ಡಿಕೆಶಿ-ಸಿದ್ದು ಕೈಲಾಗದ ಸಂಧಾನ ಸುರ್ಜೇವಾಲ ಸಮ್ಮುಖದಲ್ಲಿ ಸಕ್ಸಸ್ ಆಗಿದ್ದೇಗೆ?: ರಾಮಲಿಂಗಾರೆಡ್ಡಿ ಮನವೊಲಿಕೆಗೆ ನೀಡಿದ ಆಫರ್ ಏನು?

ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಗೊಂದಲಕ್ಕೆ ಸುರ್ಜೇವಾಲ ಮಧ್ಯಸ್ಥಿಕೆಯಿಂದ ತೆರೆ ಬಿದ್ದಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ರೆಡ್ಡಿ ಅವರಿಗೆ ಹೈಕಮಾಂಡ್ ಜಲಸಂಪನ್ಮೂಲ ಅಥವಾ ಸಣ್ಣ ನೀರಾವರಿ ಹೆಚ್ಚುವರಿ ಖಾತೆ ಭರವಸೆ ನೀಡಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಡಿಕೆಶಿ ಮನವೊಲಿಕೆ ವಿಫಲವಾದ ನಂತರ, ರಣದೀಪ್ ಸುರ್ಜೇವಾಲ ಅವರ ಸುದೀರ್ಘ ಮಾತುಕತೆ ಸಂಧಾನಕ್ಕೆ ಕಾರಣವಾಯಿತು.

ಡಿಕೆಶಿ-ಸಿದ್ದು ಕೈಲಾಗದ ಸಂಧಾನ ಸುರ್ಜೇವಾಲ ಸಮ್ಮುಖದಲ್ಲಿ ಸಕ್ಸಸ್ ಆಗಿದ್ದೇಗೆ?: ರಾಮಲಿಂಗಾರೆಡ್ಡಿ ಮನವೊಲಿಕೆಗೆ ನೀಡಿದ ಆಫರ್ ಏನು?
ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್

Updated on: Jun 06, 2026 | 5:52 PM

ಬೆಂಗಳೂರು, ಜೂ.6: ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆಯಾದರೂ, ಈ ಸಂಧಾನದ ಹಿಂದೆ ನಡೆದಿರುವ ಹೈಡ್ರಾಮಾ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಡೆಸಿದ ಸರಣಿ ಮನವೊಲಿಕೆ ಪ್ರಯತ್ನಗಳಿಗೆ ಕರಗದ ರಾಮಲಿಂಗಾರೆಡ್ಡಿ ಅವರನ್ನು ಶಾಂತಗೊಳಿಸಲು ಕೊನೆಗೂ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೇ ಅಖಾಡಕ್ಕೆ ಇಳಿಯಬೇಕಾಯಿತು.

ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಸಮಾಧಾನಪಡಿಸಲು ನಿನ್ನೆ ತಡರಾತ್ರಿಯವರೆಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಆದರೆ, ಇಂದು ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಮಲಿಂಗಾರೆಡ್ಡಿ ಅವರೊಂದಿಗೆ ಸತತ ಒಂದೂವರೆ ಗಂಟೆಗೂ ಅಧಿಕ ಕಾಲ ನಡೆಸಿದ ಸುದೀರ್ಘ ಗುಪ್ತ ಮಾತುಕತೆಯ ಬಳಿಕ ಬಿಕ್ಕಟ್ಟು ಶಮನವಾಗಿದೆ. ಹೈಕಮಾಂಡ್ ಸದ್ಯದ ಖಾತೆಯ ಜೊತೆಗೆ ಜಲಸಂಪನ್ಮೂಲ ಅಥವಾ ಸಣ್ಣ ನೀರಾವರಿ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯ ಭರವಸೆ ನೀಡಿದೆ ಎನ್ನಲಾಗಿದೆ. ಆದರೆ ಸುದ್ದಿಗೋಷ್ಠಿಯಲ್ಲಿ ಸುರ್ಜೇವಾಲ ಅವರು ಕೇವಲ ರಾಜೀನಾಮೆ ವಾಪಸಾತಿ ಬಗ್ಗೆ ಮಾತ್ರ ತಿಳಿಸಿದ್ದಾರೆ, ಖಾತೆ ಬದಲಾವಣೆಯ ಗೊಂದಲಗಳಿಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದೇ ವೇಳೆ ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ಅವರ ಟೀಕೆಗಳಿಗೆ ತಿರುಗೇಟು ನೀಡಿದ ಅವರು, “ನಮ್ಮ ಪಕ್ಷದ ಆಂತರಿಕ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಸಾಕಷ್ಟು ಗೊಂದಲ ನಿರ್ಮಾಣ ಮಾಡಲು ಯತ್ನಿಸಿತು ಮತ್ತು ದೊಡ್ಡ ಬಂಡಾಯ ಆಯಿತು ಎಂದು ಸಂಭ್ರಮ ಪಟ್ಟಿತು. ಆದರೆ ಸದ್ಯಕ್ಕೆ ಅವರ ಸಂಭ್ರಮ ಮುಗಿದಿದೆ” ಎಂದು ಲೇವಡಿ ಮಾಡಿದರು.

