ಮೈಸೂರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರೇ ಪೂರ್ಣವಧಿ ಇರಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸಚಿವ ಎಂಬಿ ಪಾಟೀಲ್ (MB Patil) ಹೇಳಿದ್ದಾರೆ. ಮೈಸೂರಿಮ ಸುತ್ತೂರಿನಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ಯಾವುದೇ ಬದಲಾವಣೆ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಎಐಸಿಸಿ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯ ಮುಂದಿನ ಐದು ವರ್ಷವೂ ಸಿಎಂ ಆಗಿರಲಿದ್ದಾರೆ ಎಂಬುದನ್ನು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.
ಬಿಜೆಪಿ ಅಧಿಕಾರವಧಿಲ್ಲಿ ನಡೆದ ಎಲ್ಲಾ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ. ಪಿಎಸ್ಐ ಹಗರಣ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಹಾಗೂ ಇತರೆ ಇಲಾಖೆಗಳಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ. ಎಲ್ಲ ಹಗರಣಗಳನ್ನೂ ತನಿಖೆ ನಡೆಸಿ ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ತಪ್ಪಿಸ್ತರಿಗೆ ಶಿಕ್ಷೆ ಕೊಡಿಸುತ್ತೇವೆ, ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುತ್ತೇವೆ ಎಂದು ಅವರು ಹೇಳಿದರು.
ಗ್ಯಾರಂಟಿ ಕಾರ್ಡ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಚರ್ಚೆ ಆಗಿದೆ, ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಎಲ್ಲ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ತಡೆಹಿಡಿದ ಸಿದ್ದರಾಮಯ್ಯ ಸರ್ಕಾರ
ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಕೊನೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿತ್ತು. ಹೈಕಮಾಂಡ್ ಇಬ್ಬರ ನಡುವೆ ಅಧಿಕಾರ ಹಂಚಿಕೆ ಸೂತ್ರ ರಚಿಸಿರುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ಅಭಿಪ್ರಾಯಪಟ್ಟಿದ್ದವು. ಆದರೆ, ಈ ವಿಚಾರವಾಗಿ ಎಐಸಿಸಿ ಅಧಿಕೃತ ಹೇಳಿಕೆಯನ್ನೇನೂ ನೀಡಿಲ್ಲ. ಈ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲವಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಎಂಬಿ ಪಾಟೀಲ್ ಅಧಿಕಾರ ಹಂಚಿಕೆ ಮಾತುಕತೆಯಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:14 pm, Mon, 22 May 23