Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ಗೆ ಮರು ಸೇರ್ಪಡೆಗೆ ಬೆಂಬಲಿಗರ ಮನವಿ, ಸಮಯ ಕೇಳಿದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್

ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊಗಳಿದ್ದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್, ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಲು ಬಯಸಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಬೆಂಬಲಿಗರ ಜೊತೆ ಸಭೆ ನಡೆಸಿದ ಅವರಿಗೆ ಕಾಂಗ್ರೆಸ್​ಗೆ ಮರು ಸೇರ್ಪಡೆಯಾಗುವಂತೆ ಕೆಲವರು ಮನವಿ ಮಾಡಿದ್ದಾರೆ. ಆದರೆ, ಇವರು ಮೂರ್ನಾಲ್ಕು ದಿನಗಳ ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್​ಗೆ ಮರು ಸೇರ್ಪಡೆಗೆ ಬೆಂಬಲಿಗರ ಮನವಿ, ಸಮಯ ಕೇಳಿದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್
ಯಶವಂತಪುರ ಬಿಜೆಪಿ ಶಾಸಕ ಎಸ್​.ಟಿ.ಸೋಮಶೇಖರ್
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on:Aug 17, 2023 | 3:09 PM

ಬೆಂಗಳೂರು, ಆಗಸ್ಟ್ 17: ಇತ್ತೀಚೆಗಷ್ಟೇ ಡಿಸಿಎಂ ಡಿ.ಕೆ. ಶಿವಕುಮಾರ್ (D.K.Shivakumar) ಅವರನ್ನು ಹೊಗಳಿದ್ದ ಯಶವಂತಪುರ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ (S.T.Somashekhar), ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಲು ಬಯಸಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಬೆಂಬಲಿಗರ ಜೊತೆ ಸಭೆ ನಡೆಸಿದ ಅವರು, ಬಿಜೆಪಿಯೊಳಗಿನ ಸಮಸ್ಯೆಯನ್ನು ವರಿಷ್ಠರ ಜತೆ ಮಾತಾಡಿ ಸರಿಪಡಿಸುವೆ, ಹೀಗಾಗಿ ಸ್ವಲ್ಪ ಸಮಯ ಕೊಡಿ ಎಂದಿದ್ದಾರೆ.

ಹಾರೋಹಳ್ಳಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಎಸ್​ಟಿ ಸೋಮಶೇಖರ್ ಸಭೆಯಲ್ಲಿ 50 ಕ್ಕೂ ಹೆಚ್ಚು ಬೆಂಬಲಿಗರು ಭಾಗಿಯಾಗಿದ್ದಾರೆ. ಅಲ್ಲದೆ, ನೆಲಮಂಗಲ ಕಾಂಗ್ರೆಸ್ ಶಾಸಕ ಎನ್. ಶ್ರೀನಿವಾಸ್ ಕೂಡಾ ಭಾಗಿಯಾಗಿರುವುದನ್ನು ನೋಡಿದರೆ, ಸೋಮಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂದು ಕೇಳಿಬರುತ್ತಿರುವ ಮಾತುಗಳಿಗೆ ಪುಷ್ಟಿ ನೀಡಿದಂತಿದೆ.

ಮೂಲ ಬಿಜೆಪಿಗರು ಎಸ್​ಟಿ ಸೋಮಶೇಖರ್ ಅವರು ಬಿಜೆಪಿಯಲ್ಲಿ ಬೆಳೆಯಲು ಬಿಡುತ್ತಿಲ್ಲ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಚಿಕ್ಕರಾಜು ಎಂದು ಆರೋಪಿಸಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು, ಸ್ಥಳೀಯ ಬಿಜೆಪಿಯವರು ಬೆಳೆಯಲು ಬಿಡುತ್ತಿಲ್ಲ. ನೀವು ಗೆಲ್ಲಲೂ ಅವರು ಕೆಲಸ ಮಾಡಲ್ಲ ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋಗೋಣ ಎಂದು ಸಭೆಯಲ್ಲಿ ಹೇಳಿದ್ದೇವೆ. ಎರಡು ದಿನ ಸುಮ್ಮನಿರಿ‌, ಬಿಜೆಪಿ ವರಿಷ್ಠರ ಜೊತೆ ಮಾತಾಡಿ ಸರಿಪಡಿಸುತ್ತೇನೆ ಎಂದು ಸೋಮಶೇಖರ್ ಹೇಳಿದ್ದಾರೆ. ಮೂರು ನಾಲ್ಕು ದಿನದಲ್ಲಿ‌ ತೀರ್ಮಾನ ತಿಳಿಸದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದ ಸೋಮಶೇಖರ್, ಪಕ್ಷ ಬಿಡುವ ಪ್ರಶ್ನೆ ಇಲ್ಲ, ಬಂದು ಮಾತಾಡುತ್ತೇನೆ ಎಂದಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ ಎಂದಿದ್ದಾರೆ. ಅಲ್ಲದೆ, ಡಿಸಿಎಂ ನಮ್ಮ ಕ್ಷೇತ್ರದಲ್ಲಿ ಬಂದ ಬಳಿಕ ಏನೇನು ಬೆಳವಣಿಗೆ ಆಗಿದೆ ಅಂತಾ ಸಭೆಯಲ್ಲಿ ಬೆಂಬಲಿಗರಿಗೆ ಮಾಹಿತಿ ಕೊಟ್ಟಿದ್ದೇನೆ. ಆಗಿರುವ ಸಮಸ್ಯೆಗಳನ್ನು ಸರಿಪಡಿಸುವ ಬಗ್ಗೆ ವರಿಷ್ಠರು ಭರವಸೆ ಕೊಟ್ಟಿದ್ದೇನೆ, ಕಾಯೋಣ ಎಂದು ಬೆಂಬಲಿಗರಿಗೆ ಹೇಳಿದ್ದಾಗಿ ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ನತ್ತ ಮುಖ ಮಾಡಿದ್ರಾ ಶಾಸಕ ಎಸ್​ಟಿ ಸೋಮಶೇಖರ್? ಕಟೀಲ್, ಸಿಟಿ ರವಿ ಮೇಲಿಂದ ಮೇಲೆ ಕಾಲ್

