ಬಿಜೆಪಿ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು: ಎಟಿಎಂ ಆರೋಪಕ್ಕೆ ಕಾಂಗ್ರೆಸ್ ಟಕ್ಕರ್

| Updated By: Rakesh Nayak Manchi

Updated on: Oct 16, 2023 | 3:38 PM

ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಎಟಿಎಂ ಆಗಿ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಇತ್ತೀಗೆ ಐಟಿ ದಾಳಿ ನಡೆದಾಗ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಸಂಬಂಧಿಕರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಮೇಲೇ ಎಟಿಎಂ ಆರೋಪ ನಿಜವಾಗಿದೆ ಎಂದು ಜರಿದಿದೆ. ಸದ್ಯ ಈ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು ಎಂದು ಹೇಳಿದೆ.

ಬಿಜೆಪಿ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು: ಎಟಿಎಂ ಆರೋಪಕ್ಕೆ ಕಾಂಗ್ರೆಸ್ ಟಕ್ಕರ್
Follow us on

ಬೆಂಗಳೂರು, ಅ.16: ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಎಟಿಎಂ ಆಗಿ ಮಾಡಿಕೊಂಡಿದೆ ಎಂದು ಬಿಜೆಪಿ (BJP) ಆರೋಪಿಸುತ್ತಲೇ ಬಂದಿದೆ. ಇತ್ತೀಗೆ ಐಟಿ ದಾಳಿ ನಡೆದಾಗ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಸಂಬಂಧಿಕರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಮೇಲೇ ಎಟಿಎಂ ಆರೋಪ ನಿಜವಾಗಿದೆ ಎಂದು ಜರಿದಿದೆ. ಸದ್ಯ ಈ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ (Congress), ಬಿಜೆಪಿ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್ ಘಟಕ, ಸಿಎಂ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 70 ರಿಂದ 80 ಕೋಟಿ, ಬಿಜೆಪಿ ಟಿಕೆಟ್​ಗೆ 7 ಕೋಟಿ. ಇಂತಹ ಭ್ರಷ್ಟ ಬಿಜೆಪಿಯ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು! ಕಲೆಕ್ಷನ್ ಗಿರಾಕಿ ಮೋದಿ ಕರ್ನಾಟಕಕ್ಕೆ ಮೂರು ದಿನಕ್ಕೊಮ್ಮೆ ಬಂದಿದ್ದು ಕಲೆಕ್ಷನ್ ಮಾಡುವುದಕ್ಕಾಗಿಯೇ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.

ಇತ್ತ ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಕಾಂಗ್ರೆಸ್‌ ಬಂದರೆ ಕಲೆಕ್ಷನ್‌ ಮಾಡಲಿದೆ, ಕಾಂಗ್ರೆಸ್‌ ಬಂದರೆ ಕಮಿಷನ್‌ ದಂಧೆ ಆರಂಭವಾಗಲಿದೆ, ಕಾಂಗ್ರೆಸ್‌ ಬಂದರೆ ಕರ್ನಾಟಕ ಹೈಕಮಾಂಡ್‌ ಪಾಲಿಗೆ #ATM ಆಗಲಿದೆ, ಕಾಂಗ್ರೆಸ್‌ ಬಂದರೆ ಅರಾಜಕತೆ ಶುರುವಾಗಲಿದೆ, ಕಾಂಗ್ರೆಸ್‌ ಬಂದರೆ ಕರ್ನಾಟಕ ಜಿಹಾದಿಗಳ ಅಡಗುತಾಣವಾಗಲಿದೆ ಎಂಬ ಆರೋಪಗಳನ್ನೆಲ್ಲಾ ಇಂದು ಸ್ವತಃ ಕಾಂಗ್ರೆಸ್ ನಿಜ ಮಾಡಿದೆ ಎಂದಿದೆ.

