ಪಟ್ಟಕ್ಕಾಗಿ ಫೈಟ್​​: ಡಿಕೆಶಿ ಅಸ್ತ್ರಕ್ಕೆ ಸಿದ್ದರಾಮಯ್ಯ ಬಣದಿಂದ ‘ಅಹಿಂದ’ ಬ್ರಹ್ಮಾಸ್ತ್ರ

ಸಿಎಂ ಕುರ್ಚಿ ವಿಚಾರಕ್ಕೆ ರಾಜ್ಯ ಕಾಂಗ್ರೆಸ್​​ನಲ್ಲಿ ತಿಕ್ಕಾಟ ಜೋರಾಗಿದೆ. ಇರೋ ಹುದ್ದೆಯನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡುತಿದ್ದರೆ, ಶತಾಯ ಗತಾಯ ಆ ಸ್ಥಾನ ಪಡೆಯಲೇ ಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಡಿಕೆಶಿ ಅಸ್ತ್ರಕ್ಕೆ ಸಿದ್ದರಾಮಯ್ಯ ಬಣ ಪ್ರಬಲ ಬ್ರಹ್ಮಾಸ್ತ್ರವೊಂದನ್ನ ಸಿದ್ಧಪಡಿಸಿದೆ. ಹೈಕಮಾಂಡ್​​ ಮೇಲೂ ಇದನ್ನೇ ಬಳಸಿ ಒತ್ತಡ ತರುವ ತಂತ್ರ ಹೆಣೆದಿದೆ.

ಪಟ್ಟಕ್ಕಾಗಿ ಫೈಟ್​​: ಡಿಕೆಶಿ ಅಸ್ತ್ರಕ್ಕೆ ಸಿದ್ದರಾಮಯ್ಯ ಬಣದಿಂದ ಅಹಿಂದ ಬ್ರಹ್ಮಾಸ್ತ್ರ
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​
Updated By: ಪ್ರಸನ್ನ ಹೆಗಡೆ

Updated on: Nov 27, 2025 | 3:41 PM

ಬೆಂಗಳೂರು, ನವೆಂಬರ್​​ 26: ಸಿಎಂ ಸ್ಥಾನದ ವಿಚಾರವಾಗಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​​ ನಡುವೆ ತಿಕ್ಕಾಟ ತಾರಕಕ್ಕೇರಿದೆ. ಈ ನಡುವೆ ಒಕ್ಕಲಿಗ ಸ್ವಾಮೀಜಿಗಳು ಡಿಕೆಶಿ ಪರ ಅಖಾಡಕ್ಕಿಳಿದಿದ್ದರೆ, ಇತ್ತ ಸಿದ್ದರಾಮಯ್ಯ ಪರ ಕುರುಬ ಮಠದ ಸ್ವಾಮೀಜಿಗಳೂ ಬೆಂಬಲಕ್ಕೆ ನಿಂತಿದ್ದಾರೆ. ಅದರ ಜೊತೆಗೆ ಸಿದ್ದರಾಮಯ್ಯ ಪರ ಇರುವ ಅಹಿಂದ ಸಮುದಾಯ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರೋದು ಸದ್ಯದ ಬೆಳವಣಿಗೆಗೆ ಹೊಸ ಟ್ವಿಸ್ಟ್​​ ಕೊಡುವ ಸಾಧ್ಯತೆ ಇದೆ.

