ಆತ್ಮಸಾಕ್ಷಿ ಇದೆಯೇ ಸಿದ್ದರಾಮಯ್ಯ, ಅದೆಷ್ಟು ಮರೆವು ಡಿಕೆಶಿ: ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಲಕ್ಷ್ಮೀನಾರಾಯಣ
ಸಿದ್ದರಾಮಯ್ಯನವರೇ ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯೇ. ಡಿಕೆಶಿಯವರೇ ನಿಮಗೆ ಮಾತು ಮರೆತು ಹೋಯಿತೇ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ‘ನನ್ನನ್ನು ಎಂಎಲ್ಸಿ ಮಾಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್ (DK Shivakumar) ಮಾತು ತಪ್ಪಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯೇ. ಡಿಕೆಶಿಯವರೇ ನಿಮಗೆ ಮಾತು ಮರೆತು ಹೋಯಿತೇ’ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಆಗಸ್ಟ್ನಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಹಲವು ವಿಷಯಗಳನ್ನು ಬಹಿರಂಗಪಡಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಬಹಿರಂಗ ಪತ್ರ ಬರೆದಿರುವ ಅವರು, ‘ನನ್ನನ್ನು ಎಂಎಲ್ಸಿ ಮಾಡುತ್ತೇನೆಂದು ಸಿದ್ದರಾಮಯ್ಯರೇ ಹೇಳಿದ್ದರು. ನಿಮ್ಮ ಸಂಘಟನೆಯಿಂದ ತುಂಬಾ ಒಳ್ಳೆಯ ಮಾಹಿತಿ ಬರುತ್ತಿದೆ. ಎಂಎಲ್ಸಿ ಮಾಡಿ, ರಾಜ್ಯದಲ್ಲಿಯೇ ಉಳಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಡಿಕೆಶಿಯವರೇ ನಿಮ್ಮ ಮಾತು ಮರೆತು ಹೋಯಿತೆ. ನಿಮ್ಮ ಕುರ್ಚಿ ಕಚ್ಚಾಟದಿಂದ ಕಾರ್ಯಕರ್ತರು ಬಲಿಪಶು ಆಗಲಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ನಿನ್ನನ್ನು ಎಂಎಲ್ಸಿ ಮಾಡುತ್ತೇನೆಂದು ಹೇಳಿದ ಸಿದ್ದರಾಮಯ್ಯ ಅವರ ಮಾತು ಸುಳ್ಳೇ? ಮಾತು ತಪ್ಪಿದ ನಿಮಗೆ ಆತ್ಮಸಾಕ್ಷಿ ಒಪ್ಪುತ್ತದೆಯೇ? ದೆಹಲಿಯಲ್ಲಿ ನಿಮ್ಮಿಬ್ಬರ ಮಧ್ಯ ಇಡೀ ದಿವಸ ನಡೆದ ಗುದ್ದಾಟವೇನು? ಪಕ್ಷದ ಸಂಘಟನೆ ಬಗ್ಗೆ ಗುದ್ದಾಟ ಮಾಡಿ ಬರಿಗೈಯಲ್ಲಿ ವಾಪಾಸು ಬರಲು ಕಾರಣವೇನು? ಹೈಕಮಾಂಡ್ ನೀವಿಬ್ಬರೂ ಕೊಟ್ಟ ಹೆಸರುಗಳನ್ನು ಸಾರಾಸಗಟಾಗಿ ತಿರಸ್ಕಾರ ಮಾಡಲು ಕಾರಣವೇನು? 