ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಲೋಪದೋಷಗಳು ಆಗಿವೆ: ಸಚಿವ ಪ್ರಿಯಾಂಕ್ ಖರ್ಗೆ
ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಲೋಪದೋಷಗಳು ಆಗಿವೆ. ಈ ಕುರಿತಾಗಿ ಹೆಚ್ಚಿನ ತನಿಖೆ ಈಗಾಗಲೇ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು, ಆಗಸ್ಟ್ 17: ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಲೋಪದೋಷಗಳು ಆಗಿವೆ. ಈ ಕುರಿತಾಗಿ ಹೆಚ್ಚಿನ ತನಿಖೆ ಈಗಾಗಲೇ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಹಿಂದಿನ ಸರ್ಕಾರ ನಿರ್ಲಕ್ಷ್ಯ ತೋರಿದೆ. ಮುಂಬಡ್ತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಮತ್ತು ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಗೆ ಸೂಚಿಸಿದ್ದೇವೆ ಎಂದು ಹೇಳಿದರು.
ರಾಯಚೂರು, ವಿಜಯನಗರ, ಬಳ್ಳಾರಿ ವಿವಿಗಳಲ್ಲಿ ಅವ್ಯವಹಾರ ಆಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಕೆಯಲ್ಲಿ ಅಕ್ರಮ ಆಗಿದೆ. ಹದಿನೈದು ದಿನಗಳಲ್ಲಿ ಲೋಪದೋಷಗಳು ಸರಿ ಆಗಬೇಕು. ಕಾನೂನು ಮೀರಿ ಆಗಿರುವ ಲೋಪದೋಷಗಳನ್ನ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಾನು ಸಹ ಪಕ್ಷಕ್ಕೆ ಅಳಿಲು ಸೇವೆ ಸಲ್ಲಿಸಿದ್ದೇನೆ
ವಿಧಾನಪರಿಷತ್ಗೆ ಮಾಜಿ ಸಚಿವೆ ಉಮಾಶ್ರೀ, ಎಂ.ಆರ್.ಸೀತಾರಾಂ, ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ಕಾರ್ಯಕರ್ತರ ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಕ್ಕೆ ಅಳಿಲು ಸೇವೆ ಸಲ್ಲಿಸಿದ್ದಾರೆ. ನಾನು ಸಹ ಪಕ್ಷಕ್ಕೆ ಅಳಿಲು ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ನನಗೂ ಒಂದು ಸ್ಥಾನ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಮರು ಸೇರ್ಪಡೆಗೆ ಬೆಂಬಲಿಗರ ಮನವಿ, ಸಮಯ ಕೇಳಿದ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್
ಹೈಕಮಾಂಡ್ ನಿರ್ಧಾರ ಮಾಡಿದ್ದು, ಅವರ ಆದೇಶವನ್ನು ನಾವು ಗೌರವ ಕೊಡಬೇಕು. ಹಲವರಿಗೆ ಇದರಿಂದ ಅವಕಾಶ ಸಿಗದಿರಬಹುದು. ಆದರೆ ಪಕ್ಷದ ತೀರ್ಮಾನವೇ ಅಂತಿಮ ಎಂದರು.
ರಾಜ್ಯದಲ್ಲಿ ವಿಪಕ್ಷಗಳೇ ಇಲ್ಲ
ವರ್ಷಕ್ಕೆ ಹಿರಿಯ ಸಚಿವರು ಬಿಟ್ಟು ಕೊಡಬೇಕು ಅಂತ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಹೈಕಮಾಂಡ್ ಹೇಳಿದರೆ ಎಲ್ಲರೂ ಬಿಟ್ಟು ಕೊಡಬೇಕು. ನಾವು ಈ ಹಿಂದೆ ಬಿಟ್ಟು ಕೊಟ್ಟಿದ್ದೇವೆ. ಪಕ್ಷಕ್ಕೆ ಸೇವೆ ಸಲ್ಲಿಸಿ ಅಂದರೆ ಎಲ್ಲರೂ ಸಿದ್ಧರಿರಬೇಕು. ಹೈಕಮಾಂಡ್ ನಿರ್ಧಾರ ಮಾತ್ರ ಪ್ರಸ್ತುತ. ಬೇರೆ ಯಾರ ಹೇಳಿಕೆಯೂ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ: ಸಚಿವ ಸ್ಥಾನ ಬಿಟ್ಟುಕೊಡ್ತೀನಿ ಎಂದು ಪುನರುಚ್ಚರಿಸಿದ ಕೆ ಎಚ್ ಮುನಿಯಪ್ಪ, ಉಳಿದ ಸಚಿವರಲ್ಲಿ ತಳಮಳ, ಕಾಂಗ್ರೆಸ್‌ನಲ್ಲಿ ಕೋಲಾಹಲ!
ಕಾಂಗ್ರೆಸ್‌ನಲ್ಲಿ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿಕೆ ವಿಪಕ್ಷಗಳಿಗೆ ಅಸ್ತ್ರ ಆಯಿತು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ವಿಪಕ್ಷ ಎಲ್ಲಿದೆ? ರಾಜ್ಯದಲ್ಲಿ ವಿಪಕ್ಷಗಳೇ ಇಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಬಗ್ಗೆ ಚೆನ್ನಾಗಿ ಗೊತ್ತು. ಕಾಂಗ್ರೆಸ್ ಬಗ್ಗೆ ಅವರಿಗೆ ಹೇಗೆ ಗೊತ್ತಾಗುತ್ತೆ ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲಿ ಈಗ ಸಮಸ್ಯೆ ಇದೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:52 pm, Thu, 17 August 23