ಬೆಂಗಳೂರು, ಜನವರಿ 01: ಈಶ್ವರಪ್ಪ ಪ್ರಕರಣದಲ್ಲಿ ಡೆತ್ ನೋಟ್ನಲ್ಲಿ ಅವರ ಹೆಸರು ಇತ್ತು. ಸಚಿನ್ ಆತ್ಮಹತ್ಯೆ ಕೇಸ್ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಎಲ್ಲೂ ಇಲ್ಲ. ಯಾವುದೇ ಸಾಕ್ಷಿ ಇಲ್ಲ. ಹಾಗಾಗಿ ರಾಜೀನಾಮೆ ಯಾಕೆ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಗುಡುಗಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯ ವಿಚಾರವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ದಾಖಲೆ ಇಟ್ಟುಕೊಂಡು ಹೋರಾಟ ಮಾಡಬೇಕಲ್ವಾ? ಡೆತ್ನೋಟ್ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಇದೆಯಾ? ಡೆತ್ನೋಟ್ನಲ್ಲಿ ಅವರ ಹೆಸರು ಇಲ್ಲ, ಅವರದ್ದೇನು ಪಾತ್ರ ಇಲ್ಲ ಯಾವುದೇ ಸಾಕ್ಷಿ ಇಲ್ಲ, ರಾಜೀನಾಮೆ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಚಿನ್ ಪ್ರಕರಣದಲ್ಲಿ ಎಲ್ಲೂ ಪ್ರಿಯಾಂಕ್ ಖರ್ಗೆ ಹೆಸರು ಉಲ್ಲೇಖವಾಗಿಲ್ಲ, ರಾಜೀನಾಮೆ ಯಾಕೆ ನೀಡಬೇಕು? ಸಿದ್ದರಾಮಯ್ಯ
ರಾಜಕೀಯ ದ್ವೇಷದಿಂದ ಪ್ರಿಯಾಂಕ್ ವಿರುದ್ಧ ಆರೋಪ ಮಾಡಲಾಗುತ್ತಿದೆ. ರಾಜೀನಾಮೆ ಪಡೆಯಲು ಏನಾದ್ರೂ ಸಾಕ್ಷಿ ಇರಬೇಕಲ್ವಾ? ಪ್ರಿಯಾಂಕ್ ಖರ್ಗೆ ಯಾವುದೇ ತನಿಖೆಗೆ ಸಿದ್ಧ ಅಂತಾ ಹೇಳಿದ್ದಾರೆ. ನಾವೀಗ ದೂರು ದಾಖಲಿಸಿಕೊಂಡು ಸಿಐಡಿ ತನಿಖೆಗೆ ಕೊಟ್ಟಿದ್ದೇವೆ. ವರದಿ ಬರಲಿ, ಅದರಲ್ಲಿ ತಪ್ಪು ಮಾಡಿದ್ದಾರೆ ಎಂದು ಗೊತ್ತಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿದ 13 ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್
ಸಚಿನ್ ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸುವಂತೆ ಬಿಜೆಪಿ ಒತ್ತಾಯ ವಿಚಾರವಾಗಿ ಮಾತನಾಡಿದ್ದು, ಬಿಜೆಪಿಯವರು ಯಾವ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದರು. ಬಿಜೆಪಿಯವರಿಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ವಾ? ಅವರು ಅಧಿಕಾರದಲ್ಲಿದ್ದಾಗ ಒಂದು ಕೇಸ್ ಆದರೂ ಸಿಬಿಐಗೆ ಕೊಟ್ರಾ? ಅವರಿಗೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಪ್ರಿಯಾಂಕ್ ಖರ್ಗೆ ಅವರೇ ತಮ್ಮ ಪಾತ್ರ ಇಲ್ಲ ಎಂದಿದ್ದಾರೆ. ತನಿಖೆ ನಡೆಯುತ್ತಿದೆ, ವರದಿ ಏನು ಬರುತ್ತೆ ನೋಡೋಣ. ತನಿಖಾ ವರದಿ ಏನು ಬರುತ್ತೋ ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:10 pm, Wed, 1 January 25