ಅಮಿತ್ ಶಾ ಹೈದರಾಬಾದ್ ಭೇಟಿ ವೇಳೆ ಚಂದ್ರಬಾಬು ನಾಯ್ಡು ಜತೆ ಸಭೆ ನಡೆಸುವ ಸಾಧ್ಯತೆ
ನಾಯ್ಡು ಅವರು 2018 ರಲ್ಲಿ ಸಾರ್ವತ್ರಿಕ ಚುನಾವಣೆಗೆ ಸುಮಾರು ಒಂದು ವರ್ಷ ಮುಂಚೆ ಎನ್ಡಿಎಯಿಂದ ದೂರವಾಗಿದ್ದರು. ನಂತರ ನಡೆದ ರಾಜ್ಯ ಚುನಾವಣೆಯಲ್ಲಿ ಅವರ ಸೋಲಿಗೆ ಈ ವಿಭಜನೆಯೇ ಕಾರಣ ಎಂದು ಹಲವರು ಆರೋಪಿಸಿದ್ದರು.
ಹೈದರಾಬಾದ್: ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರು ಇಂದು ಹೈದರಾಬಾದ್‌ಗೆ (Hyderabad) ಭೇಟಿ ನೀಡುವ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಅದೇ ವೇಳೆ ಶಾ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಬ್ಬರ ನಡುವಿನ ಸಭೆಯು ತೆಲಂಗಾಣ ರಾಜ್ಯ ಚುನಾವಣೆಗೆ ಮುನ್ನ ಹೊಸ ಮೈತ್ರಿಗಳನ್ನು ಸೂಚಿಸಬಹುದು. ನಾಯ್ಡು ಅವರು 2018 ರಲ್ಲಿ ಸಾರ್ವತ್ರಿಕ ಚುನಾವಣೆಗೆ ಸುಮಾರು ಒಂದು ವರ್ಷ ಮುಂಚೆ ಎನ್ಡಿಎಯಿಂದ ದೂರವಾಗಿದ್ದರು. ನಂತರ ನಡೆದ ರಾಜ್ಯ ಚುನಾವಣೆಯಲ್ಲಿ ಅವರ ಸೋಲಿಗೆ ಈ ವಿಭಜನೆಯೇ ಕಾರಣ ಎಂದು ಹಲವರು ಆರೋಪಿಸಿದ್ದರು. ಬಜೆಟ್ ನಲ್ಲಿ ಕೇಂದರದ ಬಿಜೆಪಿ ಸರ್ಕಾರ ಆಂಧ್ರ ಪ್ರದೇಶವನ್ನು ಕಡೆಗಣಿಸಿದೆ ಎಂದು ನಾಯ್ಡು ಆರೋಪಿಸಿದ್ದು ಆಂಧ್ರಪ್ರದೇಶಕ್ಕೆ ಆಗಿರುವ ಅನ್ಯಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಹೊಣೆ ಎಂದಿದ್ದರು.
ನಾನು ಈ ನಿರ್ಧಾರ ತೆಗೆದುಕೊಂಡಿದ್ದು ಸ್ವಾರ್ಥಕ್ಕಾಗಿ ಅಲ್ಲ, ಆಂಧ್ರಪ್ರದೇಶದ ಹಿತಾಸಕ್ತಿಗಾಗಿ, ನಾಲ್ಕು ವರ್ಷಗಳಿಂದ ನಾನು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ, 29 ಬಾರಿ ದೆಹಲಿಗೆ ಹೋಗಿದ್ದೇನೆ. ಅನೇಕ ಬಾರಿ ಕೇಳಿದ್ದೇನೆ. ಇದು ಕೇಂದ್ರದ ಕೊನೆಯ ಬಜೆಟ್. ಇದರಲ್ಲಿ ಆಂಧ್ರಪ್ರದೇಶದ ಪ್ರಸ್ತಾಪವಿಲ್ಲ ಎಂದು ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ನಾಯ್ಡು ಅವರು ವಿಧಾನಸಭೆಯಲ್ಲಿ ಹೇಳಿದ್ದರು.