Presidential Election Results 2022 ಯಾರಾಗುತ್ತಾರೆ ಮುಂದಿನ ರಾಷ್ಟ್ರಪತಿ? ಚುನಾವಣಾ ಫಲಿತಾಂಶ ಇಂದು

| Updated By: ರಶ್ಮಿ ಕಲ್ಲಕಟ್ಟ

Updated on: Jul 21, 2022 | 6:30 AM

ದೇಶದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಜುಲೈ 18 ಸೋಮವಾರದಂದು ಮತದಾನ ನಡೆದಿದ್ದು ಇಂದು (ಗುರುವಾರ) 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.

Presidential Election Results 2022 ಯಾರಾಗುತ್ತಾರೆ ಮುಂದಿನ ರಾಷ್ಟ್ರಪತಿ? ಚುನಾವಣಾ ಫಲಿತಾಂಶ ಇಂದು
ದ್ರೌಪದಿ ಮುರ್ಮು- ಯಶವಂತ ಸಿನ್ಹಾ
Follow us on

ರಾಷ್ಟ್ರಪತಿ  ರಾಮನಾಥ ಕೋವಿಂದ್ ಅಧಿಕಾರ ಅವಧಿ ಜುಲೈ 24ಕ್ಕೆ ಮುಗಿಯಲ್ಲಿದ್ದು ದೇಶದ ನೂತನ ರಾಷ್ಟ್ರಪತಿ ಯಾರಾಗುತ್ತಾರೆ ಎಂಬ ಕುತೂಹಲದಿಂದ ಜನರು ಚುನಾವಣಾ ಫಲಿತಾಂಶವನ್ನು(Presidential Election) ಎದುರು ನೋಡುತ್ತಿದ್ದಾರೆ. ದೇಶದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಜುಲೈ 18 ಸೋಮವಾರದಂದು ಮತದಾನ ನಡೆದಿದ್ದು ಇಂದು (ಗುರುವಾರ) 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಆಡಳಿತಾರೂಢ ಎನ್‌ಡಿಎಯ ದ್ರೌಪದಿ ಮುರ್ಮು(Droupadi Murmu) ಮತ್ತು ಪ್ರತಿಪಕ್ಷದ ಯಶವಂತ ಸಿನ್ಹಾ(Yashwant Sinha) ಚುನಾವಣಾ ಕಣದಲ್ಲಿದ್ದಾರೆ. ಬುಡಕಟ್ಟು ಜನಾಂಗದ ನಾಯಕಿ ಹಾಗೂ ಜಾರ್ಖಂಡ್​​​ನ ಮಾಜಿ ರಾಜ್ಯಪಾಲರಾಗಿದ್ದವರು ದ್ರೌಪದಿ ಮುರ್ಮು. 64ರ ಹರೆಯದ ಮುರ್ಮು ಆಯ್ಕೆಯಾದರೆ ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಎರಡನೇ ಮಹಿಳೆ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.ಮಾಜಿ ಬಿಜೆಪಿ ನಾಯಕರಾಗಿರುವ ಸಿನ್ಹಾ, 1984ರಲ್ಲಿ ಐಎಎಸ್ ನಿಂದ ರಾಜೀನಾಮೆ ನೀಡಿ ಜನತಾ ದಳ ಸೇರಿದ್ದರು.1988ರಲ್ಲಿ ಅವರು  ಸಂಸದರಾಗಿದ್ದ,  ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಮತ್ತು ವಾಜಪೇಯಿ ಸಚಿವ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದರು. ಕೋವಿಂದ್ ಅವರ ಅಧಿಕಾರವಧಿ ಜುಲೈ 24ರಂದು ಮುಗಿಯಲಿದ್ದು ನೂತನ ರಾಷ್ಟ್ರಪತಿ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಎಲ್ಲಾ ರಾಜ್ಯಗಳ ಮತಪೆಟ್ಟಿಗೆಗಳು ಸಂಸತ್ ಭವನವನ್ನು ತಲುಪಿದ್ದು, ಚುನಾವಣಾಧಿಕಾರಿಗಳು ಸಂಸತ್ತಿನ ಸ್ಟ್ರಾಂಗ್‌ರೂಮ್ ಕೊಠಡಿ ಸಂಖ್ಯೆ 63 ರಲ್ಲಿ ಎಣಿಕೆಗೆ ಸಿದ್ಧರಾಗಿದ್ದಾರೆ. ಚುನಾವಣೆಯ ಮುಖ್ಯ ಚುನಾವಣಾಧಿಕಾರಿಯಾಗಿರುವ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ ಸಿ ಮೂಡಿ ಅವರು ಗುರುವಾರ ಮತ ಎಣಿಕೆಯನ್ನು ನೋಡಿಕೊಳ್ಳಲಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ಮೂಡಿಯವರುಯವರು ಮೊದಲು ಎಲ್ಲಾ ಸಂಸದರ ಮತಗಳನ್ನು ಎಣಿಸಿದ ನಂತರ ಮತ್ತು  10 ರಾಜ್ಯಗಳ ಮತಗಳನ್ನು  ಎಣಿಸಿದ ನಂತರ ಚುನಾವಣಾ ಟ್ರೆಂಡ್ ಬಗ್ಗೆ ಹೇಳಲಿದ್ದಾರೆ.  ಆಮೇಲೆ 20 ರಾಜ್ಯಗಳ ಮತಗಳನ್ನು ಎಣಿಸಿದ ನಂತರ ಚುನಾವಣಾ ಟ್ರೆಂಡ್‌ಗಳ ಬಗ್ಗೆ ಮತ್ತೊಮ್ಮೆ ಸಂಕ್ಷಿಪ್ತವಾಗಿ ತಿಳಿಸುತ್ತಾರೆ. ಇದಾದ ನಂತರ ಅಂತಿಮವಾಗಿ ಒಟ್ಟು ಎಣಿಕೆಯ ನಂತರ ಫಲಿತಾಂಶವನ್ನು ಘೋಷಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಸಂಜೆಯೇ ರಾಜ್ಯ ವಿಧಾನಸಭೆಗಳ ಎಲ್ಲಾ ಮತಪೆಟ್ಟಿಗೆಗಳು ಸಂಸತ್ತಿನ ಸ್ಟ್ರಾಂಗ್‌ರೂಮ್‌ಗೆ ಬಂದಿದ್ದು, ಅದೇ ದಿನದಿಂದ ಬಿಗಿ ಭದ್ರತೆಯ ನಡುವೆ ಅದನ್ನು ಬೀಗ  ಹಾಕಿ ಇರಿಸಲಾಗಿದೆ.  ವಿವಿಧ ರಾಜ್ಯಗಳಿಂದ ವಿಮಾನ ಮೂಲಕ ಬಂದ  ಮತ ಪೆಟ್ಟಿಗೆಗಳನ್ನು ಮಿಸ್ಟರ್  ಬ್ಯಾಲೆಟ್ ಬಾಕ್ಸ್ ಎಂದು ಹೇಳಲಾಗುತ್ತದೆ.

‘ಮಿಸ್ಟರ್ ಬ್ಯಾಲೆಟ್ ಬಾಕ್ಸ್’  ನ್ನು ವಿಮಾನದ ಮುಂದಿನ ಸಾಲಿನಲ್ಲಿ ಆಯಾ ರಾಜ್ಯಗಳ ಸಹಾಯಕ ಚುನಾವಣಾಧಿಕಾರಿಗಳ (ಎಆರ್‌ಒ) ನಿಗಾದಲ್ಲಿ ಇರಿಸಲಾಗಿತ್ತು. ಚುನಾವಣಾ ಆಯೋಗವು ಸೋಮವಾರ ಎಆರ್‌ಒಗಳೊಂದಿಗೆ ವಿಮಾನದಲ್ಲಿ ಮೊಹರು ಮಾಡಿದ ಮತಪೆಟ್ಟಿಗೆಗಳ ಫೋಟೊ ಪೋಸ್ಟ್ ಮಾಡಿತ್ತು. ಚುನಾವಣಾ ಆಯೋಗದ ಪ್ರಕಾರ, ಪ್ರತಿ ಮತಪೆಟ್ಟಿಗೆಗೆ ‘ಮಿಸ್ಟರ್ ಬ್ಯಾಲೆಟ್ ಬಾಕ್ಸ್’ ಎಂಬ ಹೆಸರಿನಲ್ಲಿ ಇ-ಟಿಕೆಟ್ ನೀಡಲಾಗಿದೆ.

ನಾಮನಿರ್ದೇಶಿತ ಸಂಸದರನ್ನು ಹೊರತುಪಡಿಸಿ ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸಂಸದರು ಮತ್ತು ಎಲ್ಲಾ ರಾಜ್ಯಗಳಲ್ಲಿನ ಶಾಸಕಾಂಗ ಸಭೆಯಲ್ಲಿರುವ ಎಲ್ಲಾ ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಬಹುದು.

776 ಸಂಸದರು ಮತ್ತು 4,033 ಚುನಾಯಿತ ಶಾಸಕರನ್ನು ಒಳಗೊಂಡಂತೆ ಒಟ್ಟು 4,809 ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ, ಆದರೆ ನಾಮನಿರ್ದೇಶಿತ ಸಂಸದರು ಮತ್ತು ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಮತ ಹಾಕುವಂತಿಲ್ಲ.ಚುನಾವಣಾ ಆಯೋಗದ ಪ್ರಕಾರ, ಸೋಮವಾರ ನಡೆದ ಮತದಾನದಲ್ಲಿ ಒಟ್ಟು ಮತದಾರರಲ್ಲಿ ಶೇ 99 ಹೆಚ್ಚು ಮತ ನಾಯಕರು ಚಲಾಯಿಸಿದ್ದಾರೆ.