ಚುನಾವಣೆಗೆ ಮುನ್ನ ನನ್ನ ವಿರುದ್ಧ ಮಾತಾಡಿದ್ದು, ಹಣ ಹಂಚಿದ್ದು ಎಲ್ಲಾ ಇದೆ. ಆದರೆ ಇದರ ವಿರುದ್ಧ ಯಾವ ಕ್ರಮವೂ ಆಗಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಒಂದು ಸಭೆ ಆಗಿದ್ದಾಗ ಕೂಡಾ ಇದರ ಬಗ್ಗೆ ನಾನು ಪ್ರಸ್ತಾಪ ಮಾಡಿದ್ದೆ. ನನ್ನ ಸೋಲಿಸಬೇಕು ಅಂತಾ ಹಣ ಹಂಚಿದವರೇ 10 ದಿನಗಳ ಹಿಂದೆ ನನ್ನ ಫೋಟೋ ಹಾಕಿಕೊಂಡು ಅವರ ಹುಟ್ಟುಹಬ್ಬ ಮಾಡಿದ್ದಾರೆ. ಇದನ್ನು ನಮ್ಮ ಬೆಂಬಲಿಗರು ಪ್ರಶ್ನೆ ಮಾಡಿದ್ದಕ್ಕೆ ಇಷ್ಟೆಲ್ಲಾ ಅವಾಂತರ ಆಗಿದೆ. ಈ ವಾತಾವರಣದಲ್ಲಿ ನಾನು ಪಕ್ಷದ ಸಂಘಟನೆ ಹೇಗೆ ಮಾಡಲಿ ಎಂದು ಪ್ರಶ್ನಿಸಿದರು.

ನನ್ನ ವಿರುದ್ಧ ಷಡ್ಯಂತರ ಮಾಡಿದ್ದವರು ಈಗ ಯಾವುದೇ ಪದಾಧಿಕಾರಿ ಅಲ್ಲ. ಅವರಿಗೆ ಎಚ್ಚರಿಕೆ ಕೊಡಿ ಎಂಬುದು ಅಷ್ಟೇ ನನ್ನ ಬೇಡಿಕೆ. ನನಗೂ ಮಾಜಿ ಸಚಿವ ವಿ. ಸೋಮಣ್ಣ ಫೋನ್ ಮಾಡಿದ್ದರು. ನಾನು ದೂರು ಕೊಟ್ಟಿದ್ದೇನೆ, ನೀನು ಕೂಡಾ ಲಿಖಿತ ದೂರು ಕೊಡು ಅಂತಾ ಹೇಳಿದ್ದರು. ಎಲ್ಲವನ್ನೂ ಸರಿಪಡಿಸುತ್ತೇನೆ ಅಂತಾ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅಲ್ಲಿಯವರೆಗೂ ಯಾವುದೇ ನಿರ್ಧಾರ ಮಾಡಬೇಡಿ ಎಂದು ಸಭೆಯಲ್ಲಿ ಹೇಳಿದ್ದಾಗಿ ತಿಳಿಸಿದರು.

