗೆ ಗೌರವ ಸರ್ಪಣೆ ಮಾಡಲಿದ್ದಾರೆ. ಬಳಿಕ ಎಲ್ಲಾ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ಕೋಲಾರ ಕ್ಷೇತ್ರದ ರಾಜಕೀಯ ನಾಡಿಮಿಡಿತ ಅರಿಯಲಿದ್ದಾರೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಪ್ರವಾಸ ವೇಳೆ, ಹಲವು ಸಮುದಾಯಗಳ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಒಂದೇ ದಿನ ಸುಮಾರು ಏಳು ಸಮುದಾಯಗಳ ಜನರ ಓಲೈಕೆಗೆ ಪ್ಲಾನ್ ಹಾಕಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Sat, 12 November 22