ಯುಪಿಎ vs ಎನ್ಡಿಎ: ಆಡಳಿತಾವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಸ್ಥಿತಿಗತಿ ಬಗ್ಗೆ ಶಶಿ ತರೂರ್ ಟ್ವೀಟ್
ಅಕ್ಕಿ, ಗೋಧಿ ಸೇರಿದಂತೆ ಮುಂತಾದ ಅಗತ್ಯ ವಸ್ತುಗಳ ಬೆಲೆಗಳನ್ನು ಯುಪಿಎ ಮತ್ತು ಎನ್ಡಿಎಗೆ ಹೋಲಿಕೆ ಮಾಡಿ ಕಾಂಗ್ರೆಸ್ ಸಂಸದ ಶಶಿ ತರೂರ್, ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.
ಸದ್ಯ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಅಲ್ಲದೆ, ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕೆ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆಗಳನ್ನೂ ನಡೆಸಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಒಂದು ಟ್ವೀಟ್ (Tweet) ಮಾಡಿದ್ದು, ಆಗಿನ ಯುಪಿಎ (UPA) ಅವಧಿಯಲ್ಲಿ ಇದ್ದ ಬೆಲೆಯನ್ನು ಈಗಿನ ಎನ್ಡಿಎ (NDA) ಸರ್ಕಾರದ ಅವಧಿಯಲ್ಲಿನ ಬೆಲೆಗೆ ತಾಳೆ ಮಾಡಿ ಪೋಸ್ಟರ್ ಹಂಚಿಕೊಂಡಿದ್ದಾರೆ.
ಅಕ್ಕಿ, ಗೋಧಿ ಸೇರಿದಂತೆ ಮುಂತಾದ ಅಗತ್ಯ ವಸ್ತುಗಳ ಬೆಲೆಗಳನ್ನು ಯುಪಿಎ ಮತ್ತು ಎನ್ಡಿಎಗೆ ಹೋಲಿಕೆ ಮಾಡಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. 2014ರ ಮೇ 1ರ ಸಮಯದಲ್ಲಿ ಇದ್ದ ಬೆಲೆ ಹಾಗೂ 2022ರ ಮೇ 1 ರವರೆಗಿನ ಬೆಲೆಯನ್ನು ಪೋಸ್ಟರ್ನಲ್ಲಿ ತೋರಿಸಲಾಗಿದೆ.
ಯುಪಿಎ ಅವಧಿಯಲ್ಲಿ ಇದ್ದ 26.17 ರೂ. ಅಕ್ಕಿ ಬೆಲೆ ಎನ್ಡಿಎ ಅವಧಿಯಲ್ಲಿ 35.85 ರೂ. ಆಗಿದ್ದು, ಶೇ.37ರಷ್ಟು ಹೆಚ್ಚಳವಾಗಿದೆ. ಗೋಧಿ ಬೆಲೆ ಅಂದು 20.5 ರೂ. ಇತ್ತು. ಎನ್ಡಿಎ ಅವಧಿಯಲ್ಲಿ 28.01ಕ್ಕೆ ಏರುವ ಮೂಲಕ ಶೇ.37ರಷ್ಟು ಗೋಧಿ ಬೇಲೆ ಏರಿಕೆ ಕಂಡಿದೆ. ಗೋಧಿ ಪುಡಿಗೆ ಯುಪಿಎ ಅವಧಿಯಲ್ಲಿ 22.41 ರೂ. ಇತ್ತು. ಎನ್ಡಿಎ ಅವಧಿಗೆ ಆ ಬೆಲೆ 32.02ಕ್ಕೆ ಏರುವ ಮೂಲಕ ಗೋಧಿ ಹಿಟ್ಟಿನ ಬೆಲೆ ಶೇ.43ಕ್ಕೆ ಏರಿದೆ. ಯುಪಿಎ ಅವಧಿಯಲ್ಲಿ ಉದ್ದಿನಬೇಳೆಯ ಬೆಲೆ 65.06 ರೂ. ಇತ್ತು. ಎನ್ಡಿಎ ಅವಧಿಯಲ್ಲಿ 103.55 ರೂ.ಗೆ ತಲುಪುವ ಮೂಲಕ ಉದ್ದಿನಬೆಳೆಯ ಬೆಲೆಯಲ್ಲಿ ಶೇ.59ರಷ್ಟು ಏರಿಕೆಯಾಗಿದೆ ಎಂದು ಪೋಸ್ಟರ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ವಿವಾದ ಸೃಷ್ಟಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಕುರಿತ ಶಶಿ ತರೂರ್ ಟ್ವೀಟ್; ಸುನಂದಾ ಪುಷ್ಕರ್ ಹೆಸರು ಉಲ್ಲೇಖಿಸಿದ ಅನುಪಮ್ ಖೇರ್
ಮೂಂಗ್ ದಾಲ್ಗೆ ಯುಪಿಎ ಅವಧಿಯಲ್ಲಿ 86.61 ರೂ. ಇತ್ತು. ಎನ್ಡಿಎ ಅವಧಿಯಲ್ಲಿ ಆ ಬೆಲೆ 101.73 ರೂ.ಗೆ ಏರಿತು. ಆ ಮೂಲಕ ಮೂಂಗ್ ದಾಲ್ ಬೆಲೆಯಲ್ಲಿ ಶೇ.17ರಷ್ಟು ಏರಿಕೆಯಾಗಿದೆ. ಇನ್ನು 36.83 ರೂ. ಇದ್ದ ಸಕ್ಕರೆ ಬೆಲೆ ಎನ್ಡಿಎ ಅವಧಿಯಲ್ಲಿ 40.56 ರೂ.ಗೆ ಏರಿಕೆ ಕಂಡು ಶೇ.10ರಷ್ಟು ಏರಿಕೆಯಾದಂತಾಗಿದೆ. ಹಾಲಿನ ಬೆಲೆ ಯುಪಿಇಎ ಅವಧಿಯಲ್ಲಿ 35.53 ರೂ. ಇತ್ತು. ಈಗ 50.7ಕ್ಕೆ ಏರಿದೆ. ಅದರಂತೆ ಹಾಲಿನ ಬೆಲೆಯಲ್ಲಿ ಶೇ.43ರಷ್ಟು ಏರಿಕೆಕಂಡಿದೆ.
