ಬೆಂಗಳೂರು, ಡಿಸೆಂಬರ್ 15: ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯುವುದಕ್ಕಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಫ್ಯಾಕ್ಟ್ಚೆಕ್ ಘಟಕಗಳ ಸ್ಥಾಪನೆಗೆ ಮುಂದಾಗಿರುವುದನ್ನು ಐಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಮರ್ಥಿಸಿದರು. ‘ಟಿವಿ9’ ವಾಹಿನಿಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಳ್ಳುಸುದ್ದಿ, ತಿರುಚಿದ ಸುದ್ದಿಗಳ ಮೂಲಕ ಜನರ ಹಾದಿ ತಪ್ಪಿಸುವುದನ್ನು ಮಾಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆಯೇ ಹೊರತು ಬಿಜೆಪಿಗೆ ವಿರುದ್ಧವಾಗಿ ಅಲ್ಲ. ಅವರು ತಪ್ಪು ಮಾಡದಿದ್ದರೆ ಅವರಿಗೆ ಭಯವೇಕೆ ಎಂದು ಪ್ರಶ್ನಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಐಟಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ಸುಳ್ಳು ಸುದ್ದಿ ವಿರುದ್ಧ ಕ್ರಮಕ್ಕೆ ಈ ಹಿಂದೆಯೇ ಮುಂದಾಗಿದ್ದಾರೆ. ಅವರು ಮಾಡಿದರೆ ಮಾಸ್ಟರ್ ಸ್ಟ್ರೋಕ್, ನಾವು ಮಾಡಿದರೆ ಸಂವಿಧಾನ ವಿರೋಧಿ ಹೇಗಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ತಂದೆಯ ಹೆಸರು ನೆರವಾಗಿಲ್ಲ ಎನ್ನಲಾರೆ. ಆದರೆ, ಸ್ವ ಸಾಮರ್ಥ್ಯದಿಂದಲೇ ಈ ಹಂತದ ವರೆಗೆ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು. ನನ್ನ ಹೆಸರಿನ ಜತೆ ಇರುವ ಖರ್ಗೆ ಎಂಬ ಸರ್ನೇಮ್ ಸಹಾಯ ಮಾಡಿದೆ ನಿಜ. ರಾಜಕೀಯವೆಂದಲ್ಲ, ಎಲ್ಲಾ ಕ್ಷೇತ್ರಗಳಲ್ಲಿಯೂ ಇದು ಸಹಜ. ಆದರೆ, ತಂದೆ ಹೆಸರಿನಿಂದ ಒಂದು ಬಾರಿ ಗೆಲ್ಲಬಹುದು. ಸತತವಾಗಿ ಮತ್ತೆ ಮತ್ತೆ ಗೆಲ್ಲುವುದು ಸಾಧ್ಯವಾಗದು ಎಂದು ಅವರು ಹೇಳಿದರು.
