ಬೆಂಗಳೂರು: ಕರ್ನಾಟಕದಲ್ಲಿ ಹಿಂದಿನ ಬಿಜೆಪಿ (BJP) ನೇತೃತ್ವದ ಸರ್ಕಾರವು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದ ಎಲ್ಲಾ ನೌಕರಿಗಳನ್ನು ಈಗಿನ ಕಾಂಗ್ರೆಸ್ (Congress)ಸರ್ಕಾರ ವಜಾಗೊಳಿಸಿದೆ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (praveen nettaru) ಅವರ ಪತ್ನಿಯೂ ಕೂಡ ಕೆಲಸ ಕಳೆದುಕೊಂಡಿದ್ದರು. ಆದರೆ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರಿಗೆ ಗ್ರೂಪ್ ಸಿ ಹುದ್ದೆಗೆ ಮರುನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಈ ಕುರಿತಾಗಿ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಮಾಹಿತಿ ಮಾಡಿದ್ದಾರೆ.
ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತಾತ್ಕಾಲಿಕ ಹುದ್ದೆ ನೀಡುವ ಮೂಲಕ ಪ್ರವೀಣ್ ನೆಟ್ಟಾರು ಪತ್ನಿಗೆ ಬಿಜೆಪಿ ಮೋಸ ಮಾಡಿದೆ: ರಾಮಲಿಂಗಾ ರೆಡ್ಡಿ ಕಿಡಿ
ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಮಾನವೀಯ ದೃಷ್ಠಿಯಿಂದ 2022 ರ ಸೆ.22 ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೂತನ ಕುಮಾರಿಯನ್ನು ನೇಮಕ ಮಾಡಿತ್ತು. ಈ ಹಿನ್ನೆಲೆ ನೂತನ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಛೇರಿಯ ಪ್ರಾಕೃತಿಕ ವಿಕೋಪ ವಿಭಾಗದದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇದೀಗ ಹೊಸ ಸರ್ಕಾರ ಬಂದಿದ್ದು ನೂತನ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ ಘಟನೆ ಬಳಿಕ ಕಾರ್ಯಕರ್ತರ ಆಕ್ರೋಶ ಬಿಜೆಪಿ ಮುಖಂಡರ ಕಡೆಗೆ ತಿರುಗಿತ್ತು. ಈ ವೇಳೆ ಘಟನೆಯ ಸಮಗ್ರ ತನಿಖೆಯನ್ನು ಅಂದಿನ ಬಿಜೆಪಿ ಸರ್ಕಾರ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ವಹಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:22 pm, Sat, 27 May 23