ಸೋಮವಾರ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಜೆಡಿಎಸ್ ಪಾದಯಾತ್ರೆ ಬಹುತೇಕ ಫಿಕ್ಸ್
ಮುಡಾ ಸೈಟು ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ತಳುಕು ಹಾಕಿದ್ದೇ ತಡ, ಬಿಜೆಪಿ-ಜೆಡಿಎಸ್ ನಾಯಕರು ಕೆರಳಿದ ಸಿಂಹದಂತಾಗಿದ್ದಾರೆ. ಮುಂಗಾರು ಅಧಿವೇಶನದ ಆರಂಭದಿಂದ ಶುರುವಾದ ಮುಡಾ ಮಹಾಸಮರ ಬೀದಿಗೆ ಬಂದಿದೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮೂಲಕ ದೋಸ್ತಿ ನಾಯಕರು ಸರ್ಕಾರದ ವಿರುದ್ಧ ಸಮರ ಸಾರಿಬಿಟ್ಟಿದ್ದಾರೆ.
ಬೆಂಗಳೂರು, ಜುಲೈ 26: ಮುಡಾ ಹಗರಣವನ್ನು ಬಿಜೆಪಿ ಬ್ರಹ್ಮಾಸ್ತ್ರ ಮಾಡಿಕೊಂಡಿದೆ. ವಿಧಾನಸಭೆ ಕಲಾಪ ಮುಂದೂಡಿಕೆಯಾಗಿದ್ದರಿಂದ ಅಹೋರಾತ್ರಿ ಹೋರಾಟಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಸೋಮವಾರ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಾದಯಾತ್ರೆ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ಎರಡು ಆಯ್ಕೆ ಇಟ್ಟುಕೊಂಡಿರುವ ಬಿಜೆಪಿ, ಒಂದೋ ಪಾದಯಾತ್ರೆ ನಡೆಸೋದು, ಇಲ್ಲವಾದರೆ, ದೆಹಲಿಗೆ ತೆರಳಿ ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಕೊಡುವ ಬಗ್ಗೆ ಚಿಂತನೆಯಲ್ಲಿದೆ. ಯಾವುದನ್ನು ಮಾಡಬೇಕು ಎಂಬುದನ್ನು ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನಿಸಲಾಗುತ್ತದೆ.
ಆದರೆ ಬಿಜೆಪಿಯ ಪಾದಯಾತ್ರೆ ಪ್ಲ್ಯಾನ್‌ಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಿರೋಧಿಸಿದಂತೆ ಮಾತನಾಡಿದ್ದಾರೆ. ಬಿಜೆಪಿಯವರ ಪಾದಯಾತ್ರೆ ನಾಟಕ, ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.
ಬಿಜೆಪಿಯವರು ಪಾದಯಾತ್ರೆ ಮಾಡಲಿ, ದೆಹಲಿ ತನಕ ನಡೆದುಕೊಂಡು ಹೋಗಲಿ, ವಾತಾವರಣ ಚೆನ್ನಾಗಿದೆ ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಪಾದಯಾತ್ರೆ Vs ಕಾಂಗ್ರೆಸ್ ಪಾದಯಾತ್ರೆ
ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್ ನಾಯಕರು ಕೌಂಟರ್ ಆಗಿ ಪಾದಯಾತ್ರೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಬಿಜೆಪಿ ಕಾಲದ ಹಗರಣಗಳನ್ನ ಮುಂದಿಟ್ಟು, ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲು ಮೈಸೂರು ಕಾಂಗ್ರೆಸ್ ನಾಯಕರು ಪ್ಲ್ಯಾನ್ ಮಾಡ್ತಿದ್ದಾರೆ. ಇದರ ಜೊತೆಗೆ ಮೈಸೂರಿನಲ್ಲಿ ಸಮಾವೇಶ ನಡೆಸುವ ಚಿಂತನೆಯೂ ಇದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಅನೌಪಚಾರಿಕ ಮಾತುಕತೆಯೂ ನಡೆದಿದೆ.
ಇವೆಲ್ಲಾ ಬೆಳವಣಿಗೆಗಳ ನಡುವೆ ನಿನ್ನೆ ನಡೆದ ಉಭಯ ಕಲಾಪದಲ್ಲೂ ಮುಡಾ ಹಗರಣ ಸದ್ದು ಮಾಡಿದೆ. ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಅಂತಾ ನಿನ್ನೆಯೂ ಮೈತ್ರಿ ನಾಯಕರು ಸದನದ ಬಾವಿಗಿಳಿದು ಧರಣಿ ನಡೆಸಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಸದನದಲ್ಲಿ ನಡೆದಿದ್ದು ಗದ್ದಲ, ಗಲಾಟೆ ಪ್ರತಿಭಟನೆ ಮಾತ್ರ.
ಅತ್ತ ಪರಿಷತ್‌ನಲ್ಲೂ ಮುಡಾ ಚರ್ಚೆಗೆ ಅವಕಾಶ ಸಿಗಲಿಲ್ಲ. ಆದರೂ ಸಿಎಂ ಸಿದ್ದರಾಮಯ್ಯ, ಸ್ವಯಂಪ್ರೇರಿತವಾಗಿ ಉತ್ತರ ಕೊಟ್ರು. ಕಪ್ಪು ಚುಕ್ಕೆ ಇಲ್ಲದ ನನ್ನ ಮೇಲೆ ಹೊಟ್ಟೆ ಕಿಚ್ಚು ಅಂತಾ ಸಿಎಂ ವಾಗ್ದಾಳಿ ನಡೆಸಿದರು. ಹಾಗಾದರೆ ಚರ್ಚೆಗೆ ಅವಕಾಶ ಕೊಡಿ ಅಂತಾ ಸಿ.ಟಿ ರವಿ ಹೇಳಿದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಕಲಾಪ: ನೀಟ್ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿ ನಿರ್ಣಯ ಅಂಗೀಕಾರ
ಹೀಗೆ ಇಡೀ ದಿನದ ಗದ್ದಲದಿಂದಾಗಿ ಉಭಯ ಕಲಾಪಗಳು ಬಲಿಯಾದ್ವು. ಪರಿಷತ್ ಮತ್ತು ವಿಧಾನಸಭೆ ಕಲಾಪವನ್ನ ಅನಿರ್ಧಿಷ್ಠಾವಧಿಗೆ ಮುಂದೂಡಲಾಯಿತು. ನಿಗದಿಯಂತೆ ಇವತ್ತೂ ನಡೆಬೇಕಿದ್ದ ಕಲಾಪವನ್ನ ಒಂದು ದಿನ ಮುಂಚಿತವಾಗಿಯೇ ಮುಗಿಸಲಾಯಿತು. ಕಲಾಪ ಮುಂದೂಡಿಕೆಯಾಗುತ್ತಿದ್ದಂತೆಯೇ ಪೋಸ್ಟರ್ ಹಿಡಿದ ಬಿಜೆಪಿ ನಾಯಕರು, ರಾಜಭವನದ ಕದ ತಟ್ಟಿದ್ರು. ರಾಜ್ಯಪಾಲರಿಗೆ ದೂರು ನೀಡಿದರು.
ಅದೇನೇ ಇರಲಿ, ಮುಡಾ ಹಗರಣ ಗುದ್ದಾಟ ಇನ್ನೆರಡು ದಿನಗಳಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