AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್ ಜಾರಕಿಹೊಳಿ ಮುನಿಸಿನ ನಡುವೆ ಡಿಕೆ ಶಿವಕುಮಾರ್ ಇಂದು ಬೆಳಗಾವಿಗೆ, ಕುತೂಹಲ ಮೂಡಿಸಿದ ಸಚಿವರ ನಡೆ

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬೆಳಗಾವಿ ರಾಜಕೀಯ ಅಂದ್ರೆ ಸಿಕ್ಕಾಪಟ್ಟೆ ಹೈವೋಲ್ಟೇಜ್. ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗೆ ಪಕ್ಷಕ್ಕಿಂತ ವೈಯಕ್ತಿಕ ಪ್ರತಿಷ್ಠೆಯೇ ಮುಖ್ಯ. ಇದರ ನಡುವೆ ಬೆಳಗಾವಿ ರಾಜಕೀಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಮುನಿಸಿಕೊಂಡತೆ ಕಾಣುತ್ತಿದೆ. ಇದರ ನಡುವೆ ಡಿಕೆ ಶಿವಕುಮಾರ್ ಅವರು ಇಂದು(ಅ.18) ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಸತೀಶ್ ಜಾರಕಿಹೊಳಿ ಮುನಿಸಿನ ನಡುವೆ ಡಿಕೆ ಶಿವಕುಮಾರ್ ಇಂದು ಬೆಳಗಾವಿಗೆ, ಕುತೂಹಲ ಮೂಡಿಸಿದ ಸಚಿವರ ನಡೆ
ಡಿಕೆ ಶಿವಕುಮಾರ್
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ರಮೇಶ್ ಬಿ. ಜವಳಗೇರಾ|

Updated on:Oct 18, 2023 | 7:25 AM

Share

ಬೆಳಗಾವಿ, (ಅಕ್ಟೋಬರ್ 18): ಬೆಳಗಾವಿ (Belagavi)ರಾಜಕೀಯದ ಒಳ ಬೇಗುದಿ ಕಾಂಗ್ರೆಸ್ ಸರ್ಕಾರಕ್ಕೂ ತಲೆನೋವಾಗಿರುವ ಲಕ್ಷಣಗಳು ಎದ್ದು ಕಾಣುತ್ತಿವೆ. ಬೆಳಗಾವಿಯಲ್ಲಿ ಅಧಿಕಾರಿಗಳ ವರ್ಗಾವಣೆ, ಕಾಡಾ, ಬುಡಾ ಅಧ್ಯಕ್ಷರ ನೇಮಕ ವಿಚಾರವಾಗಿ ಸಚಿವರಾದ ಸತೀಶ್ ಜಾರಕಿಹೊಳಿ( Satish Jarkiholi) ಮತ್ತು ಸಚಿವೆ ಹೆಬ್ಬಾಳ್ಕರ್ ಮಧ್ಯೆ ವೈಮನಸ್ಸು ಉಂಟಾಗಿದೆ ಎಂಬ ಮಾತು ಕೇಳಿ ಬಂದಿದೆ. ಇದರ ಮಧ್ಯೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪಕ್ಕೆ ಸಚಿವ ಸತೀಶ್ ಬೇಸರಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ಬೆಳವಣಿಗೆ ಮಧ್ಯೆ ಡಿಕೆ ಶಿವಕುಮಾರ್ (DK Shivakumar) ಇಂದು(ಅಕ್ಟೋಬರ್ 18) ಬೆಳಗಾವಿಗೆ ಭೇಟಿ ನೀಡಲಿದ್ದು ಭಾರಿ ಕುತೂಹಲ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಡಿಸಿಎಂ ಆದ ಬಳಿಕ ಮೊದಲ ಬಾರಿ ಹುಕ್ಕೇರಿಗೆ ಆಗಮಿಸುತ್ತಿದ್ದು, ಹಿರೇಮಠದಲ್ಲಿ ನಡೆಯಲಿರುವ ಚಂಡಿಕಾಯಾಗದಲ್ಲಿ ಭಾಗಿಯಾಗಲಿದ್ದಾರೆ. ನೊಣವಿನಕೆರೆಯ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳಿಗೆ ರೇಣುಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದು ಈ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಬಿ.ಪಾಟೀಲ್ ನೇತೃತ್ವದಲ್ಲಿ ನಡೆಯುವ ಸಮಾರಂಭಕ್ಕೆ ಸಚಿವ ಸತೀಶ್ ಜಾರಕಿಹೊಳಿ, ಹೆಬ್ಬಾಳ್ಕರ್ ಸೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೂ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಸಚಿವರ ಮುಸುಕಿನ ಗುದ್ದಾಟ: ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್​ ನಡುವೆ ಜಟಾಪಟಿ

ಡಿಕೆ ಶಿವಕುಮಾರ್ ಬೆಳಗಾವಿ ಪ್ರವಾಸದ ವಿವರ​

ಇಂದು ಬೆಳಗ್ಗೆ 10.55ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಡಿಕೆ ಶಿವಕುಮಾರ್, ನೇರವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಜಲಸಂಪನ್ಮೂಲ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಹುಕ್ಕೇರಿಗೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ನಂತರ ಸಂಜೆ ಹುಕ್ಕೇರಿ ಹಿರೇಮಠದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಇಂದು ರಾತ್ರಿ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದು, ನಾಳೆ (ಅಕ್ಟೋಬರ್ 19) ಬೆಳಗ್ಗೆ 11.15ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಕಾರ್ಯಕ್ರಮಕ್ಕೆ ಗೈರಾಗುತ್ತಾರಾ ಸತೀಶ್ ಜಾರಕಿಹೊಳಿ?

ಇನ್ನು ಬೆಳಗಾವಿ ಕಾಂಗ್ರೆಸ್ ನಾಯಕ ಸಚಿವ ಸತೀಶ್ ಜಾರಕಿಹೊಳಿ 20 ಶಾಸಕರನ್ನು ಕರೆದುಕೊಂಡು ಮೈಸೂರು ದಸರಾ ಕಾರ್ಯಕ್ರಮಕ್ಕೆ ತೆರಳಲು ನಿರ್ಧರಿಸಿದ್ದರು. ಇದರೊಂದಿಗೆ ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಸಂದೇಶ ರವಾನೆಗೆ ಸತೀಶ್ ಜಾರಕಿಹೊಳಿ ಮುಂದಾಗಿದ್ದರು. ಬಳಿಕ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಪ್ರವಾಸ ಮುಂದೂಡಿದ್ದು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಳಗಾವಿಗೆ ಭೇಟಿ ನೀಡಲಿದ್ದು ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಪಾಲ್ಗೊಳ್ಳುತ್ತಾರಾ? ಅಥವಾ ಗೈರಾಗುತ್ತಾರಾ ಎನ್ನುವ ಕುತೂಹಲ ಕೆರಳಿಸಿದೆ.

ಒಟ್ಟಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮೈಸೂರು ಪ್ರವಾಸಕ್ಕೆ ಹೈಕಮಾಂಡ್ ತಡೆ ಹಾಕಿದ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಳಗಾವಿ ಟೂರ್ ಹೊರಟಿದ್ದಾರೆ. ಹೀಗಾಗಿ ಕುಂದಾನಗರಿ ರಾಜಕೀಯ ಮತ್ತಷ್ಟು ಸಂಚಲನ ಸೃಷ್ಟಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 am, Wed, 18 October 23