ಇನ್ನೂ ಇತ್ಯರ್ಥವಾಗಿಲ್ಲ ಸಿಂಹಾಸನಕ್ಕಾಗಿ ಫೈಟ್; ದೇವೇಗೌಡರ ಜೊತೆ ಸೂರಜ್, ರೇವಣ್ಣ ಡೇ ಆ್ಯಂಡ್ ನೈಟ್ ಚರ್ಚೆ
ಹಾಸನ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಕಣಕ್ಕಿಳಿಯುವ ಅಭ್ಯರ್ಥಿ ಗೊಂದಲ ಇನ್ನೂ ಮುಕ್ತಾಯಗೊಂಡಿಲ್ಲ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಪುತ್ರ, ಎಂಎಲ್ಸಿ ಸೂರಜ್ ರೇವಣ್ಣ ಪಟ್ಟು ಹಿಡಿದಿದ್ದಾರೆ. ಅದರಂತೆ ಭವಾನಿ ಪತಿ, ಮಾಜಿ ಸಚಿವ ರೇವಣ್ಣ ಮತ್ತು ಪುತ್ರ ಸೂರಜ್ ರೇವಣ್ಣ ಅವರು ಪಕ್ಷದ ವರಿಷ್ಠ ದೇವೇಗೌಡ ಅವರ ಬೆನ್ನುಬಿದ್ದಿದ್ದಾರೆ.
ಹಾಸನ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ಗಾಗಿ ಫೈಟ್ (Hassan JDS Ticket Fight) ಮುಂದುವರಿದಿದ್ದು, ಭವಾನಿಗೆ (Bhavani Revanna) ಟಿಕೆಟ್ ನೀಡಬೇಕೆಂದು ಪತಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಮತ್ತು ಪುತ್ರ, ಎಂಎಲ್ಸಿ ಸೂರಜ್ ರೇವಣ್ಣ (Suraj Revanna) ಪಟ್ಟು ಹಿಡಿದು ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ (H.D.Deve Gowda) ಅವರ ಬೆನ್ನುಬಿದ್ದಿದ್ದಾರೆ. ನಿನ್ನೆ (ಫೆಬ್ರವರಿ 03) ಬೆಳಗ್ಗೆ ದೇವೇಗೌಡರನ್ನು ಭೇಟಿ ಮಾಡಿದ್ದ ಸೂರಜ್ ರೇವಣ್ಣ ಮಾತುಕತೆ ನಡೆಸಿದ್ದರು. ರಾತ್ರಿ ವೇಳೆ ದೇವೇಗೌಡರ ಜೊತೆ ರೇವಣ್ಣ ಅವರು ಸುದೀರ್ಘ ಮಾತುಕತೆ ನಡೆಸಿ ಹಾಸನ ಕ್ಷೇತ್ರದ ಸ್ಥಿತಿಗತಿ ಬಗ್ಗೆ ವಿವರಿಸಿದ್ದಾರೆ.
ಭವಾನಿಗೆ ಹಾಸನ ಕ್ಷೇತ್ರದ ಟಿಕೆಟ್ ಕೊಟ್ಟರೆ ಸೂಕ್ತ, ಇಲ್ಲದಿದ್ರೆ ಹಾಸನದಲ್ಲಿ ಬಿಜೆಪಿ ಬೆಳೆಯಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ವರಿಷ್ಠರ ಮುಂದೆ ರೇವಣ್ಣ ಅಭಿಪ್ರಾಯ ತಿಳಿಸಿದ್ದಾರೆ. ಚುನಾವಣೆಯಲ್ಲಿ ಮತ್ತೆ ಪ್ರೀತಮ್ ಗೌಡ ಗೆದ್ದರೆ ಜೆಡಿಎಸ್ಗೆ ಮತ್ತಷ್ಟು ಹೊಡೆತ ಬೀಳಲಿದೆ. ಪ್ರೀತಮ್ ಓಟಕ್ಕೆ ಬ್ರೇಕ್ ಹಾಕಲು ಸ್ವರೂಪ್ಗಿಂತ ಭವಾನಿ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಭವಾನಿಗೆ ಟಿಕೆಟ್ ಕೊಟ್ಟರೆ ಮುಸ್ಲಿಮರು ಜೆಡಿಎಸ್ಗೆ ಬೆಂಬಲ ನೀಡುತ್ತಾರೆ. ಇನ್ನೂ ಸಮಯವಿದೆ ಯೋಚಿಸಿ ನಿರ್ಧಾರಮಾಡಿ ಎಂದು ರೇವಣ್ಣ ಅವರು ಹೇಳಿರುವುದಾಗಿ ತಿಳಿದುಬಂದಿದೆ.
ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲು ಭವಾನಿ ಮತ್ತು ಪುತ್ರ ಸೂರಜ್ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುವ ವೇಳೆ ಕುಮಾರಸ್ವಾಮಿ ಅವರು, ಭವಾನಿ ಅವರಿಗೆ ಹಾಸನ ಸುರಕ್ಷಿತ ಕ್ಷೇತ್ರವಲ್ಲ ಎಂದಿದ್ದರು. ಇನ್ನು ಇದರಿಂದ ಅಸಮಾಧಾನಗೊಂಡಿದ್ದ ಸೂರಜ್, ದೇವೇಗೌಡರು ಟಿಕೆಟ್ ಫೈನಲ್ ಮಾಡುತ್ತಾರೆ ಎಂದು ಟಾಂಗ್ ಕೊಟ್ಟಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಭಾವುಕರಾದ ಕುಮಾರಸ್ವಾಮಿ, ಹಾಸನ ಟಿಕೆಟ್ ವಿಚಾರದಲ್ಲಿ ಶಕುನಿಗಳ ಕೈವಾಡವಿದ್ದು, ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುತ್ತೇನೆ ಎಂದಿದ್ದರು.
ಇನ್ನು, ಕುಮಾರಸ್ವಾಮಿ ಭಾವುಕರಾದ ಬೆನ್ನಲ್ಲೇ ಮೌನಮುರಿದು ಸುದ್ದಿಗೋಷ್ಠಿ ನಡೆಸಿದ್ದ ರೇವಣ್ಣ, ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಟಿಕೆಟ್ ಹಂಚಿಕೆ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ನಿರ್ಧಾರವೇ ಅಂತಿಮ. ನಾನಾಗಲಿ, ನನ್ನ ಮಕ್ಕಳಾಗಲಿ ಟಿಕೆಟ್ ಫೈನಲ್ ಮಾಡಲು ಆಗಲ್ಲ ಎಂದಿದ್ದರು. ಅದಾಗ್ಯೂ, ತಂದೆ ಮಗ ದೇವೇಗೌಡರನ್ನು ಭೇಟಿಯಾಗುತ್ತಲೇ ಇರುವುದನ್ನು ನೋಡಿದಾಗ ಹಾಸನ ಕ್ಷೇತ್ರದಿಂದ ಭವಾನಿ ಅವರಿಗೆ ಟಿಕೆಟ್ ಕೊಡಿಸಿಯೇ ಕೊಡುತ್ತೇವೆ ಎಂದು ಪಟ್ಟು ಬಿದ್ದಿರುವಂತಿದೆ.
ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:45 pm, Sat, 4 February 23