ಸುವರ್ಣ ಸೌಧದಿಂದ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಫೋಟೋ ತೆಗೆಯುವ ವಿಚಾರವನ್ನೂ ಪ್ರಿಯಾಂಕ್ ಖರ್ಗೆ ಪ್ರಸ್ತಾಪ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭ ನೂರಾರು ಮಂದಿ ಅಂಡಮಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು. ಅದರಲ್ಲಿ ಸಾವರ್ಕರ್ ಕೂಡ ಒಬ್ಬರು. ಆದರೆ, ಅಲ್ಲಿ ಶಿಕ್ಷೆ ಅನುಭವಿಸಿದವರ ಪೈಕಿ ಕ್ಷಮಾಪಣಾ ಪತ್ರ ಬರೆದವರು ಕೇವಲ ಮೂವರು. ಅದರಲ್ಲಿ ಸಾವರ್ಕರ್ ಒಬ್ಬರು ಮತ್ತು ಸುದೀರ್ಘ ಕ್ಷಮಾಪಣೆ ಕೋರಿದ್ದರು. ಸಾವರ್ಕರ್ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ದೇಶಭಕ್ತನೂ ಅಲ್ಲ. ಗಾಂಧಿಯನ್ನು ಕೊಂದ ಗೂಡ್ಸೆ ಮತ್ತು ಸಾವರ್ಕರ್ ಇಬ್ಬರು ಒಂದೇ ರೀತಿಯ ಮನಸ್ಥಿತಿಯವರು. ಗಾಂಧಿ ಹತ್ಯೆಯ ಆರೋಪಿ ಕೂಡ ಸಾವರ್ಕರ್ ಆಗಿದ್ದರು. ಇಂಥವರ ಫೋಟೋವನ್ನು ಯಾಕೆ ಸದನದಲ್ಲಿ ಹಾಕಬೇಕು ಇದರ ಬರಲು ಮಾಜಿ ಪ್ರಧಾನಿ ನೆಹರು ಫೋಟೋ ಹಾಕಬೇಕು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ನಾವು ತೆರವುಗೊಳಿಸುವ ಕೆಲಸ ಮಾಡುವುದಿಲ್ಲ, ಜೋಡಿಸುವ ಕೆಲಸ ಮಾಡುತ್ತೇವೆ ಎಂಬ ಸ್ಪೀಕರ್ ಯುಟಿ ಖಾದರ್ ಹೇಳಿಕೆ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಪ್ರಶ್ನೆ ಕೇಳಲಾಯಿತು. ಅದಕ್ಕುತ್ತರಿಸಿದ ಅವರು, ಇದು (ಸಾವರ್ಕರ್ ಫೋಟೊ ತೆಗೆಯುವುದು) ನನ್ನ ವೈಯಕ್ತಿಕ ಅಭಿಪ್ರಾಯ, ಸರ್ಕಾರದ್ದಲ್ಲ. ನನಗೆ ಬಿಟ್ಟಿದ್ರೆ ಸಾವರ್ಕರ್ ಫೋಟೋ ತೆಗೆಯತ್ತಿದ್ದೆ. ಸ್ಪೀಕರ್ ಅವರ ಅಭಿಪ್ರಾಯ ಹೇಳಿದ್ದಾರೆ. ಅದೇ ರೀತಿ ನನ್ನ ನಿಲುವು ನಾನು ಹೇಳಿದ್ದೇನೆ ಎಂದರು.
ಇದನ್ನೂ ಓದಿ: ಸಂಸತ್ ಭದ್ರತೆ ಉಲ್ಲಂಘನೆ: ಆರೋಪಿ ಸಾಗರ್ ಶರ್ಮಾ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ?
ಇನ್ನು, ಲೋಕಸಭೆ ಭದ್ರತಾ ಲೋಪದ ವಿಚಾರವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, ಆ ವಿಚಾರವಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಯಾಕೆ ಈವರೆಗೆ ಹೇಳಿಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ. ಪಾಸ್ ಕೊಡಿಸಿದ ವಿಚಾರವಾಗಿಯಾಗಲೀ ತನಿಖೆ ವಿಚಾರವಾಗಿಯಾಗಲೀ ಅವರು ಹೇಳಿಕೆ ಕೊಡಬಹುದಿತ್ತಲ್ಲವೇ? ಪಾಸ್ ಕೊಡಿಸಿದ್ದು ನಿಜ, ತನಿಖೆಗೆ ಸಹಕಾರ ನೀಡುವೆ ಎಂಬುದನ್ನು ಬಹಿರಂಗವಾಗಿ ಹೇಳಬಹುದಲ್ಲವೇ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರ, ಸಿಎಂ ಬದಲಾವಣೆ ಇತ್ಯಾದಿ ಚರ್ಚೆಗಳೆಲ್ಲ ಮಾಧ್ಯಮ ಸೃಷ್ಟಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ತಾವು ಸಿಎಂ ಹುದ್ದೆ ಆಕಾಂಕ್ಷಿ ಎಂದು ಹೇಳಿಲ್ಲ. ಹೈಕಮಾಂಡ್ ಹೇಳಿದರೆ ಆಗಲು ಸಿದ್ಧ ಎಂದಷ್ಟೇ ಹೇಳಿದ್ದೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Fri, 15 December 23