ಊಹಾಪೋಹಗಳಿಗೆ ತೆರೆ ಎಳೆದಿರುವ ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (TRS) ನಾಯಕ ಕೆ.ಚಂದ್ರಶೇಖರ್ ರಾವ್ (KCR) ಅವರು ಶೀಘ್ರದಲ್ಲೇ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸಲಿದ್ದು ಅದರ ನೀತಿಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ ಎಂದು ಭಾನುವಾರ ಹೇಳಿದ್ದಾರೆ. ತೆಲಂಗಾಣ ಚಳವಳಿಯ ಆರಂಭದ ಮೊದಲು ನಾವು ಮಾಡಿದಂತೆ ಬುದ್ಧಿಜೀವಿಗಳು, ಅರ್ಥಶಾಸ್ತ್ರಜ್ಞರು ಮತ್ತು ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸುದೀರ್ಘ ಚರ್ಚೆಯ ನಂತರ ಪರ್ಯಾಯ ರಾಷ್ಟ್ರೀಯ ಕಾರ್ಯಸೂಚಿಯಲ್ಲಿ ಒಮ್ಮತವಿದೆ ಎಂದು ಕೆಸಿಆರ್ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ. “ಶೀಘ್ರದಲ್ಲೇ, ರಾಷ್ಟ್ರೀಯ ಪಕ್ಷದ ರಚನೆ ಮತ್ತು ಅದರ ನೀತಿಗಳ ರಚನೆ ನಡೆಯಲಿದೆ” ಎಂದು ಪ್ರಕಟಣೆಯಲ್ಲಿ ಹೇಳಿದೆ. ಕೆಸಿಆರ್ ಅವರು ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದು ಸಮಾನ ಮನಸ್ಕ ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ಒಗ್ಗೂಡಿಸಲು ನೋಡುತ್ತಿದ್ದಾರೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆ ನಂತರ ಅವರು ಭಾನುವಾರ ಮಧ್ಯಾಹ್ನ ಹೈದರಾಬಾದ್‌ನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜನತಾ ದಳ (ಜಾತ್ಯತೀತ) ನಾಯಕ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಬಲ್ಲ ಮೂಲಗಳ ಪ್ರಕಾರ ಮಧ್ಯಾಹ್ನದ ಊಟದ ನಂತರ ಇಬ್ಬರೂ ರಾಷ್ಟ್ರ ರಾಜಕಾರಣದ ಪ್ರಸ್ತುತ ಸನ್ನಿವೇಶ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಿದರು.
ಕಳೆದ ತಿಂಗಳು ಕೆಸಿಆರ್ ಬಿಹಾರದ ಸಿಎಂ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಪಟನಾದಲ್ಲಿ ಭೇಟಿಯಾಗಿದ್ದರು, ಅಲ್ಲಿ ಅವರು “ಬಿಜೆಪಿ-ಮುಕ್ತ ಭಾರತ್” ಗೆ ಕರೆ ನೀಡಿದ್ದರು. ಮೇ ತಿಂಗಳಲ್ಲಿ ಅವರು ಬೆಂಗಳೂರು ಹೊರತುಪಡಿಸಿ ದೆಹಲಿ ಮತ್ತು ಚಂಡೀಗಢಕ್ಕೂ ಭೇಟಿ ನೀಡಿದ್ದರು. ಪ್ರಾದೇಶಿಕ ನಾಯಕರೊಂದಿಗಿನ ಅವರ ಕೆಲವು ಚರ್ಚೆಗಳು ಕಾಂಗ್ರೆಸ್ ಅನ್ನು ಯಾವುದೇ ಫೆಡರಲ್ ಮೈತ್ರಿಯಿಂದ ಹೊರಗಿಡುವ ಬಗ್ಗೆ ಕೇಂದ್ರೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಟಿಆರ್‌ಎಸ್ ಪದಾಧಿಕಾರಿಗಳ ಪ್ರಕಾರ, ಕೆಲವು ಪ್ರಾದೇಶಿಕ ನಾಯಕರು ಕೆಸಿಆರ್‌ನೊಂದಿಗೆ ಈ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದ್ದರೂ ಕೆಲವರು ಖಚಿತವಾಗಿ ಒಪ್ಪಿಲ್ಲ. ಕೆಸಿಆರ್ ಅವರು ಎಡ ಪಕ್ಷಗಳು, ನಾಗರಿಕ ಸಮಾಜ ಮತ್ತು ಬುದ್ಧಿಜೀವಿಗಳ ಬೆಂಬಲವನ್ನು ಸಹ ಬಯಸುತ್ತಿದ್ದಾರೆ. ಕಳೆದ ವಾರ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ತಮ್ಮಿನೇನಿ ವೀರಭದ್ರಂ, ಮಾಜಿ ಶಾಸಕ ಜೂಲಕಂಟಿ ರಂಗಾರೆಡ್ಡಿ ಮತ್ತು ಪಕ್ಷದ ಕೇಂದ್ರ ಸಮಿತಿ ಸದಸ್ಯ ಚೆರುಪಳ್ಳಿ ಸೀತಾರಾಮುಲು ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದರು.