ಸೋನಿಯಾ ಗಾಂಧಿ ತಪ್ಪು ಮಾಡಿಲ್ಲಾಂದ್ರೆ ಭಯ ಯಾಕೆ? ಈ ಪ್ರತಿಭಟನೆ ಏನಕ್ಕೆ?: ಡಿಕೆಶಿ, ಸಿದ್ದುಗೆ ಎನ್.ರವಿಕುಮಾರ್ ಪ್ರಶ್ನೆ

ಸೋನಿಯಾಗಾಂಧಿ ಇರಲಿ, ರಾಹುಲ್ ಗಾಂಧಿ ಇರಲಿ, ಕೋರ್ಟ್ ವಿಚಾರಣೆಗೆ ಹಾಜರಾಗಲು ಹೇಳಿದ ಮೇಲೆ ಹೋಗಬೇಕು. ಯಾರೂ ಸಂವಿಧಾನಕ್ಕಿಂತ, ಕೋರ್ಟ್​ಗಿಂತ ದೊಡ್ಡವರಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.

ಸೋನಿಯಾ ಗಾಂಧಿ ತಪ್ಪು ಮಾಡಿಲ್ಲಾಂದ್ರೆ ಭಯ ಯಾಕೆ? ಈ ಪ್ರತಿಭಟನೆ ಏನಕ್ಕೆ?: ಡಿಕೆಶಿ, ಸಿದ್ದುಗೆ ಎನ್.ರವಿಕುಮಾರ್ ಪ್ರಶ್ನೆ
ಎನ್.ರವಿಕುಮಾರ್ ಮತ್ತು ಸಿದ್ದರಾಮಯ್ಯ
Follow us
TV9 Web
| Updated By: Rakesh Nayak Manchi

Updated on: Jul 21, 2022 | 1:26 PM

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi)ಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೈ ಕಾರ್ಯಕರ್ತರ ಪ್ರತಿಭಟನೆಯನ್ನು ಟೀಕಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ (N.Ravikumar), ಸೋನಿಯಾ ಗಾಂಧಿ ಸುಪ್ರೀಂ ಕೋರ್ಟ್, ಸಂವಿಧಾನಕ್ಕಿಂತ ದೊಡ್ಡವರಾ? ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕೂಡ ಕೋರ್ಟ್ ಮುಂದೆ ಹಾಜರಾಗಿದ್ದರು. ಕೋರ್ಟ್ ವಿಚಾರಣೆಗೆ ಹಾಜರಾಗಲು ಹೇಳಿದ ಮೇಲೆ ಹೋಗಬೇಕು. ಸೋನಿಯಾ ಗಾಂಧಿ ಸುಪ್ರೀಂ ಕೋರ್ಟ್ ಮತ್ತು ಸಂವಿಧಾನಕ್ಕಿಂತ ದೊಡ್ಡವರಾ?  ಅವರು ತಪ್ಪು ಮಾಡಿಲ್ಲ ಎಂದರೆ ಭಯ ಏಕೆ? ಈ ಪ್ರತಿಭಟನೆಯನ್ನು ಯಾಕೆ ಮಾಡಬೇಕು? ಇದಕ್ಕೆ ಕಾಂಗ್ರೆಸ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಉತ್ತರ ನೀಡಬೇಕು ಎಂದರು.

ಸೋನಿಯಾಗಾಂಧಿ ಇರಲಿ, ರಾಹುಲ್ ಗಾಂಧಿ ಇರಲಿ, ಕೋರ್ಟ್ ವಿಚಾರಣೆಗೆ ಹಾಜರಾಗಲು ಹೇಳಿದ ಮೇಲೆ ಹೋಗಬೇಕು. ಯಾರೂ ಸಂವಿಧಾನಕ್ಕಿಂತ, ಕೋರ್ಟ್​ಗಿಂತ ದೊಡ್ಡವರಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಾಮಾಣಿಕರೇ ಆಗಿದ್ದರೆ ವಿಚಾರಣೆಗೆ ಹಾಜರಾಗಲಿ. ಇಷ್ಟಕ್ಕಾಗಿ ಕಾಂಗ್ರೆಸ್​ನವರು ಯಾಕೆ ಪ್ರತಿಭಟನೆ ಮಾಡಬೇಕು? ಇವರ ಪ್ರತಿಭಟನೆ ಯಾರ ವಿರುದ್ಧ? ಕೋರ್ಟ್ ವಿರುದ್ಧನಾ? ತನಿಖೆಯಲ್ಲಿ ಇಡಿ ವಿಚಾರಣೆಯನ್ನೇ ಮಾಡಬಾರದಾ? ಎಂದು ಪ್ರಶ್ನೆಗಳನ್ನು ಹಾಕಿದರು.

ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಜಾತಿ ಕಾರ್ಡ್ ಪ್ಲೇ ಮಾಡ್ತಿದ್ದಾರೆ

ಡಿ.ಕೆ. ಶಿವಕುಮಾರ್​ ಅವರಿಂದ ಒಕ್ಕಲಿಗ ಕಾರ್ಡ್ ಬಳಕೆಗೆ ಬಿಜೆಪಿ ಒಕ್ಕಲಿಗ ನಾಯಕರು ಮೌನ ವಿಚಾರವಹಿಸಿದ ಸಂಬಂಧ ಪ್ರತಿಕ್ರಿಯಿಸಿದ ರವಿಕುಮಾರ್, ನಮಗೆ ಜಾತಿ ರಾಜಕಾರಣದಲ್ಲಿ ನಂಬಿಕೆ ಇಲ್ಲ, ನಮಗೆ ಸಿದ್ಧಾಂತ ರಾಜಕಾರಣದ ಮೇಲೆ ನಂಬಿಕೆ ಇದೆ. ಇಡೀ ರಾಜ್ಯದ ಎಲ್ಲ ಸಮಯದಾಯಗಳ ಮೇಲೆ ನಮಗೆ ನಂಬಿಕೆ ಇದೆ. ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಅವರು ಜಾತಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂದರು.

ನಾವೇ ಒಕ್ಕಲಿಗ ನಾಯಕರು ಆಗಬೇಕು ಎಂದು ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಮಧ್ಯೆ ಫೈಟ್ ನಡೆಯುತ್ತಿದೆ. ಇವರಿಬ್ಬರೂ ಹಿಂದೆ ಭಾಯಿ ಭಾಯಿ ಆಗಿದ್ದರು, ಆದರೆ ಈಗ ಇಲ್ಲ. ಸ್ವಲ್ಪ ಹಾಸನ, ಮಂಡ್ಯದಲ್ಲಿ ಅವರಲ್ಲಿ ಒಕ್ಕಲಿಗರು ಜಾಸ್ತಿ‌ ಇರಬಹುದು. ಅವರಿಗಿಂತಲೂ ನಮ್ಮಲ್ಲೇ ಒಕ್ಕಲಿಗ ನಾಯಕರು ಜಾಸ್ತಿ ಇದ್ದಾರೆ. ಆದರೆ ನಮ್ಮವರು ಅವರಂತೆ ಹೊಡೆದಾಡುವುದಿಲ್ಲ. ಜಾತಿ ರಾಜಕಾರಣಕ್ಕೆ ಹೊಡೆದಾಡುವ ಸಂಸ್ಕೃತಿ ನಮ್ಮದಲ್ಲ. ಜಾತಿ ರಾಜಕಾರಣಕ್ಕೆ ಹೊಡೆದಾಡುವುದು ಕಾಂಗ್ರೆಸ್, ಜೆಡಿಎಸ್ ಸಂಸ್ಕೃತಿ ಎಂದರು.

ಒಕ್ಕಲಿಗರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಆ ರೀತಿ ನಮ್ಮಲ್ಲಿ ಯಾವುದೇ ಬೆಳವಣಿಗೆ ನಡೆದಿಲ್ಲ. ಆ ತರಹ ಏನಾದರೂ ಇದ್ದರೆ ನಮ್ಮ ವರಿಷ್ಠರು ಯೋಚನೆ ಮಾಡುತ್ತಾರೆ‌ ಎಂದು ಹೇಳಿದರು.