ಪ್ರವೀಣ್ ನೆಟ್ಟಾರು ಪತ್ನಿ ನೌಕರಿ ರದ್ದು: ದಕ್ಷಿಣ ಕನ್ನಡ ಡಿಸಿ ಹೇಳಿದ್ದೇನು? ಬಿಜೆಪಿಗೆ ರೂಲ್ಸ್ ಹೇಳಿಕೊಟ್ಟ ಕಾಂಗ್ರೆಸ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಎಲ್ಲಾ ಮೃತ ಪ್ರವೀಣ್ ನೆಟ್ಟಾರು ಪತ್ನಿಗೆ ನೀಡಲಾಗಿದ್ದ ಗುತ್ತಿಗೆ ನೌಕರಿ ರದ್ದಾಗಿದೆ.ಇದರಿಂದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಕಾಂಗ್ರೆಸ್ ಸಹ ರೂಲ್ಸ್ ಹೇಳಿಕೊಟ್ಟ ತಿರುಗೇಟು ನೀಡಿದೆ. ಇನ್ನು ದಕ್ಷಿಣ ಕನ್ನಡ ಡಿಸಿ ಹೇಳಿದ್ದೇನು? ನೋಡಿ.
ಬೆಂಗಳೂರು: ಕರ್ನಾಟಕದಲ್ಲಿ ಹಿಂದಿನ ಬಿಜೆಪಿ (BJP) ನೇತೃತ್ವದ ಸರ್ಕಾರವು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದ ಎಲ್ಲಾ ನೌಕರಿಗಳನ್ನು ಈಗಿನ ಕಾಂಗ್ರೆಸ್ (Congress)ಸರ್ಕಾರ ವಜಾಗೊಳಿಸಿದೆ. ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಇತ್ತೀಚೆಗೆ ಆದೇಶ ಹೊರಡಿಸಿತತ್ಉ. ಈ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಗೊಂಡಿದ್ದ ಕೊಲೆಗೀಡಾಗಿರುವ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು(praveen nettaru) ಅವರ ಪತ್ನಿಯೂ ಕೆಲಸ ಕಳೆದುಕೊಂಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರ ವಿರುದ್ಧ ಮುಗಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಹ ಇದಕ್ಕೆ ಪ್ರತಿಕ್ರಿಯಿಸಿ ಬಿಜೆಪಿಗೆ ತಿರುಗೇಟು ನೀಡಿದೆ.
ಇದನ್ನೂ ಓದಿ: ಹೊಸ ಸರ್ಕಾರ ಅಸ್ವಿತ್ವಕ್ಕೆ ಬಂದ ಬೆನ್ನಲ್ಲೇ ಪ್ರವೀಣ್ ನೆಟ್ಟಾರು ಪತ್ನಿ ನೇಮಕಾತಿ ರದ್ದು
ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಭ್ರಷ್ಟಾಚಾರವೇ ಕುಲದೈವ ಎಂದು ನಂಬಿರುವ ಬಿಜೆಪಿಗೆ ನೀತಿ ನಿಯಮಗಳನ್ನು ಅಧ್ಯಯನ ಮಾಡಲು ಆಸಕ್ತಿ ಮತ್ತು ಸಮಯ ಇರಲು ಸಾಧ್ಯವೇ? ನಿಯಮದ ಪ್ರಕಾರ ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ. ಬದುಕಿಗೆ ಶಾಶ್ವತ ದಾರಿ ತೋರಿಸದೆ ಇಂತಹ ಪೇಪರ್ ಚಾಕ್ಲೆಟ್ ನೀಡುವ ಮೂಲಕ ಬಿಜೆಪಿ ಪ್ರವೀಣ್ ಪತ್ನಿಗೆ ದ್ರೋಹವೆಸಗಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದೇನು?
ಈ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಮಾತನಾಡಿ, ಸರಕಾರ ಬದಲಾದಾಗ ಹಿಂದಿನ ಎಲ್ಲ ತಾತ್ಕಾಲಿಕ ನೇಮಕಾತಿಗಳು ಸ್ವಾಭಾವಿಕವಾಗಿ ರದ್ದಾಗುತ್ತವೆ. ಕೆಲಸದಿಂದ ಬಿಡುಗಡೆ ಮಾಡುವ ವಿಚಾರವನ್ನು ನೂತನ್ ಕುಮಾರಿ ಅವರ ಗಮನಕ್ಕೆ ತರಲಾಗಿದೆ. ಆಕೆ ತಮ್ಮನ್ನು ಮುಂದುವರಿಸಲು ಡಿಸಿ ಕಚೇರಿಗೆ ಪತ್ರ ಸಲ್ಲಿಸಿದರೆ, ಅದನ್ನು ಸರ್ಕಾರಕ್ಕೆ ಪರಿಗಣನೆಗೆ ತರಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ಹುದ್ದೆ ನೀಡಿದ್ದ ಬಿಜೆಪಿ ಸರ್ಕಾರ
ಸೆಪ್ಟೆಂಬರ್ 29, 2022 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಪ್ರವೀಣ್ ಅವರ ಪತ್ನಿ ನೂತನ್ ಕುಮಾರಿ ಎಂ ಅವರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ‘ಗ್ರೂಪ್ ಸಿ’ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು. ಅವರ ನೇಮಕಾತಿಯ ಅಧಿಸೂಚನೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವವರೆಗೆ ಅಥವಾ ಅವರ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಹೊಸ ಆದೇಶ ಹೊರಡಿಸುವವರೆಗೆ ಅವರು ಸೇವೆಯಲ್ಲಿರುತ್ತಾರೆ ಎಂದು ತಿಳಿಸಲಾಗಿತ್ತು.
ನೂತನ್ ಕುಮಾರಿ ಅವರು ಕೋರಿಕೆಯ ಮೇರೆಗೆ ಅಕ್ಟೋಬರ್ 13 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಇಲಾಖೆಗೆ ಸೇರಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನಡೆದ ಎಲ್ಲಾ ನೇಮಕಾತಿಗಳನ್ನು ಸ್ಥಗಿತಗೊಳಿಸಲಾಗಿದೆ. ಅದರಂತೆ ನೂತನ್ ಕುಮಾರಿ ಕೂಡ ಕೆಲಸ ಕಳೆದುಕೊಂಡಿದ್ದಾರೆ. ಮುಂದೆ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 5:46 pm, Sat, 27 May 23