ಅವೈಜ್ಞಾನಿಕ ಗ್ಯಾರಂಟಿಗಳು, ನಕಲಿ ಗಿಫ್ಟ್‌ ಕಾರ್ಡ್‌ಗಳು, ದಾಖಲೆಯಿಲ್ಲದ ಸುಳ್ಳು ಆರೋಪಗಳನ್ನು ಮಾಡಿಯೇ ಅಧಿಕಾರಕ್ಕೇರಿದ ಸಿದ್ದರಾಮಯ್ಯ ಅವರ ಸರ್ಕಾರ, ಅಧಿಕಾರಕ್ಕೇರಿದ ನಂತರ ಮೊದಲು ಮಾಡಿದ ಕೆಲಸವೆಂದರೆ, ರಾಜ್ಯವನ್ನು ಹೈಕಮಾಂಡ್‌ನ ATM ಮಾಡಿದ್ದು ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್​ಗೆ 1000 ಕೋಟಿ ರೂ. ಟಾರ್ಗೆಟ್: ಯಾವ ರಾಜ್ಯಕ್ಕೆ ಎಷ್ಟು? ಬಿಜೆಪಿ ಟ್ವೀಟ್

ಕರ್ನಾಟಕದ ಆಡಳಿತದಲ್ಲಿ ಮೂಗು ತೂರಿಸುವ ಯಾವ ಅಧಿಕಾರವೂ ಇಲ್ಲದ ದೆಹಲಿಯ ಸುರ್ಜೇವಾಲ ಅವರು, ಎಟಿಎಂ ಸರ್ಕಾರದ ಶುರುವಾತಿನಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳೆನ್ನೆಲ್ಲಾ ಸೇರಿಸಿಕೊಂಡು ಸಭೆ ಮಾಡಿದ್ದು ರಾಜ್ಯವನ್ನು ಲೂಟಿ ಹೊಡೆಯುವ ಸಲುವಾಗಿಯೇ ಎಂದು ಆರೋಪಿಸಿದೆ.

ಆ ಸಭೆ ಮುಗಿದ ಮರು ಘಳಿಗೆಯಿಂದ ಆರಂಭವಾದ ವರ್ಗಾವಣೆ ದಂಧೆ ಇನ್ನೂ ನಿಂತಿಲ್ಲ. ತಿಂಗಳಿಗೊಮ್ಮೆ ಸಂಘಟನೆ ನೆಪ ಮಾಡಿಕೊಂಡು, ಸುರ್ಜೇವಾಲಾರವರು ಬೆಂಗಳೂರಿಗೆ ಆಗಾಗ ಬರುವುದು ಸಹ, ದೆಹಲಿ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್‌ಗೆ ನೀಡಿದ ಕಲೆಕ್ಷನ್‌ ಟಾರ್ಗೆಟ್‌ನ ತಿಂಗಳ ಲೆಕ್ಕವನ್ನು ಪಡೆಯಲು. ಇಂದು ಸುರ್ಜೇವಾಲಾರ ಜೊತೆ ಕೆಸಿ ವೇಣುಗೋಪಾಲ್ ಸಹ ಬಂದಿರುವುದು, ಕೈ ಸರ್ಕಾರದ ಕಲೆಕ್ಷನ್‌ ಲೆಕ್ಕವನ್ನು ಆಡಿಟ್‌ ಮಾಡಲು ಎಂದಿದೆ.

ಕಳೆದ 10 ದಿನಗಳಲ್ಲಿ ಗುತ್ತಿಗೆದಾರರು ಹಾಗೂ ಬಿಲ್ಡರ್‌ಗಳ ಬಳಿ ಸಿಕ್ಕಿಬಿದ್ದಿರುವ ₹90 ಕೋಟಿ ಕರ್ನಾಟಕದಿಂದ ಹೈಕಮಾಂಡ್‌ಗೆ ತಲುಪುತ್ತಿದ್ದ ಮೊದಲ ಕಂತಿನ ₹1000 ಕೋಟಿಯ ಒಂದು ಸಣ್ಣ ಭಾಗ ಎಂದು ಬಿಜೆಪಿ ಆರೋಪಿಸಿದೆ.