ಶಾಸಕ ಶ್ರೀನಿವಾಸ್ ನನ್ನ ಕ್ಷೇತ್ರದವರು. ಅವರ ಚಿಕ್ಕನಳ್ಳಿ ಗ್ರಾಮ ಪಂಚಾಯತ್ ಸಮಸ್ಯೆ ಬಗ್ಗೆ ಮಾತಾಡಲು ಬಂದಿದ್ದರು. ಅವರು ಬಂದಿದ್ದು, ಇಂದು ನಮ್ಮ ಬೆಂಬಲಿಗರು ಬಂದಿದ್ದು ಕಾಕತಾಳೀಯ ಎಂದು ಎಸ್​ಟಿ ಸೋಮಶೇಖರ್ ಹೇಳಿದ್ದಾರೆ.

ಬೆಂಬಲಿಗರು ಕಾಂಗ್ರೆಸ್​ಗೆ ಹೋಗಲ್ಲ

ಎಲ್ಲರ ಮೇಲೆ ನಾವು ವಿಶ್ವಾಸ ಇಡಬೇಕಾಗುತ್ತದೆ. ಕಾಂಗ್ರೆಸ್​ನಲ್ಲಿದ್ದಾಗ ಕಾಂಗ್ರೆಸ್​ಗೇ ಕೆಲಸ ಮಾಡಿದ್ದೇನೆ, ಬಿಜೆಪಿಯಲ್ಲಿ ಬಿಜೆಪಿಗೆ ಕೆಲಸ ಮಾಡಿದ್ದೇನೆ. ನನ್ನ ಪ್ರಕಾರ ಯಾರೂ ಬೆಂಬಲಿಗರು ಕಾಂಗ್ರೆಸ್​ಗೆ ಹೋಗಲ್ಲ ಎಂದು ಹೇಳಿದ ಸೋಮಶೇಖರ್, ಬಿಜೆಪಿಯಲ್ಲಿ ಎರಡು ಸುದ್ದಿಗೋಷ್ಠಿ ಹೊರತುಪಡಿಸಿ ಎಲ್ಲಾ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

ಯಾಕೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬದಲಾಗಿದ್ದೀರಿ, ಕುಡಿಯುವ ನೀರಿನ ಬಗ್ಗೆ ಭಿಕ್ಷೆ ಕೇಳಬೇಕಾ ಎಂದು ತುಷಾರ್ ಗಿರಿನಾಥ್​ಗೆ ಕೇಳಿದ್ದೇನೆ. ಇಂದು ಬೆಳಗ್ಗೆ ರಾಕೇಶ್ ಸಿಂಗ್​ಗೂ ರೇಗಿದ್ದೇನೆ. ಇವತ್ತಿನವರೆಗೂ ಒಂದು ರೂಪಾಯಿ ಅನುದಾನ ಬಂದಿಲ್ಲ ಎಂದು ಸೋಮಶೇಖರ್ ಅಸಮಾಧಾನ ಹೊರಹಾಕಿದ್ದಾರೆ.

ಪರಮೇಶ್ವರ್​ ಹೇಳಿಕೆಗೆ ಸೋಮಶೇಖರ್ ತಿರುಗೇಟು

ಕಾಂಗ್ರೆಸ್​ಗೆ ಬಂದರೆ ಫಸ್ಟ್ ಬೆಂಚ್ ಸಿಗಲ್ಲ ಎಂಬ ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಸೋಮಶೇಖರ್, ಪರಮೇಶ್ವರ್ ಕರೆಕ್ಟ್ ಆಗಿ ಇರುತ್ತಿದ್ದರೆ ಅವರಿಗೆ ಫಸ್ಟ್ ಬೆಂಚ್ ಸಿಗುತ್ತಿತ್ತು. ಡಿಸಿಎಂ ಆಗಿದ್ದವರು ಈಗ ಎಲ್ಲಿದ್ದಾರೆ? ನಾನು ಇಲ್ಲಿ ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ, ಆರಾಮಾಗಿ ಇದ್ದೇನೆ ಎಂದರು.

ಸ್ಥಳೀಯವಾಗಿ ನನ್ನ ವಿರುದ್ಧ ಕೆಲಸ : ಎಸ್​ಟಿ ಸೋಮಶೇಖರ್

ನಾನು ಬಿಜೆಪಿ ಶಾಸಕ. ಕಾಂಗ್ರೆಸ್ ಅವಧಿಯಲ್ಲಿ ಎರಡು ಬಾರಿ ಶಾಸಕನಾಗಿದ್ದೆ, ಆಗ ಅನುದಾನ ಕೊಟ್ಟಿದ್ದರು ಅಂತಾ ಮುಖ್ಯಮಂತ್ರಿ ಬಗ್ಗೆ ಎರಡು ಒಳ್ಳೆಯ ಮಾತಾಡಿದ್ದೇನೆ. ಕಳೆದ ಮೂರು ತಿಂಗಳಿನಿಂದ ನನ್ನ ಕ್ಷೇತ್ರದಲ್ಲಿ ಅನುದಾನ ಇಲ್ಲದೇ ಕೆಲಸ ಮಾಡಲು ಆಗಿಲ್ಲ. ರಾಜ್ಯಮಟ್ಟ, ಜಿಲ್ಲಾ ಮಟ್ಟದಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಸ್ಥಳೀಯವಾಗಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಡಿ.ಕೆ.ಶಿವಕುಮಾರ್ ಜೊತೆ ರಾಜಕೀಯ ಮಾತುಕತೆ ಮಾಡಿಲ್ಲ: ಸೋಮಶೇಖರ್

