ರಾಜ್ಯಸಭೆ ಚುನಾವಣೆ: ಮೂರು ಸ್ಥಾನ ಗೆದ್ದ ಬಿಜೆಪಿ, ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ
ಪ್ರಧಾನಿಯ ಕರೆಯನ್ನು ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಲು ಬೊಮ್ಮಾಯಿ ಮುಂದಾದರು. ಆದರೆ ಯಡಿಯೂರಪ್ಪ ಅವರು, ನೀವೇ ಮಾತನಾಡಿ ಎಂದು ಬೆನ್ನು ತಟ್ಟಿದರು.
ಬೆಂಗಳೂರು: ರಾಜ್ಯಸಭೆ ಚುನಾವಣೆಯ 3 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (CM Basavaraj Bommai) ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಭಿನಂದಿಸಿದರು. ಪ್ರಧಾನಿಯ ಕರೆಯನ್ನು ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಲು ಬೊಮ್ಮಾಯಿ ಮುಂದಾದರು. ಆದರೆ ಯಡಿಯೂರಪ್ಪ ಅವರು, ನೀವೇ ಮಾತನಾಡಿ ಎಂದು ಬೆನ್ನು ತಟ್ಟಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಧಾನಿ ಮೋದಿ, ಅಧ್ಯಕ್ಷರಾದ ಜೆ.ಪಿ.ನಡ್ಡಾ, ನಳಿನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ರಾಜ್ಯದ ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಧನ್ಯವಾದ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಸುಮಾರು 5 ನಿಮಿಷಗಳ ಕಾಲ ಮಾತನಾಡಿದರು. ಗೆಲುವಿಗಾಗಿ ಸಿಎಂಗೆ ಅವರು ಅಭಿನಂದನೆ ಸಲ್ಲಿಸಿದರು.
ಗೆಲುವಿನ ನಂತರ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸಿ.ಟಿ.ರವಿ, ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ತಂತ್ರಗಾರಿಕೆ ಯಶಸ್ವಿಯಾಗಿದೆ. ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ನಿರೀಕ್ಷೆಗಿಂತ ನಮಗೆ ಎರಡು ಮತಗಳು ಹೆಚ್ಚಾಗಿಯೆ ಸಿಕ್ಕಿವೆ. ಕಾಂಗ್ರೆಸ್, ಜೆಡಿಎಸ್‌ನ ಇಬ್ಬರು ನಮ್ಮ ಪರ ಮತ ಹಾಕಿದ್ದಾರೆ. ದೊಡ್ಡದೊಡ್ಡ ನಾಯಕರೇ ನಮಗೆ ಬೆಂಬಲ ನೀಡಿದ್ದಾರೆ. ಆ ದೊಡ್ಡ ನಾಯಕರು ಯಾರೆಂದು ನಾನು ಹೇಳುವುದಿಲ್ಲ. ದೇಶದ ಹಿತದೃಷ್ಟಿಯಿಂದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ನುಡಿದರು.
ಮತ್ತೋರ್ವ ಬಿಜೆಪಿ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿ, ಇದು ಬಿಜೆಪಿಗೆ ಸಿಕ್ಕ ದೊಡ್ಡ ಗೆಲುವು, ಭಾಗ್ಯದ ಗೆಲುವು. ಮೊದಲಿನಿಂದಲೂ ಜೆಡಿಎಸ್‌ನ 3ನೇ ಅಭ್ಯರ್ಥಿ ಗೆಲ್ಲಬಹುದು ಎಂಬ ಸುದ್ದಿ ಇತ್ತು. ಅದನ್ನು ಸುಳ್ಳುಮಾಡಿ ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಜಕೀಯ ಧ್ರುವೀಕರಣ ಆರಂಭವಾಗಿದ್ದು, ಇದು 2023ರ ಗೆಲುವಿಗೆ ಮುನ್ಸೂಚನೆಯಾಗಿದೆ ಎಂದರು.
ಬಿಜೆಪಿ ನಾಯಕ ಸಿ.ಟಿ.ರವಿ ಕಾಂಗ್ರೆಸ್ ಕಚೇರಿಗೆ ತೆರಳಿ ಧನ್ಯವಾದ ತಿಳಿಸಿದ್ದಾರೆ ಎಂಬ ಎಚ್ಡಿ ಕುಮಾರಸ್ವಾಮಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಯಾವತ್ತೂ ಅವರೊಂದಿಗೆ ಹೊಂದಿಕೊಳ್ಳುವುದಿಲ್ಲ. ಸಿ.ಟಿ.ರವಿ ಅಕಸ್ಮಾತ್ ಆಗಿ ಅಲ್ಲಿಗೆ ಹೋಗಿದ್ದಾರೆ ಅಷ್ಟೇ. ಕಾಂಗ್ರೆಸ್ನೊಂದಿಗೆ ಯಾವುದೇ ಹೊಂದಾಣಿಕೆ ಇಲ್ಲ ಎಂದರು.
ಜೆಡಿಎಸ್‌ನ ಗುಬ್ಬಿ ಶ್ರೀನಿವಾಸ್ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಹಾಕಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಜಿ.ಟಿ.ದೇವೇಗೌಡ ಸೇರಿದಂತೆ ಸಾಕಷ್ಟು ಜನರು ಮುನಿಸಿಕೊಂಡಿದ್ದರು. ಯಾರ್ಯಾರು ಹಾಕಿದ್ದಾರೆ ಅನ್ನೋದು ಗೊತ್ತಿಲ್ಲ ಎಂದರು. ಲಹೆರ್ ಸಿಂಗ್ಗೆ ಹೆಚ್ಚುವರಿಯಾಗಿ ಇಬ್ಬರು ಶಾಸಕರ ಎರಡನೇ ಪ್ರಾಶಸ್ತ್ಯದ ಮತಗಳು ಬಂದಿರುವ ಮಾಹಿತಿಯಿದೆ ಎಂದರು.
Published On - 9:58 pm, Fri, 10 June 22