‘ದೇಶದಲ್ಲಿ ಪ್ರಜಾಪ್ರಭುತ್ವ ಬಲಿಷ್ಠವಾಗಿರಬೇಕೆಂದ್ರೆ ಬಲಿಷ್ಠ ವಿರೋಧ ಪಕ್ಷದ ಅಗತ್ಯವಿದೆ’ ಎಂಬ ಗಡ್ಕರಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ಏನಂತಾರೆ?
ಪ್ರಜಾಪ್ರಭುತ್ವ ಎರಡು ಚಕ್ರಗಳಲ್ಲಿ ಸಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದರು. ಒಂದು ಚಕ್ರ ಆಡಳಿತ ಪಕ್ಷ ಮತ್ತೊಂದು ಚಕ್ರ ವಿರೋಧ ಪಕ್ಷವಾಗಿದ್ದು, ಪ್ರಜಾಪ್ರಭುತ್ವಕ್ಕೆ ಬಲಿಷ್ಠ ವಿರೋಧ ಪಕ್ಷದ ಅವಶ್ಯಕತೆ ಇದೆ. ಹಾಗಾಗಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕು ಎಂದು ಮನದಾಳದಿಂದ ಭಾವಿಸುತ್ತೇನೆ ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ (Democracy) ಬಲಿಷ್ಠ ವಿರೋಧ ಪಕ್ಷದ ಅಗತ್ಯ ಇದೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಪ್ರಬಲವಾಗಬೇಕು ಎಂದು ತಾವು ವೈಯಕ್ತಿಕವಾಗಿ ಅಭಿಪ್ರಾಯ ಹೊಂದಿರುವುದಾಗಿ ಕೇಂದ್ರದ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ (Nitin Gadkari). ಕೇಂದ್ರ ಸಚಿವ ಗಡ್ಕರಿ ಹೇಳಿಕೆಯನ್ನು ಮಹಾರಾಷ್ಟ್ರ ಕಾಂಗ್ರೆಸ್ ಸ್ವಾಗತಿಸಿದೆ. ಆದ್ರೆ ದೇಶದಲ್ಲಿ ವಿರೋಧ ಪಕ್ಷಗಳನ್ನು ದುರ್ಬಲಗೊಳಿಸುವ ಬಿಜೆಪಿಯ ಪ್ರಯತ್ನಗಳ ವಿರುದ್ದ ಪ್ರಧಾನಿ ಮೋದಿ ಜೊತೆಗೆ ಮಾತನಾಡಬೇಕೆಂದು ಕಾಂಗ್ರೆಸ್ ಪಕ್ಷವು (Congress) ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದೆ.
ದೇಶದಲ್ಲಿ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಬಲಿಷ್ಠವಾಗಬೇಕು-ನಿತಿನ್ ಗಡ್ಕರಿ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ “ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಮುಖ್ಯ” ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಆದರೆ ವಿರೋಧ ಪಕ್ಷಗಳನ್ನು ನಾಶಮಾಡಲು ಬಿಜೆಪಿಯು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ನಿತಿನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಂತೆ ಸಚಿನ್ ಸಾವಂತ್ ಕೇಳಿಕೊಂಡಿದ್ದಾರೆ.
ಸಚಿನ್ ಸಾವಂತ್, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಕೇಸರಿ ಪಕ್ಷವು ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಸರ್ಕಾರಗಳಿಗೆ ಕಿರುಕುಳ ನೀಡುವ ಪ್ರಯತ್ನದಲ್ಲಿ ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಸಚಿನ್ ಸಾವಂತ್ ಕಳವಳ ವ್ಯಕ್ತಪಡಿಸಿದರು.
ಗಡ್ಕರಿ ಜೀ ಅವರು ತೋರಿದ ಕಾಳಜಿಯನ್ನು ನಾವು ಪ್ರಶಂಸಿಸುತ್ತೇವೆ. ಆದರೆ ಅವರು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷಗಳು ಮತ್ತು ಪ್ರಜಾಪ್ರಭುತ್ವವನ್ನು ನಾಶಮಾಡಲು ಬಿಜೆಪಿಯ ಪ್ರಯತ್ನಗಳ ಬಗ್ಗೆ ತಮ್ಮ ನಾಯಕ ಮೋದಿ ಅವರೊಂದಿಗೆ ಮಾತನಾಡಬೇಕು” ಎಂದು ಸಚಿನ್ ಸಾವಂತ್ ಹೇಳಿದರು.
ಸುಪ್ರೀಂ ಕೋರ್ಟ್ ಕೂಡ ಅಸಹಾಯಕತೆ ತೋರುತ್ತಿದೆ. ನೀವು ಬಿಜೆಪಿಯೇತರ ಪಕ್ಷಗಳ ಸರ್ಕಾರಗಳಿಗೆ ಕಿರುಕುಳ ನೀಡಲು ತನಿಖಾ ಸಂಸ್ಥೆಗಳನ್ನು ಬಳಸುತ್ತಿದ್ದೀರಿ ಎಂದು ಅವರು ಆರೋಪಿಸಿದರು. ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ದೇಶದಲ್ಲಿ ಹಿಂದೆಂದೂ ನಡೆಯದ ರಾಜಕೀಯ ನಡೆಯುತ್ತಿದೆ ಎಂದು ಅವರು ಹೇಳಿದರು.