ಶೋಷಿತ ವರ್ಗಗಳು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಹೀಗೆ ಅಹಿಂದ ಅನ್ನೋ ಈ ಶಕ್ತಿಯೇ ಸಿದ್ದರಾಮಯ್ಯ ಸಂಕಷ್ಟದಲ್ಲಿ ಸಿಲುಕಿದಾಗಲೆಲ್ಲ ಬೆನ್ನಿಗೆ ನಿಂತಿದೆ. ಅಹಿಂದ ನಾಯಕರಿಂದ ಕ್ಷೇತ್ರವಾರು ಅಹಿಂದ ಮತಗಳ ವರದಿ ತಯಾರಿಸಲಾಗಿದ್ದು, ಒಂದು ವೇಳೆ ಸಿದ್ದರಾಮಯ್ಯರ ಸ್ಥಾನಕ್ಕೆ ಚ್ಯುತಿ ತಂದರೆ ಅಹಿಂದ ವರ್ಗಗಳು ಕೈಕೊಡಬಹುದು ಎಂಬ ಸಂದೇಶ ರವಾನಿಸಲು  ಸಿದ್ಧತೆ ನಡೆದಿದೆ ಎನ್ನಲಾಗಿದೆ. 224 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಶೇ.80ರಷ್ಟು ಅಹಿಂದ ಮತಗಳಿವೆ. 42 ಕ್ಷೇತ್ರಗಳಲ್ಲಿ ಶೇ. 80ರಷ್ಟು ಅಹಿಂದ ಮತಗಳು ನಿರ್ಣಾಯಕ ಪಾತ್ರಬಹಿಸಲಿದ್ದು, 83ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶೇ. 70ರಷ್ಟು ಅಹಿಂದ ವೋಟರ್ಸ್​ ಇದ್ದಾರೆ. ಹಾಗೆಯೇ 49 ಕ್ಷೇತ್ರಗಳಲ್ಲಿ ಶೇ.60 ಕ್ಕಿಂತ ಹೆಚ್ಚು, 22 ಕ್ಷೇತ್ರಗಳಲ್ಲಿ ಶೇ.50 ಕ್ಕಿಂತ ಹೆಚ್ಚು ದಲಿತ, ಅಲ್ಪಸಂಖ್ಯಾತ ಮತಗಳಿವೆ ಎಂದು ವರದಿ ಹೇಳ್ತಿದೆ. 5 ಕ್ಷೇತ್ರಗಳಲ್ಲಿ ಶೇ.90ಕ್ಕೂ ಹೆಚ್ಚು ಇವರೇ ವೋಟರ್ಸ್​​ ಇದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿನ ದೆಹಲಿಗೆ ಕರೆಸಿ ಚರ್ಚೆ, ಮಹತ್ವದ ಅಪ್​ಡೇಟ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

2023ರ ಚುನಾವಣೆಗೂ ಮುನ್ನ ಸಿದ್ದರಾಮಯ್ಯರ ಶಕ್ತಿ ಎಂತಹದ್ದು ಎನ್ನುವುದು ಹೈಕಮಾಂಡ್​​ ಗಮನಕ್ಕೂ ಬಂದಿತ್ತು. ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ನೆಪ ಮಾಡಕೊಂಡು ದಾವಣಗೆರೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆದಿತ್ತು. ಅಂದು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದ ಅಹಿಂದ ನಾಯಕರನ್ನು ಕಂಡು ಸ್ವತಃ ರಾಹುಲ್​ ಗಾಂಧಿಯೇ ಆಶ್ಚರ್ಯ ಪಟ್ಟಿದ್ದರು. ಅಲ್ಲದೆ ಚುನಾವಣೆ ಗೆಲುವಿನಲ್ಲಿಯೂ ಅಹಿಂದ ವರ್ಗದ ಕೊಡುಗೆ ಇದೆ ಎಂದು ಮನಗಂಡೇ ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ಹೈಕಮಾಂಡ್​​ ಆಯ್ಕೆ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಅಹಿಂದ ಸಮುದಾಯ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಇದಕ್ಕೆ ಇಂಬು ಕೊಡುವಂತೆ ಸಿದ್ದರಾಮಯ್ಯ ಪರ ಒಗ್ಗಟ್ಟು ಪ್ರದರ್ಶನವನ್ನೂ ಅಹಿಂದ ಸಚಿವರು ಮಾಡಿದ್ದಾರೆ. ಇಂದು ಸಿಎಂ ಕಾವೇರಿ ನಿವಾಸದಲ್ಲಿ ಸತೀಶ್ ಜಾರಕಿಹೊಳಿ, ಪರಮೇಶ್ವರ್, ಮಹದೇವಪ್ಪ, ವೆಂಕಟೇಶ್, ರಾಜಣ್ಣ ಮತ್ತು ಕೆ.ಜೆ.ಜಾರ್ಜ್ ಸೇರಿದಂತೆ ಸಿಎಂ ಆಪ್ತ ಸಚಿವರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡಬೇಡಿ, ಅಹಿಂದ ಅಸ್ತ್ರದ ಮೂಲಕವೇ ಹೈಕಮಾಂಡ್ ಮೇಲೆ ಒತ್ತಡ ಹೇರೋಣ. ಅಹಿಂದರ ಬಿಟ್ಟರೆ ಕಾಂಗ್ರೆಸ್​​ಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡೋಣ ಎಂದು ಸಿದ್ದರಾಮಯ್ಯ ಅವರಿಗೆ ಸಚಿವರು ತಿಳಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.