ಬೆಂಗಳೂರು, ಫೆಬ್ರವರಿ 26: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ (Congress, BJP, JDS) ಈ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಅಖಾಡವಾಗಿರುವ, ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ (Rajya Sabha Election) ಚುನಾವಣೆ ಮಂಗಳವಾರ ನಡೆಯಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಮತದಾನ ಆರಂಭವಾಗಲಿದ್ದು, ಸಂಜೆ 4 ಗಂಟೆಯವರೆಗೂ ಹಕ್ಕು ಚಲಾವಣೆಗೆ ಅವಕಾಶವಿರಲಿದೆ. ಸಂಜೆ 4 ಗಂಟೆಯಿಂದ 5ಗಂಟೆಯವರೆಗೆ ಮತಗಳ ಎಣಿಕೆ ನಡೆಯಲಿದೆ.
ರಾಜ್ಯಸಭೆ ಕಣ ರಂಗೇರಲು ಕಾರಣ 5ನೇ ಅಭ್ಯರ್ಥಿ ಸ್ಪರ್ಧೆಯಲ್ಲಿರುವುದು. ಇದು ಸಹಜವಾಗಿಯೇ ಆಡಳಿತಾರೂಢ ಕಾಂಗ್ರೆಸ್‌ಗೆ ಕುದುರೆ ವ್ಯಾಪಾರದ ಭೀತಿ ತಂದಿಟ್ಟಿದೆ. ಹೀಗಾಗಿ ಸಂಖ್ಯಾಬಲದಲ್ಲಿ ಯಾವುದೇ ಕಡಿಮೆಯಾಗದಂತೆ ಶಾಸಕರನ್ನು ಹಿಡಿಟ್ಟುಕೊಳ್ಳಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ.
ಕಾಂಗ್ರೆಸ್ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಒಂದು ಮತ ಕಳೆದುಕೊಂಡಂತಾಗಿದೆ. ಈ ಹಿನ್ನೆಲೆಯಲ್ಲಿ ಮೊದಲೇ ಅಡ್ಡಮತದಾನದ ಭೀತಿಯಲ್ಲಿದ್ದ ಕಾಂಗ್ರೆಸ್‌ಗೆ ಮತ್ತೊಂದು ಆಘಾತವಾಗಿದೆ.
ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್‌ನ ಎಲ್ಲ 135 ಶಾಸಕರ ಮತದಿಂದ 3 ಸ್ಥಾನ ಗೆಲ್ಲಬಹುದಿತ್ತು. ಶಾಸಕ ರಾಜವೆಂಕಟಪ್ಪ ನಾಯಕ ನಿಧನದಿಂದ ಒಂದು ಮತ ಕೊರತೆ ಎದುರಾಗಿದೆ. ಹೀಗಾಗಿ 3ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು ಶುರುಮಾಡಿದೆ. ಲತಾ ಮಲ್ಲಿಕಾರ್ಜುನ್, ದರ್ಶನ್ ಪುಟ್ಟಣ್ಣಯ್ಯ ಸೆಳೆಯಲು ‘ಕೈ’ ತಂತ್ರ ಹೂಡುತ್ತಿದೆ.
ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೂ ಮಾನ್ಯತಾ ಟೆರ್ಕ್‌ಪಾರ್ಕ್‌ನಲ್ಲಿರೋ ಹಿಲ್ಟನ್ ಹೋಟೆಲ್‌ಗೆ ಇಂದೇ ಬಂದು ವಾಸ್ತವ್ಯ ಹೂಡುವಂತೆ ಸೂಚಿಸಿದೆ. ಮಧ್ಯಾಹ್ನ 3 ಗಂಟೆಗೆ ಹೋಟೆಲ್‌ನಲ್ಲೇ ಶಾಸಕಾಂಗ ಸಭೆ ನಡೆಯಲಿದ್ದು ಈ ವೇಳೆ ಎಲ್ಲಾ ಶಾಸಕರು ಹಾಜರಿರಬೇಕೆಂದು ಸೂಚನೆ ನೀಡಲಾಗಿದೆ. ನಾಳೆ ಬೆಳಗ್ಗೆ ಹೋಟೆಲ್‌ನಿಂದ ಸೀದಾ ವಿಧಾನಸೌಧಕ್ಕೆ ತೆರಳಿ ಮತದಾನ ಮಾಡಲು ಸೂಚಿಸಲಾಗಿದೆ.
5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿಗೆ ಜೆಡಿಎಸ್, ಬಿಜೆಪಿ ರಣತಂತ್ರ ಹೆಣೆದಿವೆ. ಬಿಜೆಪಿ ಸದ್ಯಕ್ಕೆ ತನ್ನ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡುತ್ತಿಲ್ಲ. ಬದಲಾಗಿ ನಾಳೆ ಬೆಳಗ್ಗೆ 8ಗಂಟೆಗೆ ವಿಧಾನಸೌಧಕ್ಕೆ ಬರಲು ಸೂಚಿಸಲಾಗಿದೆ. ಅಲ್ಲೇ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿಗೆ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕೈಗೊಡುವ ಭೀತಿಯಿದೆ. ಜೆಡಿಎಸ್‌ಗೆ ಶಾಸಕ ಶರಣಗೌಡ ಕುಂದಕೂರ, ದೇವದುರ್ಗ ಶಾಸಕಿ ಕರೆಮ್ಮ ಕೈಗೊಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಬೆಂಬಲಿಗರ ಸಭೆ: ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದಿಷ್ಟು
ಈ ಮಧ್ಯೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಅಡ್ಡಮತದಾನ ಭೀತಿಯಿಂದ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡ್ತಿದೆ ಎಂದಿದ್ದಾರೆ. ಆದ್ರೆ ಸಚಿವ ಎಂ.ಬಿ.ಪಾಟೀಲ್ ಮಾತ್ರ ಅಡ್ಡಮತದಾನ ಮಾಡಲು ತಾಕತ್ತು ಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ರಾಜ್ಯಸಭೆ ಚುನಾವಣೆ ಕೌತುಕದ ಘಟ್ಟಕ್ಕೆ ತಲುಪಿದೆ. ಯಾರು ಅಡ್ಡಮತದಾನ ಮಾಡಲಿದ್ದಾರೆ? ಮೂರು ಪಕ್ಷಗಳ ಲೆಕ್ಕಾಚಾರ ಏನಾಗಲಿದೆ ಎಂಬುದು ನಾಳೆ ತಿಳಿಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:03 am, Mon, 26 February 24