ಗುತ್ತಿಗೆದಾರರ ಮೂಲಕ ಭರ್ಜರಿ ಕಲೆಕ್ಷನ್‌ ಮಾಡುವ ಸಲುವಾಗಿಯೇ, ಈ ಹಿಂದೆ ಕಾಂಗ್ರೆಸ್‌, ತನ್ನ ಆಪ್ತ ಗುತ್ತಿಗೆದಾರರನ್ನು ಛೂ ಬಿಟ್ಟು ಬಿಜೆಪಿ ಸರ್ಕಾರದ ವಿರುದ್ದ ನಿರಂತರ ಸುಳ್ಳು ಆರೋಪಗಳನ್ನು ಮಾಡಿತ್ತು. ಈ ದೇಶದಲ್ಲಿ ಒಂದು ರೂಪಾಯಿ ಬಿಡುಗಡೆಯಾದರೆ, ಅದರಲ್ಲಿ ಬಡವರಿಗೆ ತಲುಪುವುದು ಕೇವಲ 15 ಪೈಸೆ ಎಂದು ಹೇಳಿದ್ದ ರಾಜೀವ್‌ ಗಾಂಧಿಯವರ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ಕಾಂಗ್ರೆಸ್ ವಿಧಾನಸೌಧದಲ್ಲಿ ಬಿಡುಗಡೆಯಾಗುವ ಪ್ರತಿ ಒಂದು ರೂಪಾಯಿಯಲ್ಲಿ, 80 ಪೈಸೆಯನ್ನು ತಮ್ಮ ಹೈಕಮಾಂಡ್‌ ಹಾಗೂ ಪಂಚ ರಾಜ್ಯಗಳ ಚುನಾವಣಾ ಫಂಡಿಂಗ್‌ಗೆ ಎತ್ತಿಡುತ್ತಿದೆ ಎಂದು ಆರೋಪಿಸಿದೆ.

ಪ್ರಸ್ತುತ ಸಿದ್ದರಾಮಯ್ಯ ಅವರು ಹಾಗೂ ಡಿಕೆ ಶಿವಕುಮಾರ್ ಅವರು ವಾರ್ಷಿಕ 3-4 ಸಾವಿರ ಕೋಟಿ ರೂಪಾಯಿ ಕಲೆಕ್ಷನ್‌ ಮಾಡುವುದಾಗಿ ಹೈಕಮಾಂಡ್‌ಗೆ ಮಾತು ಕೊಟ್ಟು ಅಧಿಕಾರದ ಗದ್ದುಗೆಯಲ್ಲಿ ಕೂತಿದ್ದಾರೆ. ಮೊದಲ ಹಂತದ ಸಾವಿರ ಕೋಟಿ ರೂಪಾಯಿಯನ್ನು ಹೈಕಮಾಂಡ್‌ಗೆ ಸಲ್ಲಿಸುವ ಸಮಯದಲ್ಲಿಯೇ, ಐ.ಟಿ ಇಲಾಖೆ ದಾಳಿ ಮಾಡಿದ ಕಾರಣ, ಕಾಂಗ್ರೆಸ್‌ನ ಕಲೆಕ್ಷನ್‌ ಕಳ್ಳಾಟ ಬಯಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ದಿವಾಳಿ ಮಾಡಿ ಕಾಂಗ್ರೆಸ್ಸಿಗರು ಮಾತ್ರ ದಿವಾನರಾಗಲಿರುವುದನ್ನು ಕರ್ನಾಟಕ ಕಾಣಬೇಕಿರುವುದು ಕನ್ನಡಿಗರ ಪಾಲಿನ ದುರಾದೃಷ್ಟ ಎಂದು ಟ್ವೀಟ್ ಮಾಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