ಸರ್ಕಾರದ ಸಾಧನೆಯನ್ನು ಮುಂದಿಟ್ಟ ಸುರ್ಜೇವಾಲ, “ನಾವು ಕನ್ನಡಿಗರಿಗಾಗಿ ಕೊಟ್ಟ ಮಾತಿನಂತೆ ಐದು ಗ್ಯಾರೆಂಟಿಗಳನ್ನು ಯಶಸ್ವಿಯಾಗಿ ನೀಡಿದ್ದೇವೆ. ಗೃಹಲಕ್ಷ್ಮಿ, ಗೃಹಜ್ಯೋತಿ, 10 ಕೆ.ಜಿಯ ಅನ್ನಭಾಗ್ಯ, ಯುವನಿಧಿ ಹಾಗೂ ವಿದ್ಯಾರ್ಥಿ-ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ನಿರಂತರವಾಗಿ ತಲುಪುತ್ತಿದೆ. ನಮ್ಮ ಗಮನ ಜನರ ಕಲ್ಯಾಣದ ಮೇಲಿದೆಯೇ ಹೊರತು ವಿಪಕ್ಷಗಳ ಟೀಕೆಗಳ ಮೇಲಲ್ಲ” ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೇವಲ ರಾಜೀನಾಮೆ ಗೊಂದಲಕ್ಕೆ ಸ್ಪಷ್ಟೀಕರಣ ನೀಡಿದ ಸುರ್ಜೇವಾಲ, ಮಾಧ್ಯಮಗಳ ಬೇರೆ ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸದೆ ಅಲ್ಲಿಂದ ನಿರ್ಗಮಿಸಿದರು.

ಇದನ್ನೂ ಓದಿ: ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾರೆಡ್ಡಿ: ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದ ಸುರ್ಜೇವಾಲ

ಇತ್ತ ಕೋಲಾರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಸಚಿವ ರಾಮಲಿಂಗಾರೆಡ್ಡಿ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಇಲ್ಲಿಯವರೆಗೆ ಇದ್ದ ಸಚಿವರ ಪೈಕಿ ರಾಮಲಿಂಗಾರೆಡ್ಡಿ ಅವರೇ ಬೆಸ್ಟ್ ಮಿನಿಸ್ಟರ್. ಅವರಿಗೆ ಯಾವುದೇ ಗನ್‌ಮ್ಯಾನ್ ಇಲ್ಲ, ಪಿಎ ಹಮ್ಮುಬಿಮ್ಮು ಇಲ್ಲ. ಯಾರು ಫೋನ್ ಮಾಡಿದರೂ 100% ತಾವೇ ರಿಸೀವ್ ಮಾಡುತ್ತಾರೆ, ಒಂದು ವೇಳೆ ಬ್ಯುಸಿ ಇದ್ದರೆ ಕಡ್ಡಾಯವಾಗಿ ಕಾಲ್‌ಬ್ಯಾಕ್ ಮಾಡುತ್ತಾರೆ. ಅವರು ಅತ್ಯಂತ ಬುದ್ಧಿವಂತರು. ಆದರೆ ಮಂತ್ರಿಯಾದವರಿಗೆ ಕೆಲಸ ಮಾಡಲು ಯಾವ ಖಾತೆ ಆದರೇನು? ಇಂತಹುದೇ ಖಾತೆ ಬೇಕು ಎಂದು ಪಟ್ಟು ಹಿಡಿಯುವುದು ತಪ್ಪು ಎಂದು ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:29 pm, Sat, 6 June 26

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us