ನನ್ನಿಂದ ಸೋತಿದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು: ಇಂದ್ರೇಶ್ ಆರೋಪ ತಳ್ಳಿ ಹಾಕಿದ ಸಂಸದೆ ಸುಮಲತಾ
ಮೇಲುಕೋಟೆಯಲ್ಲಿ ಬಿಜೆಪಿ ಸೋಲಿಗೆ ಪರೋಕ್ಷವಾಗಿ ಸಂಸದೆ ಸುಮಲತಾ ಕಾರಣ ಎಂಬ ಪರಾಜಿತ ಬಿಜೆಪಿ ಅಭ್ಯರ್ಥಿ ಇಂದ್ರೇಶ್ ಆರೋಪಕ್ಕೆ ಸುಮಲತಾ ಹೇಳಿಕೆ ನೀಡಿದ್ದಾರೆ.
ಮಂಡ್ಯ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಬೆಂಬಲಿತ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆದ್ದು ಬೀಗಿದ್ದಾರೆ. ಆದರೆ ದರ್ಶನ್ ಗೆಲುವಿಗೆ ಪರೋಕ್ಷವಾಗಿ ಸಂಸದೆ ಸುಮಲತಾ (Sumalatha Ambareesh) ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಈ ಆರೋಪವನ್ನ ಸ್ವತಃ ಬಿಜೆಪಿ ಅಭ್ಯರ್ಥಿ ಇಂದ್ರೇಶ್ ಮಾಡಿದ್ದರು. ಸದ್ಯ ಈ ವಿಚಾರವಾಗಿ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅವರ ಹೇಳಿಕೆ ಬಗ್ಗೆ ನಾನು ಮಾತಾಡಲು ಇಷ್ಟಪಡುವುದಿಲ್ಲ. ಮ್ಯಾಚ್ ಫಿಕ್ಸಿಂಗ್ ಎನ್ನುವ ಅಗತ್ಯ ನನಗೆ ಇಲ್ಲ ಎಂದು ಹೇಳಿದರು.
ನಾನು ಯಾವಾಗಲೂ ಪ್ರತ್ಯಕ್ಷವಾಗಿ ನೇರವಾಗಿ ಮಾತನಾಡಿದ್ದೇನೆ. ನಾನು ಪಕ್ಷದ ವರಿಷ್ಠರ ಜೊತೆ ಮೊದಲಿಂದ ಹೇಳಿದ್ದು, ಅವರು ಒಪ್ಪಿಕೊಂಡಿದ್ದರು. ನನಗೆ ಯಾವುದೇ ನಿರ್ಬಂಧವನ್ನು ಹೇರಿರಲಿಲ್ಲ. ಪಾಂಡವಪುರ ಕ್ಷೇತ್ರದ ಬಗ್ಗೆ ನನ್ನ ನಿಲುವನ್ನು ತಿಳಿಸಿದ್ದೇನೆ. ಇಂದ್ರೇಶ್ ಹಾಗೂ ಪಕ್ಷದ ನಡುವೆ ಇರುವ ಪ್ರಶ್ನೆ ನನಗೆ ಕೇಳುವ ಅಗತ್ಯವಿಲ್ಲ, ಅವರ ಲೀಡರ್‌ನ್ನು ಕೇಳಿಕೊಳ್ಳಬೇಕು. ಈ ರೀತಿ ಬಾಲಿಶ ಹೇಳಿಕೆ ಕೊಡಬಾರದು ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೋಲಿಗೆ ಸಂಸದೆ ಸುಮಲತಾ ಪರೋಕ್ಷ ಕಾರಣ: ಅಭ್ಯರ್ಥಿ ಡಾ ಇಂದ್ರೇಶ್ ಆರೋಪ
ಸೋಲಿನ ವಿಚಾರವಾಗಿ ಅವರು ಈ ರೀತಿ ಹೇಳುತ್ತಿದ್ದಾರೆ. ಪಾಂಡವಪುರದಲ್ಲಿ ನಾನು ಬೆಂಬಲ ಕೊಟ್ಟರೆ ಅವರು ಗೆಲ್ಲೋದು ಏನು ಅವರಿಗೆ ಗೊತ್ತು. ನನ್ನಂದಿ ಸೋತಿದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಕಿಡಿಕಾರಿದ್ದಾರೆ.
ಡಾ. ಇಂದ್ರೇಶ್ ಆರೋಪ ಏನು
ಮೇಲುಕೋಟೆಯಲ್ಲಿ ಬಿಜೆಪಿ ಸೋಲಿಗೆ ಪರೋಕ್ಷವಾಗಿ ಸಂಸದೆ ಕಾರಣ ಎಂದು ಸುಮಲತಾ ವಿರುದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಡಾ. ಇಂದ್ರೇಶ್ ಆರೋಪ ಮಾಡಿದ್ದರು. ಚುನಾವಣಾ ಪ್ರಚಾರ ವೇಳೆ ದರ್ಶನ್ ಪುಟ್ಟಣ್ಣಯ್ಯ ಗೆಲ್ಲಬೇಕು ಎಂದು ಸುಮಲತಾ ಹೇಳಿದ್ದರು. ಅವರ ಹೇಳಿಕೆ ಬಳಿಕ ನಮ್ಮ ಕ್ಷೇತ್ರದಲ್ಲಿ ಬದಲಾವಣೆ ಆಯ್ತು. ಸಿಎಂ ಇಂಟೆಲಿಜೆನ್ಸ್ ಪ್ರಕಾರ 38 ಸಾವಿರ ವೋಟ್ ಬರಬೇಕಿತ್ತು. ಪುಟ್ಟರಾಜು ಗೆಲ್ತಾರೆ ಅನ್ನೋ ಭಯದಿಂದ ನನಗೆ ಮತ ಕಡಿಮೆ ಆಗಿದೆ. ಈ ಬಾರಿ ದರ್ಶನ್ ಬೆಂಬಲಿಸ್ತೇವೆ ದಯಮಾಡಿ ಕ್ಷಮಿಸಿ ಅಂತಾ ಹೇಳಿದ್ದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಅಂತಾ ಹೇಳಿ, ಸುಮಲತಾ ಹೇಳಿಕೆಯಿಂದ ಆರೇಳು ದಿನಕ್ಕೆ ಮತ ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ. ಸುಮಲತಾ ಕೆಲಸವನ್ನ ನಮ್ಮ ಕಾರ್ಯಕರ್ತರು ಕೂಡ ಒಪ್ಪಲ್ಲ. ಪಕ್ಷದ ರಾಜ್ಯಮಟ್ಟದ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.