ನಾನು ಕಾಂಗ್ರೆಸ್​ಗೆ ಹೋಗುತ್ತೇನೆ ಅಂತಾ ಬೆಂಬಲಿಗರ ಜೊತೆ ಮಾತನಾಡಿಲ್ಲ. ಡಿ.ಕೆ. ಶಿವಕುಮಾರ್ ಜೊತೆ ರಾಜಕೀಯ ಮಾತುಕತೆ ಮಾಡಿಲ್ಲ. ನನ್ನ ವಿರುದ್ಧ ಕೆಲಸ ಮಾಡಿದವರು ಇದೆಲ್ಲಾ ಕ್ರಿಯೇಟ್ ಮಾಡಿದ್ದಾರೆ. ನನಗೆ ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ ಅಂತಾ ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ‌, ಸಿ.ಟಿ. ರವಿಗೆ ಹೇಳಿದ್ದೇನೆ ಎಂದರು.

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬಗ್ಗೆ ನಾಲ್ಕು ಒಳ್ಳೆಯ ಮಾತಾಡುವಂತೆಯೇ ಇಲ್ವಾ? ಬರೀ ನೆಗೆಟಿವ್ ಮಾತಾಡಬೇಕು ಅಂದರೆ ಹೇಗೆ ಎಂದು ಪ್ರಶ್ನಿಸಿದ ಸೋಮಶೇಖರ್, ಉಸ್ತುವಾರಿ ಸಚಿವನಾಗಿದ್ದಾಗ ಮೈಸೂರಿಗೆ ಹೋಗಿದ್ದಾಗ ಜಿ.ಟಿ. ದೇವೇಗೌಡರನ್ನೂ ಹೊಗಳಿದ್ದೇನೆ. ಈಗ ಶಿವಕುಮಾರ್ ಉಸ್ತುವಾರಿ ಸಚಿವ ಇಲ್ಲದಿರುತ್ತಿದ್ದರೆ ಅವರನ್ನೂ ಭೇಟಿ ಮಾಡುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಬಿಜೆಪಿಯಲ್ಲಿ ಮುಂದೆಯೂ ಇರುತ್ತೇನೆ, ಅದರಲ್ಲಿ ಅನುಮಾನವಿಲ್ಲ ಎಂದರು.

ಸ್ಥಳೀಯವಾಗಿ ಕೆಲವರು ನನ್ನನ್ನು ಪಕ್ಷದಿಂದ ಕಳಿಸುವುದಕ್ಕೇ ಮಾಡುತ್ತಿದ್ದಾರೆ. ಡಿ.ಕೆ‌. ಶಿವಕುಮಾರ್ ಹತ್ತಿರವೂ ಮಾತಾಡಿಲ್ಲ, ಯಾರ ಹತ್ತಿರವೂ ನಾನು ಮಾತಾಡಿಲ್ಲ. ಕ್ಷೇತ್ರದ ಸಮಸ್ಯೆ ಬಗ್ಗೆ ಮೂರು ತಿಂಗಳು ಕಾದು ಶಿವಕುಮಾರ್ ಭೇಟಿ ಮಾಡಿದ್ದೇನೆ. ನನ್ನ ವಿರುದ್ಧ ಮಾಡುತ್ತಿರುವವರು ಕೂಡಾ ಯಾರೂ ಮೂಲ ಬಿಜೆಪಿಗರಲ್ಲ. ಅವರೂ ನನ್ನಂತೆ ಕಾಂಗ್ರೆಸ್​ನಿಂದ ಬಂದಿರುವ ಗಿರಾಕಿಗಳೇ. ಬೆಂಬಲಿಗರು ಯಾರೂ ಕೂಡಾ ನನಗೆ ಪಕ್ಷ ಬಿಡಿ ಅಂತಾ ಹೇಳಲ್ಲ. ರಾಜಾರೋಷವಾಗಿ ನನ್ನ ವಿರುದ್ಧ ಕೆಲಸ ಮಾಡಿದರೂ ಅವರನ್ನು ಪ್ರಶ್ನೆ ಮಾಡುವ ಸೌಜನ್ಯ ಇಲ್ಲ ಎಂಬ ಅಸಮಾಧಾನ ಬೆಂಬಲಿಗರಿಗೆ ಇದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Thu, 17 August 23