ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸರ್ಕಾರದ ವಿರುದ್ಧ ಬಿಜೆಪಿ ಧರಣಿ; ಕೇಂದ್ರ ತಂಡ ಬೆಳಗಾವಿಗೆ ಭೇಟಿ
ಕೆಲ ದಿನಗಳ ಹಿಂದೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅವರ ಮೇಲೆ ಹಲ್ಲೆ ನಡೆಸಿ, ಬೆತ್ತಲೆಯಾಗಿ ಮೆರವಣಿಗೆ ನಡೆಸಲಾಗಿತ್ತು. ಈ ಪ್ರಕರಣವನ್ನು ಸದನದಲ್ಲಿ ಚರ್ಚಿಸುವಂತೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಸೂಚನೆ ಬೆನ್ನಲ್ಲೇ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸುದ್ದಿಗೋಷ್ಠಿ ನಡೆಸಿ ಹೇಳಿದ್ದಿಷ್ಟು..
ಬೆಳಗಾವಿ, ಡಿಸೆಂಬರ್ 15: ಬೆಳಗಾವಿ (Belagavi) ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿತ್ತು. ಈ ವಿಚಾರವನ್ನು ಸದನಲ್ಲಿ ಚರ್ಚಿಸುವಂತೆ ಬಿಜೆಪಿ (BJP) ಹೈಕಮಾಂಡ್ ನಾಯಕರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರಿಗೆ ಸೂಚನೆ ನೀಡಿದ್ದಾರೆ. ಸೂಚನೆ ಕೊಟ್ಟ ಬೆನ್ನಲ್ಲೇ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕಳೆದ ವಾರ ಬೆಳಗಾವಿ ಗ್ರಾಮಾಂತರದ ವಂಟಮೂರಿಯಲ್ಲಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಈ ವಿಚಾರವಾಗಿ ಇಂದು (ಡಿ.15) ಅಧಿವೇಶನ ಮುಗಿದ ನಂತರ ಬೆಳಗಾವಿ ಚೆನ್ನಮ್ಮ ಸರ್ಕಲ್ನಲ್ಲಿ ಮಧ್ಯಾಹ್ನ 3.30 ಕ್ಕೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ನಾಳೆ ಕೇಂದ್ರದಿಂದ ಒಂದು ತಂಡ ಬೆಳಗಾವಿಗೆ ಭೇಟಿ ನೀಡಲಿದೆ. ಐದು ಜನ ಸಂಸದರು (ಅಪರಾಜಿತ್ ಸಾರಂಗಿ, ಸುನೀತಾ ದುಗ್ಗಲ್, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ, ಆಶಾ ಲಾಕಡಾ) ಅವರು ಸಂತ್ರಸ್ತೆ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಲಿದ್ದಾರೆ. ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲೇ ಘಟನೆ ನಡೆದಿದ್ದು ಖಂಡನೀಯ ಎಂದು ಹೇಳಿದರು.
ನಾನು (ಬಿ ವೈ ವಿಜಯೇಂದ್ರ) ಕೂಡ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವನ ಹೇಳಿ ಬಂದಿದ್ದೇನೆ. ಗೃಹ ಸಚಿವ ಡಾ.ಪರಮೇಶ್ವರ್ ಭೇಟಿ ನೀಡಿದ್ದಾರೆ, ಸ್ವಾಗತಿಸುತ್ತೇವೆ. ಮಹಿಳೆ ಬೆತ್ತಲೆಗೊಳಿಸಿದ ಘಟನೆ ರಾಜ್ಯದ ಜನ ತಲೆ ತಗ್ಗಿಸುವಂಥದ್ದು. ರಾಜ್ಯ ಸರ್ಕಾರ ಪ್ರಕರಣ ಲಘುವಾಗಿ ಪರಿಗಣಿಸಿದೆ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಸಂತ್ರಸ್ತೆಯ ಫೋಟೊ, ಸಂದರ್ಶನ ಪ್ರಸಾರ ಮಾಡದಂತೆ ಹೈಕೋರ್ಟ್ ನಿರ್ದೇಶನ
ಗುರುವಾರ ಹೈಕೋರ್ಟ್ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದೆ. ಅಂತಹ ಘಟನೆ ನಡೆಯಲು ಯಾಕೆ ಸರ್ಕಾರ ಅವಕಾಶ ಕೊಟ್ಟಿತು. ಪೊಲೀಸ್ ಗಸ್ತು ಯಾಕೆ ಇರಲಿಲ್ಲ. ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಅಂತಾ ನ್ಯಾಯಾಲಯ ಪ್ರಶ್ನೆ ಮಾಡಿದೆ. ಮಹಾಭಾರತದಲ್ಲಿ ದ್ರೌಪದಿಯ ರಕ್ಷಣೆಗೆ ಶ್ರೀಕೃಷ್ಣ ಇದ್ದನು. ಮಹಿಳೆ ಸಹಾಯಕ್ಕೆ ಸರ್ಕಾರ ಯಾಕೆ ಇರಲಿಲ್ಲ? ಅಂತ ಹೈಕೋರ್ಟ್ ಪ್ರಶ್ನೆ ಮಾಡಿದೆ ಎಂದು ತಿಳಿಸಿದರು.
ಹೈಕಮಾಂಡ್ ಹೇಳಿದ ಮೇಲೆ ನಾವು ಪ್ರತಿಭಟನೆ ಮಾಡುತ್ತಿಲ್ಲ. ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಕೂಡ ಚರ್ಚೆ ಮಾಡಿದ್ದಾರೆ. ಈ ಸರ್ಕಾರ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಪೊಲೀಸರ ಬಗ್ಗೆ ಯಾರಿಗೂ ಭಯ ಇಲ್ಲ. ಸರ್ಕಾರ ಇನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಜವಾಬ್ದಾರಿಯುತ ಸಚಿವರು ಇರುವಂಥ ಕ್ಷೇತ್ರದಲ್ಲಿ ಘಟನೆ ನಡೆದಿದೆ. ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುತ್ತಿಲ್ಲ. ಆ ಸಾಮಾನ್ಯ ಪ್ರಜ್ಞೆ ಪ್ರತಿಯೊಬ್ಬರಿಗೂ ಇದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Fri, 15 December 23