ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ
ವಿಜಯಲಕ್ಷ್ಮಿ ಅವರು ದರ್ಶನ್ಗೆ ಜಾಮೀನು ಕೊಡಿಸಲು ಕಷ್ಟಪಡುತ್ತಿದ್ದಾರೆ. ಕೊಲೆಯಂತಹ ಗಂಭೀರ ಆರೋಪದಲ್ಲಿ ದರ್ಶನ್ ಜೈಲು ಸೇರಿರುವುದರಿಂದ ಬೇಲ್ ಸಿಗುವುದು ಕಷ್ಟ ಆಗಿದೆ. ಮನೆಯಿಂದ ಊಟ ತರಿಸಲು ಕೂಡ ಕೋರ್ಟ್ ಅನುಮತಿ ನೀಡಿಲ್ಲ. ಈ ಕಷ್ಟದ ಕಾಲದಲ್ಲಿ ವಿಜಯಲಕ್ಷ್ಮಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಅವರು ಭೇಟಿ ನೀಡಿದ್ದಾರೆ.
ನಟ ದರ್ಶನ್ ಕುಟುಂಬಕ್ಕೆ ಈಗ ಸಂಕಷ್ಟದ ಕಾಲ. ರೇಣುಕಾ ಸ್ವಾಮಿ ಮರ್ಡರ್ ಕೇಸ್ನಲ್ಲಿ ಎ2 ಆಗಿರುವ ದರ್ಶನ್ ಅವರು ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಅವರಿಗೆ ಜಾಮೀನು ಕೊಡಿಸಲು ಕುಟುಂಬದವರು ಕಷ್ಟಪಡುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಅವರು ಆಗಾಗ ಜೈಲಿಗೆ ಭೇಟಿ ನೀಡುತ್ತಾ ಗಂಡನಿಗೆ ಧೈರ್ಯ ತುಂಬುತ್ತಿದ್ದಾರೆ. ಕಾನೂನಿನ ಹೋರಾಟದ ಬಗ್ಗೆ ವಕೀಲರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಈ ನಡುವೆ ವಿಜಯಲಕ್ಷ್ಮಿ ಅವರು ದೇವರ ಮೊರೆ ಹೋಗಿದ್ದಾರೆ. ವಿವಿಧ ದೇವಾಲಯಗಳಿಗೆ ತೆರಳುತ್ತಿದ್ದಾರೆ. ಇಂದು (ಜುಲೈ 25) ವಿಜಯಲಕ್ಷ್ಮಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಆಪ್ತರ ಜೊತೆ ಬಂದು ವಿಜಯಲಕ್ಷ್ಮೀ ಅವರು ದರ್ಶನ ಪಡೆದಿದ್ದಾರೆ. ಶುಕ್ರವಾರ (ಜುಲೈ 26) ಬೆಳಗ್ಗೆ ಅವರು ನವ ಚಂಡಿಕಾ ಹೋಮ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ದರ್ಶನ್ ಅವರು ಈ ಕಷ್ಟದ ಪರಿಸ್ಥಿತಿಯಿಂದ ಹೊರಬರಲಿ ಎಂದು ವಿಜಯಲಕ್ಷ್ಮಿ ಅವರು ದೇವರಲ್ಲಿ ಪ್ರಾರ್ಥನೆ ಮಾಡಲಿದ್ದಾರೆ.
ಸ್ಟಾರ್ ಆಗಿ ಮೆರೆದ ದರ್ಶನ್ ಅವರು ಜೈಲಿನಲ್ಲಿ ಕಾಲ ಕಳೆಯುವುದು ನಿಜಕ್ಕೂ ಕಷ್ಟ. ಅಲ್ಲಿ ಅವರಿಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಮುಖ್ಯವಾಗಿ, ಜೈಲಿನ ಊಟ ಸೇವಿಸಲು ದರ್ಶನ್ಗೆ ಕಷ್ಟವಾಗುತ್ತಿದೆ. ಹಾಗಾಗಿ ಅವರು ಮನೆಯ ಊಟ ತರಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಅವರ ವಿಚಾರಣೆ ಇತ್ತೀಚೆಗೆ ನಡೆದಿತ್ತು. ಇಂದು (ಜು.25) ಆದೇಶ ಹೊರಬಂದಿದ್ದು, ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.
ಇದನ್ನೂ ಓದಿ: ದರ್ಶನ್ ಇರುವ ಜೈಲು ಕೊಠಡಿ ಹೇಗಿದೆ? ಟಿವಿ ಇದೆಯೇ? ಖೈದಿಯೇ ಹೇಳಿದ ವಿವರ ಕೇಳಿ..
ಮನೆಯಿಂದ ಊಟ, ಹಾಸಿಗೆ ಮತ್ತು ಬಟ್ಟೆ ತರಿಸಿಕೊಳ್ಳಲು ದರ್ಶನ್ ಅವರಿಗೆ ಅವಕಾಶ ಸಿಕ್ಕಿಲ್ಲ. ಇದರಿಂದಾಗಿ ಅವರಿಗೆ ಜೈಲುವಾಸ ಇನ್ನಷ್ಟು ಕಷ್ಟ ಆಗಲಿದೆ. ಊಟದ ಸಮಸ್ಯೆಯಿಂದ ಅವರು ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಅವರಿಗೆ ಅಜೀರ್ಣ, ಅತಿಸಾರ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ. ಜಾಮೀನು ಸಿಗುವ ತನಕ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಸದ್ಯಕ್ಕಂತೂ ಜಾಮೀನು ಸಿಗುವುದು ಕಷ್ಟವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು ವಿಜಯಲಕ್ಷ್ಮಿ ಅವರು ದೇವರಿಗೆ ಮೊರೆಹೋಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.