ವಿರೋಧ ಪಕ್ಷವನ್ನು ನಾಶಪಡಿಸುವ ಬಿಜೆಪಿಯ ಮನಸ್ಥಿತಿ ಮತ್ತು ಪ್ರಜಾಪ್ರಭುತ್ವವನ್ನು ಸರ್ವಾಧಿಕಾರಕ್ಕೆ ಪರಿವರ್ತಿಸುವ ಪ್ರಯತ್ನದ ಬಗ್ಗೆ ಗಡ್ಕರಿ, ಮೋದಿ ಜೊತೆ ಮಾತನಾಡಿದರೆ ಅದು ಪ್ರಜಾಪ್ರಭುತ್ವ ಮತ್ತು ದೇಶದ ಹಿತದೃಷ್ಟಿಯಿಂದ ಕೂಡಿರುತ್ತದೆ ಎಂದು ಸಚಿನ್ ಸಾವಂತ್ ಹೇಳಿದರು. ನಿತಿನ್ ಗಡ್ಕರಿ ವ್ಯಕ್ತಪಡಿಸಿದ ಭಾವನೆಗಳು ಉತ್ತಮವಾಗಿದ್ದರೂ, ಮೋದಿ ಸರ್ಕಾರವು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ಹದಗೆಡಿಸಲು ಪ್ರಯತ್ನಿಸುತ್ತಿದೆ ಎಂಬುದರ ಬಗ್ಗೆ ಅವರಿಗೆ “ಅರಿವಿಲ್ಲ” ಎಂದು ಸಾವಂತ್ ಹೇಳಿದರು. ಕಾಂಗ್ರೆಸ್ ಪಕ್ಷವು ದೇಶದ ಪ್ರಮುಖ ವಿರೋಧ ಪಕ್ಷವಾಗಿದ್ದು, ಕಾಂಗ್ರೆಸ್ ಸಿದ್ಧಾಂತ ಮತ್ತು ಚಿಂತನೆಗಳು ರಾಷ್ಟ್ರದ ಹಿತಾಸಕ್ತಿಯಲ್ಲಿವೆ ಎಂಬುದನ್ನು ಜನರು ಅರಿತುಕೊಳ್ಳುತ್ತಾರೆ ಎಂದು ಸಚಿನ್ ಸಾವಂತ್ ಹೇಳಿದರು.
ಪುಣೆಯಲ್ಲಿ ಕಳೆದ ವಾರಾಂತ್ಯ ನಡೆದ ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ ಅವರು ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಮುಖ್ಯ ಮತ್ತು ಪಕ್ಷವು ರಾಷ್ಟ್ರಮಟ್ಟದಲ್ಲಿ ಬಲಿಷ್ಠವಾಗಬೇಕೆಂಬುದು ಅವರ ಪ್ರಾಮಾಣಿಕ ಆಶಯವಾಗಿದೆ ಎಂದು ಹೇಳಿದರು. ಪ್ರಜಾಪ್ರಭುತ್ವ ಎರಡು ಚಕ್ರಗಳಲ್ಲಿ ಸಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದರು. ಒಂದು ಚಕ್ರ ಆಡಳಿತ ಪಕ್ಷ ಮತ್ತೊಂದು ಚಕ್ರ ವಿರೋಧ ಪಕ್ಷವಾಗಿದ್ದು, ಪ್ರಜಾಪ್ರಭುತ್ವಕ್ಕೆ ಬಲಿಷ್ಠ ವಿರೋಧ ಪಕ್ಷದ ಅವಶ್ಯಕತೆ ಇದೆ. ಹಾಗಾಗಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕು ಎಂದು ಮನದಾಳದಿಂದ ಭಾವಿಸುತ್ತೇನೆ ಎಂದರು.
ಕಾಂಗ್ರೆಸ್ ದುರ್ಬಲವಾಗುತ್ತಿದ್ದರೆ, ಇತರ ಪ್ರಾದೇಶಿಕ ಪಕ್ಷಗಳು ಅದರ ಜಾಗವನ್ನು ತೆಗೆದುಕೊಳ್ಳುತ್ತಿವೆ ಎಂದೂ ಅವರು ಹೇಳಿದರು. ಇತರ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನ ಜಾಗವನ್ನು ಆಕ್ರಮಿಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂಬುದು ನಿತಿನ್ ಗಡ್ಕರಿ ಅವರ ಅಭಿಮತವಾಗಿದೆ.
Published On - 6:14 pm, Mon, 28 March 22