ಬಿಜೆಪಿ ಅಧಿಕಾರದ ಕುರ್ಚಿಯಲ್ಲಿ ಪರೇಶ್ ಮೇಸ್ತರಂಥ ಯುವಕರ ರಕ್ತ ಕಲೆ: ಸಿಬಿಐ ವರದಿ ಬೆನ್ನಲ್ಲೇ ಕ್ಷಮೆ ಕೇಳಲು ಸಿದ್ದರಾಮಯ್ಯ ಆಗ್ರಹ
‘ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ‘ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ‘ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂಥ ಅಮಾಯಕ ಯುವಕರ ರಕ್ತ ಇದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaih) ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬಿಜೆಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ (Paresh Mesta) ಯುವಕರ ರಕ್ತದ ಕಲೆ ಅಂಟಿಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
CBI has, in its report, stated that Paresh Mesta’s death was accidental & was not due to murder. This report is a slap on the face of @BJP4Karnataka.
If BJP has any shame left, it should apologise for its slanderous campaign.
— Siddaramaiah (@siddaramaiah) October 3, 2022
ಪರೇಶ್ ಮೇಸ್ತ ಸಾವು ಆಕಸ್ಮಿಕ ಎಂದ ಸಿಬಿಐ
ಹೊನ್ನಾವರದ ಪರೇಶ್ ಅವರದು ಸಹಜ ಸಾವು ಎಂದು ಕೇಂದ್ರೀಯ ತನಿಖಾ ದಳವು (Central Bureau of Investigation – CBI) ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ನಾಲ್ಕೂವರೆ ವರ್ಷಗಳ ಸುದೀರ್ಘ ತನಿಖೆಯ ನಂತರ ಸಿಬಿಐ 1,500 ಪುಟಗಳ ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸಿಬಿಐ ಅಧಿಕಾರಿಗಳು ಭಾನುವಾರ (ಅ 2) ಸಲ್ಲಿಸಿದ್ದ ವರದಿಯನ್ನು ನ್ಯಾಯಾಲಯವು ಸೋಮವಾರ ಸ್ವೀಕರಿಸಿತು. ಪ್ರಕರಣದ ಮುಂದಿನ ವಿಚಾರಣೆಯು ನ.16ರಂದು ನಡೆಯಲಿದೆ. ಡಿಸೆಂಬರ್ 6, 2017ರಂದು ಹೊನ್ನಾವರದಲ್ಲಿ ನಡೆದಿದ್ದ ಗಲಭೆಯಲ್ಲಿ ಮೀನುಗಾರ ಪರೇಶ್ ಮೇಸ್ತ ಸಾವನ್ನಪ್ಪಿದ್ದರು. ಇದು ಕೊಲೆ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿತ್ತು. ನಂತರದ ದಿನಗಳಲ್ಲಿ ಕರಾವಳಿಯಲ್ಲಿ ಕೋಮುಗಲಭೆಗಳು ಆರಂಭವಾಗಿದ್ದವು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದರು.
ಮುಜುಗರಕ್ಕೆ ಸಿಲುಕಿದ ಬಿಜೆಪಿ
ಹೊನ್ನಾವರದ ಪರೇಶ್ ಮೇಸ್ತ ಅವರದು ಸಹಜ ಸಾವು ಎಂದು ಸಿಬಿಐ ತನ್ನ ವರದಿಯಲ್ಲಿ ನಮೂದಿಸಿರುವುದು ಆಡಳಿತಾರೂಢ ಬಿಜೆಪಿಗೆ ಮುಜುಗರ ಉಂಟು ಮಾಡಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಪರೇಶ್ ಮೇಸ್ತ ಸಾವನ್ನು ಕರಾವಳಿ ಭಾಗದಲ್ಲಿ ಚುನಾವಣಾ ವಿಷಯವನ್ನಾಗಿಸಿದ್ದ ಬಿಜೆಪಿ ನಾಯಕರ ಪೈಕಿ ಬಹುತೇಕರು ಮೌನ ಮುರಿಯುತ್ತಿಲ್ಲ. ಸಿಬಿಐ ವರದಿ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಮುನಿರತ್ನ ದಸರಾ ಹಬ್ಬದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.