ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪಕ್ಕೆ ಉತ್ತರಿಸಲು ಗಲಿಬಿಲಿಗೊಂಡು ತಡವರಿಸಿದ ಸಚಿವ ಪಿಯೂಶ್ ಗೋಯೆಲ್
ರಾಜ್ಯ ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಉತ್ತರಿಸಲು ತಡವರಿಸಿದ್ದಾರೆ.
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದ 40% ಕಮಿಷನ್ ಆರೋಪಕ್ಕೆ ಉತ್ತರಿಸಲು ಕೇಂದ್ರ ಸಚಿವ ಪಿಯೂಶ್ ಗೋಯಲ್ (Union Minister piyush goyal ) ಗಲಿಬಿಲಿಗೊಂಡು ತಡವರಿಸಿದ ಪ್ರಸಂಗ ನಡೆದಿದೆ. ಇಂದು (ಫೆಬ್ರವರಿ 04) ಬೆಂಗಳೂರಿನಲ್ಲಿ ರಾಜ್ಯದ ಸರ್ಕಾರದ(Karnataka government) ಮೇಲಿನ ಭ್ರಷ್ಟಾಚಾರ(corruption) ಆರೋಪದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಉತ್ತರಿಸಲು ತಡವರಿಸಿದ್ದಾರೆ. ಅಲ್ಲದೇ ಈಗ ಬಜೆಟ್ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳುವ ಮೂಲಕ 40% ಕಮಿಷನ್ ಆರೋಪದ (40 Percent commission allegation) ಪ್ರಶ್ನೆಗಳಿಂದಲೂ ಜಾರಿಕೊಳ್ಳುವ ಪ್ರಯತ್ನಿಸಿದರು.
ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾಚಾರ ಅರೋಪ ಬಗ್ಗೆ ಪ್ರತಿಕ್ರಿಯಿಸಿದ ಪಿಯೂಶ್ ಗೋಯೆಲ್, ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ದೇಶ ಮಾಡುವ ಸಂಕಲ್ಪ ಮಾಡಿದ್ದಾರೆ. ಯಾವುದೇ ಅರೋಪ ಸರ್ಕಾರದ ಮೇಲೆ ಇದ್ದರೂ ತನಿಖೆಯಾಗಲಿದೆ. ಮೋದಿ 40% ಕಮಿಷನ್ ಆರೋಪ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಮೋದಿ ನಿರ್ಧಾರ ಮಾಡಿದ್ದಾರೆ. ಭ್ರಷ್ಟಾಚಾರ ನಡೆಯಲು ನಾವು ಬಿಡುವುದಿಲ್ಲ. ಕಾಂಗ್ರೆಸ್ ಸುಳ್ಳು ಆರೋಪಗಳ ಬಗ್ಗೆ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಬಿಜೆಪಿಗೆ ಕರ್ನಾಟಕದ ಜನ ಸ್ಪಷ್ಟ ಬಹುಮತ ನೀಡುತ್ತಾರೆ. ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟಿದ್ದು. ಯಾರನ್ನು ತೆಗೆದುಕೊಳ್ಳಬೇಕು, ಬಿಡಬೇಕು ಅಂತ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಅದಾನಿ ಕಂಪನಿ ಷೇರು ಕುಸಿತ ವಿಚಾರದ ಬಗ್ಗೆ ಮಾತನಾಡಿದ ಗೋಯೆಲ್, ಷೇರು ಮಾರುಕಟ್ಟೆ ಸ್ಥಿತ್ಯಂತರ ಗಳ ಬಗ್ಗೆ ಷೇರು ಮಾರ್ಕೆಟ್ ರೆಗ್ಯುಲೇಟರಿ ನೋಡಿಕೊಳ್ಳಲಿದೆ. ಸೂಕ್ಷ್ಮ ವಾಗಿ ಪರಿಸ್ಥಿತಿ ಅವಲೋಕನ ಮಾಡಲಿದೆ. ಈಗಾಗಲೇ ಎಸ್ ಬಿಐ ಮತ್ತು ಎಲ್ ಐಸಿ ಯವರು ತಮ್ಮ ಅಭಿಪ್ರಾಯ ಕೊಟ್ಟಿದ್ದಾರೆ. ತಮ್ಮ ಹಣಕ್ಕೆ ತೊಂದರೆ ಇಲ್ಲ ಎಂದಿದ್ದಾರೆ. ರೆಗ್ಯುಲೇಟರಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಪ್ರಧಾನಿ ಮೋದಿ ಟೀಕಿಸಲು ಅದಾನಿ ಕಂಪನಿ ಷೇರು ಕುಸಿತ ಪ್ರಕರಣ ಬಳಕೆ ಆಗ್ತಿದೆಯಾ ಎಂಬ ವಿಚಾರ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮಾಜಿ ಸಿಎಂ B.S.ಯಡಿಯೂರಪ್ಪ ನಮ್ಮ ಪರಮೋಚ್ಚ ನಾಯಕ. ನಮ್ಮ ಪಕ್ಷದಲ್ಲಿ ಬಿಎಸ್ವೈ ಅತ್ಯಂತ ಹಿರಿಯ ನಾಯಕರಾಗಿದ್ದಾರೆ. ಬಿಎಸ್ವೈ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಿದ್ದಾರೆ. ಹೀಗಾಗಿ ಬಿಜೆಪಿ ಎಲ್ಲಾ ನಿರ್ಧಾರಗಳಲ್ಲೂ ಪ್ರಮುಖರಾಗಿರುತ್ತಾರೆ. ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ, ಮುಂದೆ ಸಹ ನಡೆಸಿಕೊಳ್ಳುತ್ತೆ. ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಬಜೆಟ್ ಮಾತನಾಡಿದ ಪಿಯೂಷ್ ಗೋಯಲ್, ಕೇಂದ್ರ ಸರ್ಕಾರದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಯುವಕರಿಗೆ ಉದ್ಯೋಗ, ಸಮಾಜದ ಎಲ್ಲ ವಿಭಾಗಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ದೇಶದ ಅಭಿವೃದ್ಧಿಗೆ ಬೆಂಬಲ ನೀಡಿದ ಕರ್ನಾಟಕ, ಬೆಂಗಳೂರಿಗೆ ಧನ್ಯವಾದ. ನಮ್ಮ ದೇಶದಲ್ಲಿ ಯಾರೂ ಮನೆ, ಊಟ ಇಲ್ಲದೇ ಉಪವಾಸ ಇರಬಾರದು. ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಲಾಗಿದೆ. ಮೈಸೂರಿಗೆ ಎಕ್ಸ್‌ಪ್ರೆಸ್ ಹೈವೇ ನೀಡಲಾಗಿದೆ. ಇದರಿಂದ ಕೈಗಾರಿಕೆ, ಐಟಿ ಕ್ಷೇತ್ರದ ಬೆಳವಣಿಗೆಗೆ ಸಹಾಯ ಆಗಲಿದೆ. ಒಂದೊಂದು ರೂಪಾಯಿ ಸಮಾಜದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವೆಚ್ಚ. ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ತಿಳಿಸಿದರು.