45 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ ಕೆಟ್ಟ ನಡವಳಿಕೆ ನೋಡಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ನನ್ನ ಹುಟ್ಟುಹಬ್ಬಕ್ಕೆ ಅಗಮಿಸಿ, ಸಿಹಿ ತಿನ್ನಿಸಿದ ನಂತರ ತಮ್ಮ ಮನೆಗೆ ರಾತ್ರಿ ಬರುವಂತೆ ಹೆಬ್ಬಾಳ ಶಾಸಕರು ಕರೆದುಕೊಂಡು ಬಂದಿದ್ದಿರಿ. ಆ ಸಂದರ್ಭದಲ್ಲಿ ತಾವು ಹಾಗೂ ಶಾಸಕರು ಹೇಳಿದ್ದೇನು? ತುರುವೇಕೆರೆ ಕ್ಷೇತ್ರದಿಂದ ನೀನು ಸ್ಪರ್ಧೆ ಮಾಡಬೇಡ, ನಾನು ಕಾಂತರಾಜುಗೆ ಸೀಟು ಕೊಡವುದಾಗಿ ಮಾತು ಕೊಟ್ಟಿರುವೆ. ನಿನ್ನನ್ನು ಎಂಎಲ್ಸಿ ಮಾಡುತ್ತೇನೆ ಎಂದು ಹೇಳಿದ್ದಿರಿ. ಈಗ ಆ ಮಾತುಗಳು ನಿಮಗೆ ಮರೆತುಹೋಗಿದೆಯೇ? ಹಲವಾರು ವರ್ಷಗಳಿಂದ ಮನೆ ಮಠ ತೊರೆದು ರಾತ್ರಿ ಹಗಲೆನ್ನದೆ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಸಂಘಟನೆ ಮಾಡಿದದೇನೆ. ಈ ಘೋರ ಆನ್ಯಾಯವನ್ನು ಸಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಮಾನ್ಯ ಡಿ.ಕೆ.ಶಿವಕುಮಾರ್ ಅವರೇ ತುಮಕೂರು ಸಭೆ ಮುಗಿಸಿ ದಾಬಸ್ಪೇಟೆ ಹತ್ತಿರ ಕಾಂತರಾಜು, ಗುಬ್ಬಿ ಶ್ರೀನಿವಾಸ್ ಮತ್ತು ಮನೋಹರ್ ಜೊತೆಯಲ್ಲಿ ಮಧ್ಯಾಹ್ನದ ಊಟ ಮಾಡುವಾಗ ತುರುವೇಕೆರೆಗೆ ಕಾಂತರಾಜು, ಗುಬ್ಬಿಗೆ ಶ್ರೀನಿವಾಸ್, ತಿಪಟೂರಿನಲ್ಲಿ ಷಡಕ್ಷರಿಯವರಿಗೆ ಸೀಟು ಕೊಡುವೆ. ನಿಮ್ಮ ಸಂಘಟನೆ ಬಗ್ಗೆ ರಾಜ್ಯಾದ್ಯಂತ ತುಂಬಾ ಒಳ್ಳೆಯ ಮಾಹಿತಿ ಬರುತ್ತಿದೆ. ಆದ್ದರಿಂದ ತಮ್ಮನ್ನು ಎಂಎಸ್ಸಿ ಮಾಡಿ ರಾಜ್ಯದಲ್ಲಿ ಉಳಿಸಿಕೊಳ್ಳುವೆ ಎಂದು ಹೇಳಿದ್ದು ಮರೆತುಹೋಯಿತೆ ಎಂದು ಕೇಳಿದ್ದಾರೆ.
ಎಂಎಲ್ಸಿ ಚುನಾವಣೆಗೆ ಹೈಕಮಾಂಡ್ ನೀವಿಬ್ಬರೂ ಕೊಟ್ಟ ಹೆಸರುಗಳನ್ನು ಸಾರಾಸಗಟಾಗಿ ತಿರಸ್ಕಾರ ಮಾಡಲು ಕಾರಣವೇನು ಎಂದು ಪ್ರಶ್ನಿಸಿರುವ ಅವರು, ತಾವೊಬ್ಬರೆ ದೆಹಲಿಗೆ 22ರ ರಾತ್ರಿ ಹೋಗಿ 23ರಂದು ಇಡೀ ದಿವಸ ಸುಮ್ಮನಿದ್ದು ಸಂಜೆ ಯಾರ ಒತ್ತಡಕ್ಕೆ ಮಣಿದು ಹೆಸರು ಬದಲಾವಣೆ ಮಾಡಿದಿರಿ. ದೆಹಲಿ ಏರ್ಪೋರ್ರ್ಟ್ನಿಂದ ನನಗೆ ದೂರವಾಣಿ ಮಾಡಿ ಹೇಳಿದ ಮಾತೇನು? ನಿಮ್ಮಿಬ್ಬರ ಕುರ್ಚಿಯ ಕಚ್ಚಾಟದಿಂದ ಕಾರ್ಯಕರ್ತರು ಬಲಿಪಶುವಾಗಲಿದ್ದಾರೆ. ದೇವರು ನಿಮ್ಮನ್ನು ಚನ್ನಾಗಿಡಲೆಂದು ಆಶಿಸುತ್ತೇನೆ ಎಂದು ಪತ್ರವನ್ನು ಮುಗಿಸಿದ್ದಾರೆ.