ಬೆಂಗಳೂರು ಜುಲೈ 26: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಬಯಲಾಗಿರುವುದು ಮುಖ್ಯಮಂತ್ರಿಗಳ ಕುರ್ಚಿಗೆ ಟವೆಲ್ ಹಾಕಿದವರಿಂದ ಎಂಬ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅಧಿಕಾರದಲ್ಲಿರುವ ಯಾರೂ ಬೇಕಾದರೂ ಟವೆಲ್ ಹಾಕಬಹುದು. ನಮ್ಮಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆ ಇರುವವರು ತುಂಬಾ ಜನರಿದ್ದಾರೆ. ಅರ್ಹತೆ ಇರುವವರು ಮುಖ್ಯಮಂತ್ರಿ ಆಗಲು ಟವೆಲ್ ಹಾಕುತ್ತಾರೆ. ಟವೆಲ್ ಹಾಕಿದವರು ಯಾರು ಅಂತ ಹೆಚ್ಡಿ ಕುಮಾರಸ್ವಾಮಿ ಅವರನ್ನೇ ಕೇಳಿ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಕುಳಿತಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವರದಿ ಕೇಳಿದ್ದಾರೆ, ಕೊಡುತ್ತೇವೆ. ಎಲ್ಲವೂ ಕಾನೂನು ಪ್ರಕಾರ ನಡೆದಿದೆ ಅಂತ ವರದಿ ನೀಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಸೋಮವಾರ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಜೆಡಿಎಸ್ ಪಾದಯಾತ್ರೆ ಬಹುತೇಕ ಫಿಕ್ಸ್
ನಮ್ಮ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮವಾಗಿ ಬಳಸಿಕೊಂಡಿದ್ದೇ ತಪ್ಪು. ವಿಜಯನಗರ ಬಡಾವಣೆಯಲ್ಲಿ 125 ಸೈಟ್ಗಳನ್ನು ಹಂಚಿದ್ದಾರೆ. ಅದರಲ್ಲಿ ನಮಗೂ ನಿವೇಶನ ಕೊಟ್ಟಿದ್ದಾರೆ ಅಷ್ಟೇ. ನನ್ನದಾಗಲಿ, ನನ್ನ ಪತ್ನಿಯದಾಗಲಿ, ಬಾಮೈದನ ಪಾತ್ರ ಇದೆಯಾ? 2014ರಲ್ಲಿ ನನ್ನ ಬಾಮೈದ ಜಮೀನು ಖರೀದಿ ಮಾಡಿರುವುದು. ಸಂಪೂರ್ಣವಾಗಿ ಕಾನೂನು ಪ್ರಕಾರ ಸೈಟ್ ಹಂಚಿಕೆ ಮಾಡಿದ್ದಾರೆ ಎಂದು ತಿಳಿಸಿದರು.
ಆದರೆ ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಯತ್ನಿಸ್ತಿದ್ದಾರೆ. ನಾನು ಎರಡನೇ ಬಾರಿಗೆ ಸಿಎಂ ಆಗಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಿವೃತ್ತ ನ್ಯಾ. ದೇಸಾಯಿ ಅಧ್ಯಕ್ಷತೆಯಲ್ಲಿ ತನಿಖೆ ಮಾಡಿಸುತ್ತಿದ್ದೇವೆ ಎಂದರು.
2023ರ ವಿಧಾಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ವಿಜಯಶಾಲಿಯಾದ ಮೇಲೆ ಮುಖ್ಯಮಂತ್ರಿ ಗುದ್ದುಗೆ ಮೇಲೆ ಕೂರಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿತ್ತು. ದೆಹಲಿ ಹೈಕಮಾಂಡ್ ಅಂಗಳದಲ್ಲಿ ಸಭೆ ಮೇಲೆ ಸಭೆ ನಡೆದು ದೊಡ್ಡ ಹೈಡ್ರಾಮಾ ಸೃಷ್ಟಿಯಾಗಿತ್ತು. ಇಬ್ಬರು ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಕೊನೆಗೆ ಮುಖ್ಯಮಂತ್ರಿ ಕುರ್ಚಿ ಸಿದ್ದರಾಮಯ್ಯ ಅವರಿಗೆ ಒಲಿದಿದೆ. ಆದರೆ ಸಿಎಂ ಕುರ್ಚಿ ಮೇಲೆ ಡಿಕೆ ಶಿವಕುಮಾರ್ ಇನ್ನೂ ಕಣ್ಣಿಟ್ಟಿದ್ದು, ಇದೇ ಅವಧಿಯಲ್ಲಿ ಸಿಎಂ ಆಗುವ ಕನಸು ಕಂಡಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Fri, 26 July 24