ಭಗವಂತ ಖೂಬಾಗೆ ಟಿಕೆಟ್ ವಿರೋಧಸಿದ ಪ್ರಭುಚೌಹಾಣ್; ಗದ್ದಲದ ನಡುವೆ ಬಿಜೆಪಿ ಸಭೆಯಿಂದ ಹೊರನಡೆದ ಖೂಬಾ

| Updated By: Rakesh Nayak Manchi

Updated on: Jan 11, 2024 | 7:47 AM

ಕೊಪ್ಪಳ ಹಾಗೂ ಬೀದರ್​ ಜಿಲ್ಲೆಗಳ ಒಟ್ಟು 13 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಪರಿಸ್ಥಿತಿಯನ್ನು ಅವಲೋಕಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬುಧವಾರ ಸಭೆ ನಡೆದಿದೆ. ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಬೀದರ್ ಸಂಸದರೂ ಆಗಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರು ಭಾಗಿಯಾಗಿದ್ದರು. ಸಭೆಯಲ್ಲಿ ಖೂಬಾಗೆ ಟಿಕೆಟ್ ನೀಡುವುದನ್ನು ಸಂಗಣ್ಣ ಕರಡಿ ಸೇರಿದಂತೆ ಶಾಸಕರು ಭಾರೀ ವಿರೋಧ ವ್ಯಕ್ತಪಡಿಸಿದರು.

ಭಗವಂತ ಖೂಬಾಗೆ ಟಿಕೆಟ್ ವಿರೋಧಸಿದ ಪ್ರಭುಚೌಹಾಣ್; ಗದ್ದಲದ ನಡುವೆ ಬಿಜೆಪಿ ಸಭೆಯಿಂದ ಹೊರನಡೆದ ಖೂಬಾ
ಭಗವಂತ ಖೂಬಾ ಮತ್ತು ಪ್ರಭು ಚೌಹಾಣ್
Follow us on

ಬೆಂಗಳೂರು, ಜ.11: ಕೊಪ್ಪಳ ಸಂಸದ ಸಂಗಣ್ಣ ಕರಡಿ (Sanganna Karadi) ಹಾಗೂ ಬೀದರ್ ಸಂಸದರೂ ಆಗಿರುವ ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಅವರಿಗೆ ಮರು ಟಿಕೆಟ್ ನೀಡುವುದನ್ನು ವಿರೋಧಿಸುತ್ತಿರುವ ಪಕ್ಷದ ನಾಯಕರೊಂದಿಗೆ ಮುಂಬರುವ ಲೋಕಸಭೆ ಚುನಾವಣೆ ಕುರಿತು ಚರ್ಚಿಸಲು ಬುಧವಾರ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಆಂತರಿಕ ಕಲಹ ಸ್ಫೋಟಗೊಂಡು ಭಗವಂತ ಖೂಬಾ ಸಭೆಯಿಂದ ಹೊರನಡೆದ ಘಟನೆ ನಡೆಯಿತು.

ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮತ್ತೆ ಟಿಕೆಟ್ ನೀಡುವುದನ್ನು ಪಕ್ಷದ ಪದಾಧಿಕಾರಿಗಳು ವಿರೋಧಿಸಿದರು. ಇತ್ತ ಖೂಬಾ ಸಂಸದರಾಗಿರುವ ಬೀದರ್‌ನಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ವಶವಾಗಿದೆ. ಆದರೆ, ಬಿಜೆಪಿ ಶಾಸಕರು ಖೂಬಾಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದಾರೆ.

ಭಗವಂತ ಖೂಬಾ ಅವರು ಬಿಜೆಪಿ ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ನಮ್ಮ ಭವಿಷ್ಯ ಹಾಳುಮಾಡುವ ಪ್ರಯತ್ನ ನಡೆಸಿದ್ದರು ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಸಭೆಯಲ್ಲಿ ಖೂಬಾ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮಾಜಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಶರಣು ಸಲಗರ ಕೂಡ ಬೆಂಬಲವಾಗಿ ಮಾತನಾಡಿ ಖೂಬಾ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದರು ಎಂದು ಎಂದು ಮೂಲಗಳು ತಿಳಿಸಿದ್ದಾಗಿ ಸುದ್ದಿಸಂಸ್ಥೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಇದನ್ನೂ ಓದಿ: ಬಿಕೆ ಹರಿಪ್ರಸಾದ್ ಬಂಧಿಸಿ ಮಂಪರು ಪರೀಕ್ಷೆ ಮಾಡಬೇಕು: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಇಬ್ಬರೂ ಶಾಸಕರು ಖೂಬಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವರೂ ಧ್ವನಿ ಎತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಹೈಕಮಾಂಡ್​ಗೆ ಬಿಟ್ಟಿದ್ದು ಎಂದು ಹೇಳಿದರು. ಖೂಬಾ ಅವರು ಸಭೆಯಿಂದ ಹೊರ ನಡೆಯುವ ವೇಳೆ ಕ್ಷೇತ್ರದ ಮುಂದಿನ ಅಭ್ಯರ್ಥಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ತಿಳಿಸುವಂತೆ ಶಾಸಕರನ್ನು ಕೇಳಿದಾಗ ಮತ್ತೆ ಬೀದರ್ ಟಿಕೆಟ್ ಕೊಟ್ಟರೆ ಖೂಬಾ ಪರ ಪ್ರಚಾರ ಮಾಡುವುದಿಲ್ಲ ಎಂದು ಶಾಸಕರು ಹೇಳಿದ್ದಾರೆ.

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಕೊಪ್ಪಳ ಸಂಸದ ಸಂಗಣ್ಣಗೆ ಟಿಕೆಟ್ ನೀಡುವ ವಿಚಾರದಲ್ಲಿ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವ ಬದಲು ಸಂಗಣ್ಣ ಮತ್ತು ಅವರ ಕುಟುಂಬಕ್ಕೆ ಪಕ್ಷವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂದು ಜಿಲ್ಲೆಯ ಬಿಜೆಪಿ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.

ಸಂಗಣ್ಣ ಅವರು ಸಂಸದರಷ್ಟೇ ಅಲ್ಲ, ಸೋತ ಸೊಸೆಗೆ ವಿಧಾನಸಭೆ ಟಿಕೆಟ್ ಖಾತ್ರಿಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಧಾನಿ ಮೋದಿಯವರನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿದ್ದೇವೆ. ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆಲ್ಲಲು ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದರು.

ಇಂತಹ ಸಮಾಲೋಚನೆ ಸಭೆಗಳು ಪಕ್ಷದೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಅವಕಾಶ ಕಲ್ಪಿಸುತ್ತವೆ ಎಂದು ಮಾಜಿ ಸಿಎಂ, ಸಂಸದ ಡಿವಿ ಸದಾನಂದಗೌಡ ಹೇಳಿದರು. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