ಬೆಂಗಳೂರು, (ಮಾರ್ಚ್ 14): ತಮ್ಮ ಪುತ್ರನಿಗೆ ಹಾವೇರಿ ಲೋಕಸಭಾ ಟಿಕೆಟ್ (Haveri Loksabha Ticket) ನೀಡದಿದ್ದಕ್ಕೆ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ(KS Eshwarappa) ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ವಿರುದ್ಧ ಬಹಿರಂಗವಾಗಯೇ ಗುಡುಗಿದ್ದಾರೆ. ಇನ್ನು ಇದರ ಮಧ್ಯೆ ಟಿಕೆಟ್ ವಂಚಿತ ನಾಯಕರಾದ ಡಿವಿ ಸದಾನಂದಗೌಡ, ಸಿಟಿ ರವಿ ಅವರು ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಇನ್ನು ಕೆಎಸ್ ಈಶ್ವರಪ್ಪನವರು ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ.
ಟಿಕೆಟ್ ವಂಚಿತ ನಾಯಕರಾದ ಸಿಟಿ ರವಿ ಮತ್ತು ಸದಾನಂದಗೌಡ ಅವರು ಇಂದು(ಮಾರ್ಚ್ 14) ಬೆಂಗಳೂರಿನಲ್ಲಿ ರೆಬೆಲ್ ಆಗಿರುವ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ಈಗ ಅದೆಲ್ಲಾ ಮುಗಿದ ಕಥೆ, ಮುಂದೆ ಏನಾಗಬೇಕು ನೋಡೋಣ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕೈಬಲಪಡಿಸೋಣ. ಈಶ್ವರಪ್ಪ ಜತೆಗಿನ ಮಾತುಕತೆಯನ್ನ ವರಿಷ್ಠರ ಗಮನಕ್ಕೆ ತರುತ್ತೇನೆ. ಈಶ್ವರಪ್ಪರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದರು.
ಇನ್ನು ಇದೇ ವೇಳೆ ಸದಾನಂದಗೌಡ ಮಾತನಾಡಿ, ಈಶ್ವರಪ್ಪನವರು ಬಹಳ ನೊಂದಿದ್ದಾರೆ. ನಾಳೆ ಶಿವಮೊಗ್ಗದಲ್ಲಿ ಕಾರ್ಯಕರ್ತರ ಜೊತೆ ಸಭೆ ಮಾಡುವುದಾಗಿ ಈಶ್ವರಪ್ಪ ಹೇಳಿದ್ದಾರೆ. ನಾವ್ಯಾರೂ ಸಮಾನ ಮನಸ್ಕರಲ್ಲ ಎಂದು ಸ್ಪಷ್ಟಪಡಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರದಿಂದ (Haveri Lok Sabha constituency) ಪುತ್ರ ಕೆ.ಇ. ಕಾಂತೇಶ್‌ಗೆ (KE Kantesh) ಟಿಕೆಟ್ ಮಿಸ್ ಆಗಿದ್ದರಿಂದ ಈಗ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಕೆಂಡವಾಗಿದ್ದಾರೆ. ಪಕ್ಷದ ವರಿಷ್ಠರ ನಿರ್ಧಾರ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಈಗ ಅವರ ಶಮನ ಕಾರ್ಯಕ್ಕೆ ಬಿಜೆಪಿ ಮುಂದಾಗುತ್ತಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕಾಂತೇಶ್ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಸುಳಿವನ್ನು ನೀಡಿದ್ದಾರೆ.
ಟಿಕೆಟ್ ಕೊಡುವ ವಿಚಾರದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ನುಡಿದಂತೆ ನಡೆದುಕೊಳ್ಳಲಿಲ್ಲ ಎಂದು ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ, ಈಶ್ವರಪ್ಪ ಅವರ ಜತೆ ಮಾತನಾಡುತ್ತೇನೆ. ಅಲ್ಲದೆ, ಹೈಕಮಾಂಡ್ ನಾಯಕರು ಸಹ ಮಾತನಾಡಲಿದ್ದಾರೆ. ಅವರ ಮಗನನ್ನು ಎಂಎಲ್‌ಸಿ ಮಾಡಲಿದ್ದಾರೆ ಎಂದು ಹೇಳಿದರು. ಈ ಮೂಲಕ ಕಾಂತೇಶ್‌ಗೆ ಎಂಎಲ್‌ಸಿ ಮಾಡುವ ಸುಳಿವನ್ನು ಯಡಿಯೂರಪ್ಪ ನೀಡಿದ್ದಾರೆ.
ಇನ್ನು ಎಂಎಲ್‌ಸಿ ಆಫರ್ಗೆ ಈಶ್ವರಪ್ಪ ಮಣಿಯುತ್ತಾರಾ ಅಥವಾ ಬಿಎಸ್‌ವೈ ಪುತ್ರನ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ ಎನ್ನುವುದು ನಾಳಿನ ಸಭೆ ಬಳಿಕ ತಿಳಿಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:43 pm, Thu, 14 March 24