One more difference between the UPA era & the NDA: you feel it daily! #Inflation pic.twitter.com/6SIglAwEYc
— Shashi Tharoor (@ShashiTharoor) May 20, 2022
ಯುಪಿಎ ಅವಧಿಯಲ್ಲಿ ಕಡಲೆಕಾಯಿ ಎಣ್ಣೆ (ಪ್ಯಾಕ್)ಗೆ 122.08 ರೂ., ಎನ್ಡಿಎ ಅವಧಿಯಲ್ಲಿ 183.81 ರೂ. (ಶೇ.51ರಷ್ಟು)ಗೆ ಏರಿಕೆ, ಯುಪಿಎ ಅವಧಿಯಲ್ಲಿ ಸಾಸಿವೆ ಎಣ್ಣೆಗೆ 95.39 ರೂ., ಎನ್ಡಿಎ ಅವಧಿಯಲ್ಲಿ 183.19 ರೂ. (ಶೇ.92ರಷ್ಟು) ಏರಿಕೆ, ಯುಪಿಎ ಅವಧಿಯಲ್ಲಿ ಸೋಯಾ ಎಣ್ಣೆ (ಪ್ಯಾಕ್)ಗೆ 84.75 ರೂ. ಇತ್ತು. ಎನ್ಡಿಎ ಅವಧಿಯಲ್ಲಿ 166.57ರೂ.ಗೆ ಏರಿಕೆ ಕಂಡಿದೆ. ಅದರಂತೆ ಶೇ.97ರಷ್ಟು ಏರಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆ (ಪ್ಯಾಕ್)ಗೆ ಯುಪಿಎ ಅವಧಿಯಲ್ಲಿ 96.67 ರೂ. ಇತ್ತು. ಎನ್ಡಿಎ ಅವಧಿಯಲ್ಲಿ 188.22 ರೂ. (ಶೇ.95ರಷ್ಟು)ಗೆ ಏರಿದೆ.
ತಾಳೆ ಎಣ್ಣೆ (ಪ್ಯಾಕ್)ಗೆ ಯುಪಿಎ ಅವಧಿಯಲ್ಲಿ 74.58 ರೂ. ಇತ್ತು. ಎನ್ಡಿಎ ಅವಧಿಯಲ್ಲಿ ಈ ಬೆಲೆ 155.89ಕ್ಕೆ ಏರಿಕೆಯಾಗಿದೆ. ಅಂದರೆ, ಶೇ.109ರಷ್ಟು ಬೆಲೆ ಏರಿಕೆಯಾಗಿದೆ.ಟೀ (ಸಡಿಲ) ಬೆಲೆ ಶೇ.41ರಷ್ಟು, ಪ್ಯಾಕ್ ಉಪ್ಪು ಬೆಲೆ ಶೇ.31ರಷ್ಟು ಏರಿಕೆಯಾಗಿದೆ. ಅಷ್ಟೇ ಅಲ್ಲದೆ, ಆಲೂಗಡ್ಡೆ ಮೇಲಿನ ಬೆಲೆ ಶೇ.11ರಷ್ಟು, ಈರುಳ್ಳಿ ಬೆಲೆ ಶೇ.30ರಷ್ಟು, ಟೊಮೆಟೊ ಬೆಲೆ ಶೇ.56ರಷ್ಟು ಏರಿಕೆಯಾಗಿದೆ ಎಂದು ಪೋಸ್ಟರ್ನಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 5:04 pm, Fri, 20 May 22