AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಹಂಚಿಕೆ: ಸಿದ್ದರಾಮಯ್ಯ, ಡಿಕೆಶಿನ ದೆಹಲಿಗೆ ಕರೆಸಿ ಚರ್ಚೆ, ಮಹತ್ವದ ಅಪ್​ಡೇಟ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ಸಂಬಂಧಿಸಿ ಮಹತ್ವದ ಹೇಳಿಕೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿ ಚರ್ಚೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಇದರೊಂದಿಗೆ, ಸಮಸ್ಯೆ ಇರುವುದು ನಿಜ ಎಂದು ‘ಕೈ’ ಕಮಾಂಡ್ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ.

ಅಧಿಕಾರ ಹಂಚಿಕೆ: ಸಿದ್ದರಾಮಯ್ಯ, ಡಿಕೆಶಿನ ದೆಹಲಿಗೆ ಕರೆಸಿ ಚರ್ಚೆ, ಮಹತ್ವದ ಅಪ್​ಡೇಟ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ಪ್ರಸನ್ನ ಗಾಂವ್ಕರ್​
| Edited By: |

Updated on:Nov 27, 2025 | 11:55 AM

Share

ಬೆಂಗಳೂರು, ನವೆಂಬರ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಮೂರರಿಂದ ನಾಲ್ಕು ಮಂದಿ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ. ಇದರೊಂದಿಗೆ, ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಂದ ಮೊದಲ ಬಾರಿಗೆ ಅಧಿಕೃತ ಹೇಳಿಕೆಯೊಂದು ಹೊರಬಿದ್ದಂತಾಗಿದೆ. ಈವರೆಗೂ ಪ್ರಮುಖ ನಾಯಕರು ದೆಹಲಿಗೆ ಹೋಗಿದ್ದು, ಮಾತುಕತೆ ನಡೆದಿದ್ದು ಹಾಗೂ ಆಂತರಿಕ ಬೆಳವಣಿಗೆಗಳ ಬಗ್ಗೆ ವರದಿಯಾಗುತ್ತಿತ್ತೇ ವಿನಃ ಆ ಬಗ್ಗೆ ಅಧಿಕೃತವಾಗಿ ಹೈಕಮಾಂಡ್ ನಾಯಕರು ಹೇಳಿಕೆ ನೀಡಿರಲಿಲ್ಲ.

ದೆಹಲಿಗೆ ತೆರಳುವ ಮುನ್ನ ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿ ಮೂರ್ನಾಲ್ಕು ನಾಯಕರನ್ನು ದೆಹಲಿಗೆ ಕರೆಸುತ್ತೇವೆ. ಎಲ್ಲರೂ ಒಟ್ಟಿಗೆ ಕೂತು ಚರ್ಚೆ ನಡೆಸುತ್ತೇವೆ ಎಂದರು. ಕಾಂಗ್ರೆಸ್ ಹೈಕಮಾಂಡ್ ಎಂಬುದು ಏಕಾಂಗಿ ಅಲ್ಲ. ಅದೊಂದು ತಂಡ. ಹೈಕಮಾಂಡ್ ಒಟ್ಟಿಗೆ ಕುಳಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಆ ಸಭೆಯಲ್ಲಿ ರಾಹುಲ್ ಗಾಂಧಿ ಕೂಡ ಇರುತ್ತಾರೆ. ಮುಂದೆ ಏನು ಮಾಡಬೇಕೆಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

ಬುಧವಾರವಷ್ಟೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಪ್ಲೀಸ್ ವೇಟ್ ಎಂಬ ಸಂದೇಶ ಕಳುಹಿಸಿದ್ದರು. ಅದಾದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಮತ್ತೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿಗೆ ಬಂದ ನಂತರ ರಾಹುಲ್ ಗಾಂಧಿ ಜೊತೆ ಅವರು ಸುಮಾರು 25 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದರು.

ಮಾಧ್ಯಮ ಸೃಷ್ಟಿ ಎಂದಿದ್ದ ಕಾಂಗ್ರೆಸ್

ಅಧಿಕಾರ ಹಂಚಿಕೆ ಸಂಬಂಧ ಕಾಂಗ್ರೆಸ್​​ನಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬುದು ಕೇವಲ ಮಾಧ್ಯಮ ಸೃಷ್ಟಿಯಷ್ಟೆ. ಆ ತರದ ಯಾವುದೇ ಬೆಳವಣಿಗೆ ಇಲ್ಲ ಎಂದು ಕಾಂಗ್ರೆಸ್​ನ ಕೆಲವು ನಾಯಕರು ಸಮರ್ಥಿಸಿಕೊಂಡಿದ್ದರು. ಆದರೆ, ತೆರೆಯ ಮರೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುತ್ತಲೇ ಇದ್ದವು.

ಬಿಜೆಪಿ, ಮಾಧ್ಯಮದ ವಿರುದ್ಧ ಗೂಬೆಕೂರಿಸಿದ್ದ ರಣದೀಪ್ ಸುರ್ಜೇವಾಲ

ಕರ್ನಾಟಕ ರಾಜಕೀಯದಲ್ಲಿ ನಡೆಯುತ್ತಿರುವ ನವೆಂಬರ್​ ಕ್ರಾಂತಿಯ ಚರ್ಚೆ ಪ್ರತಿಪಕ್ಷ ಬಿಜೆಪಿಯ ಅಪಪ್ರಚಾರ ಮತ್ತು ಮಾಧ್ಯಮ ಸೃಷ್ಟಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಕೆಲವು ದಿನಗಳ ಹಿಂದೆ ಹೇಳಿದ್ದರು. ಮಾಧ್ಯಮದ ಒಂದು ಭಾಗವು ರಾಜ್ಯ ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಜೊತೆ ಚರ್ಚೆ ನಡೆಸಲಾಗಿದ್ದು, ಅಪಪ್ರಚಾರದ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ, ಸರ್ಕಾರದ ಭರವಸೆ ದುರ್ಬಲಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಸುರ್ಜೇವಾಲ ಎಕ್ಸ್ ಸಂದೇಶದ ಮೂಲಕ ಹೇಳಿದ್ದರು.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಆದರೆ, ಬುಧವಾರ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ದೆಹಲಿಯಿಂದಲೇ ಕರ್ನಾಟಕದ ಸಮಸ್ಯೆಗಳಿಗೆ ಔಷಧಿ ನೀಡುತ್ತೇವೆ. ಹೈಕಮಾಂಡ್‌ನಲ್ಲಿ ನಾನಿದ್ದೇನೆ, ರಾಹುಲ್ ಗಾಂಧಿ ಇದ್ದಾರೆ, ಅಧಿನಾಯಕಿ ಸೋನಿಯಾ ಗಾಂಧಿ ಇದ್ದಾರೆ. ನಾವೆಲ್ಲ ಕುಳಿತು ಯೋಚಿಸಿ, ಏನು ಮಾಡಬೇಕು, ಯಾವ ಪರಿಹಾರ ನೀಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಹೇಳಿದ್ದರು. ಆ ಮೂಲಕ ಕರ್ನಾಟಕ ಕಾಂಗ್ರಸ್​​​ನಲ್ಲಿ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್​​ ಬಣ ಬಡಿದಾಟಕ್ಕೆ ಸುರ್ಜೇವಾಲ ತೇಪೆ: ಮಾಧ್ಯಮಗಳ ಮೇಲೂ ಗೂಬೆ ಕೂರಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ

ಇದೀಗ ಸಿಎಂ, ಡಿಸಿಎಂ ಸೇರಿ ಪ್ರಮುಖ ಮೂರ್ನಾಲ್ಕು ಮಂದಿ ನಾಯಕರನ್ನು ದೆಹಲಿಗೆ ಕರೆಸಿ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷರೇ ಅಧಿಕೃತ ಹೇಳಿಕೆ ನೀಡಿದ್ದಾರೆ. ಇದು, ರಾಜ್ಯ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ನಿರೂಪಿಸಿದಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Thu, 27 November 25